ADVERTISEMENT

ಕಡೂರು | ತಂದೆಯ ಸಾವಿನ ನೋವಿನಲ್ಲೂ ಮಾದರಿಯಾದ ಪುತ್ರ: ಉಚಿತ ಆಂಬುಲೆನ್ಸ್‌ ಸೇವೆ

ಸಾರ್ವಜನಿಕರಿಗೆ ಉಚಿತ ಆಂಬುಲೆನ್ಸ್‌ ಸೇವೆ ಒದಗಿಸಲು ಮುಂದಾದ ಕಡೂರಿನ ಮಂಜುನಾಥ್‌

ಬಾಲು ಮಚ್ಚೇರಿ
Published 13 ಜನವರಿ 2023, 5:15 IST
Last Updated 13 ಜನವರಿ 2023, 5:15 IST
ಆಂಬುಲೆನ್ಸ್‌ ಜತೆಗೆ ಮಂಜುನಾಥ್, ಚಾಲಕ ರಮೇಶ್ ಮತ್ತು ಎಸ್.ಸುಬ್ರಮಣ್ಯ
ಆಂಬುಲೆನ್ಸ್‌ ಜತೆಗೆ ಮಂಜುನಾಥ್, ಚಾಲಕ ರಮೇಶ್ ಮತ್ತು ಎಸ್.ಸುಬ್ರಮಣ್ಯ   

ಕಡೂರು: ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ಗೆ ಪರದಾಡಿದ ಮಗ, ಕೊನೆಗೆ ಹರಸಾಹಸ ಪಟ್ಟು ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯದ್ದರು. ನಂತರ ಅಲ್ಲಿಂದ ಶಿವಮೊಗ್ಗದ ಆಸ್ಪತ್ರೆಗೆ ಕರೆತಂದರು. ಎಷ್ಟು ಪ್ರಯತ್ನ ಪಟ್ಟರೂ ಕೊನೆಗೊಂದು ದಿನ ತಂದೆ ಇಹಲೋಕ ತ್ಯಜಿಸಿದರು.

ಸಕಾಲದಲ್ಲಿ ಆಂಬುಲೆನ್ಸ್‌ ಸಿಗದೆ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಾನು ಪಟ್ಟ ಪಾಡು ಮತ್ತೆ ಯಾರಿಗೂ ಬರಬಾರದು ಎಂದು ನಿರ್ಣಯಿಸಿದ ಮಗ, ಸಾರ್ವಜನಿಕರ ಬಳಕೆಗೆ ಉಚಿತವಾಗಿ ಆಂಬುಲೆನ್ಸ್‌ ಸೇವೆ ಒದಗಿಸುವ ನಿರ್ಧಾರ ಮಾಡಿದರು. ತುರ್ತು ವೈದ್ಯಕೀಯ ನೆರವು ಬೇಕಿರುವ ಬಡವರು ಏನು ಮಾಡಬೇಕು? ಅವರಿಗೆ ಅಗತ್ಯ ಬಿದ್ದ ಕೂಡಲೇ ಆಂಬುಲೆನ್ಸ್‌ ಸಿಕ್ಕಕ್ಲುಪ್ತ ಸಮಯದಲ್ಲಿ ಆಸ್ಪತ್ರೆ ತಲುಪಬಹುದಲ್ಲವೆ? ಈ ಯೋಚನೆ ಬಂದಿದ್ದು ಕಡೂರು ಪಟ್ಟಣದ ಎಲ್.ಐ.ಸಿ.ಕಚೇರಿ ಬಳಿ ಸಣ್ಣ ಟೀ ಅಂಗಡಿ ಇಟ್ಟುಕೊಂಡಿರುವ ಮಂಜುನಾಥ್ ಅವರಿಗೆ.

ಅವರ ಸಮಾನ ಮನಸ್ಕ ಸ್ನೇಹಿತರೊಡನೆ ಸೇರಿ ಒಂದು ಸುಸಜ್ಜಿತ ಆಂಬುಲೆನ್ಸ್‌ ಖರೀದಿಸಿದ್ದಾರೆ. ಅಗತ್ಯವಿದ್ದವರಿಗೆ ಯಾವುದೇ ಶುಲ್ಕವಿಲ್ಲದೆ ಸೇವೆ ಒದಗಿಸುವ ಆಶಯದಿಂದ ಅದನ್ನು ಸದಾ ಸನ್ನದ್ದವಾಗಿಟ್ಟಿದ್ದಾರೆ. ಆಂಬುಲೆನ್ಸ್‌ಗೆ ಚಾಲಕನನ್ನು ನೇಮಿಸಿದ್ದಾರೆ. ಅವರ ಸಂಬಳವನ್ನೂ ಮಂಜುನಾಥ್ ಭರಿಸುತ್ತಾರೆ. ಆಂಬುಲೆನ್ಸ್‌ ಅಗತ್ಯವಿದ್ದವರು ತಾವು ಹೋಗಬೇಕಿರುವ ಸ್ಥಳಕ್ಕೆ ಆಗುವಷ್ಟು ಇಂಧನದ ಖರ್ಚು ಮಾತ್ರ ಭರಿಸಬೇಕಿದೆ. ಉಳಿದವಂತೆ ಬೇರೆ ಯಾವ ಶುಲ್ಕವೂ ಇಲ್ಲ.

ADVERTISEMENT

ಆಂಬುಲೆನ್ಸ್‌ ಅನ್ನು ಕಡೂರು ಎಲ್ಐಸಿ ಹಿರಿಯ ವ್ಯವಸ್ಥಾಪಕ ಕೆ.ಮುಕುಂದರಾವ್ ಬುಧವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು. ‘ಮಂಜುನಾಥ್ ಅವರ ಮಾನವೀಯ ನಡೆ ಇತರರಿಗೆ ಅನುಕರಣೀಯವಾದುದು. ಅವರಿಗೆ ಇನ್ನಷ್ಟು ಹೆಚ್ಚು ಸಮಾಜ ಸೇವೆ ಮಾಡುವ ಅವಕಾಶಗಳು ಸಿಗಲಿ.ಎಲ್ಐಸಿ ಮೂಲಕ ಅವರಿಗೆ ನಮ್ಮ ಇತಿಮಿತಿಯಲ್ಲಿ ಸಹಕಾರ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.