ADVERTISEMENT

ಭಾವೈಕ್ಯತೆಯ ಸದೃಢತೆಗಾಗಿ ಪ್ರಾರ್ಥನೆ: ಸುರೇಶ್ ಜಾಕೊಬ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:56 IST
Last Updated 2 ಜನವರಿ 2026, 7:56 IST
ಕಡೂರು ಪಟ್ಟಣದ ಕಾಫಿ ಕ್ಯೂರಿಂಗ್ ರಸ್ತೆಯಲ್ಲಿರುವ ದಿ ಲೇಟರ್ ರೈನ್ ರಿವೈವಲ್ ಚರ್ಚ್‌ನಲ್ಲಿ ಹೊಸವರ್ಷ ಮತ್ತು ಕ್ರಿಸ್‌ಮಸ್ ಪ್ರಯುಕ್ತ ಸರ್ವರಿಗೂ ಒಳಿತಾಗಲಿ ಎಂದು ಫಾಸ್ಟರ್ ರೆವರೆಂಡ್‌ ಸುರೇಶ್ ಜಾಕೊಬ್ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಪ್ರಾರ್ಥನೆ ನಡೆಯಿತು
ಕಡೂರು ಪಟ್ಟಣದ ಕಾಫಿ ಕ್ಯೂರಿಂಗ್ ರಸ್ತೆಯಲ್ಲಿರುವ ದಿ ಲೇಟರ್ ರೈನ್ ರಿವೈವಲ್ ಚರ್ಚ್‌ನಲ್ಲಿ ಹೊಸವರ್ಷ ಮತ್ತು ಕ್ರಿಸ್‌ಮಸ್ ಪ್ರಯುಕ್ತ ಸರ್ವರಿಗೂ ಒಳಿತಾಗಲಿ ಎಂದು ಫಾಸ್ಟರ್ ರೆವರೆಂಡ್‌ ಸುರೇಶ್ ಜಾಕೊಬ್ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಪ್ರಾರ್ಥನೆ ನಡೆಯಿತು   

ಕಡೂರು: ಭಾರತ ದೇಶವು ಭಾವೈಕ್ಯತೆಯಿಂದ ಕೂಡಿದ್ದು ಹಿಂದೂ, ಕ್ರಿಶ್ಚಿಯನ್‌ ಮತ್ತು ಮುಸ್ಲಿಂಮರು ಸಮನ್ವಯತೆಯಿಂದ ಬದುಕುತ್ತಿದ್ದಾರೆ. ದೇಶದ ಒಳಿತಿಗಾಗಿ ಹೊಸವರ್ಷ ಮತ್ತು ಕ್ರಿಸ್‌ಮಸ್ ಹಬ್ಬದ ಸಂದರ್ಭವಾಗಿ ಪ್ರಾರ್ಥನೆ ಮಾಡಲಾಗಿದೆ ಎಂದು ಕಡೂರಿನ ‘ದಿ ಲೇಟರ್ ರೈನ್ ರಿವೈವಲ್ ಚರ್ಚ್‌’ನ ಫಾಸ್ಟರ್ ರೆವರೆಂಡ್‌ ಸುರೇಶ್ ಜಾಕೊಬ್ ತಿಳಿಸಿದರು.

ಪಟ್ಟಣದ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ಕಾಫಿ ಕ್ಯೂರಿಂಗ್ ರಸ್ತೆಯಲ್ಲಿರುವ ಲೇಟರ್ ರೈನ್ ರಿವೈವಲ್ ಚರ್ಚ್‌ನಲ್ಲಿ ಬುಧವಾರ ರಾತ್ರಿ ಹೊಸವರ್ಷ 2026ಕ್ಕೆ ಸ್ವಾಗತ ಮತ್ತು ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಪ್ರಾರ್ಥನೆಯಲ್ಲಿ ಅವರು ಸಂದೇಶ ನೀಡಿದರು.

‘ಕ್ರಿ.ಪೂ 400ರಲ್ಲಿ ಪ್ರವಾದಿ ಏಸಾಯ ನುಡಿದಂತೆ ಮರಿಯಾಳ ಹೊಟ್ಟೆಯಲ್ಲಿ ಶಾಂತಿದೂತರಾಗಿ ಬಾಲ ಯೇಸು ಜನಿಸಿದರು. ಜಗತ್ತಿನಲ್ಲಿ ಶಾಂತಿ, ಕರುಣೆ, ದಯೆ ನೆಲೆಸುವ ಸಲುವಾಗಿ ತಮ್ಮನ್ನೇ ಅರ್ಪಿಸಿಕೊಂಡರು. ಯೇಸು ಪ್ರಭುವು ಜಗದ ಸಮಸ್ತ ಜನರಿಗೆ ಸಂತೋಷ, ರಕ್ಷಣೆ ನೀಡಲಿ ಎನ್ನುವ ಉದ್ದೇಶದಿಂದ ಪ್ರಾರ್ಥಿಸಿದ್ದೇವೆ. ಕಳೆದ ವರ್ಷದಲ್ಲಿ ಜನರು ಅನುಭವಿಸಿರಬಹುದಾದ ಸಂಕಷ್ಟ, ನೋವುಗಳು ದೂರವಾಗಿ, ಹೊಸ ವರ್ಷದಲ್ಲಿ ಸುಖ–ಸಂತೋಷದಿಂದ ಇದ್ದು, ಶ್ರಮಜೀವಿಗಳಾಗಿ ದುಡಿದು ಸುಖಕರವಾಗಿ ಜೀವನ ಸಾಗಿಸಲಿ ಎಂಬುದು ಆಶಯವಾಗಿದೆ. ಕಡೂರಿನ ನಾಗರಿಕರು, ಗ್ರಾಮೀಣ ಜನರು ಉತ್ತಮರಾಗಿದ್ದು, ಇಲ್ಲಿನ ಶ್ರಮ ಜೀವಿಗಳಿಗಾಗಿ ಪ್ರಾರ್ಥನೆ ಮಾಡುತ್ತೇವೆ. ಹದಿ ಹರೆಯದ ಬಾಲಕಿಯರು ಕಣ್ಮರೆಯಾಗುತ್ತಿರುವುದು ಹೆಚ್ಚಾಗಿದ್ದು ಅವರಿಗೆ ಯಾವುದೇ ತೊಂದರೆಯಾಗದೆ ಮನೆಗೆ ಕ್ಷೇಮವಾಗಿ ಬರಲಿ, ಕೃಷಿಯಲ್ಲಿ ರೈತರಿಗೆ ಒಳಿತಾಗಲಿ, ಯುವಜನರು ಉತ್ತಮವಾಗಿ ವಿದ್ಯಾಭ್ಯಾಸ ನಡೆಸಲಿ ಮತ್ತು ಎಲ್ಲರಿಗೂ ಶುಭವಾಗಲಿ ಎಂದು ಆ ದೇವರು ಯೇಸುವಿನಲ್ಲಿ ಪ್ರಾರ್ಥಿಸುತ್ತೇವೆ’ ಎಂಬ ಸಂದೇಶ ನೀಡಿದರು.

ADVERTISEMENT

ಬುಧವಾರ ರಾತ್ರಿ ವಿಶೇಷ ಪ್ರಾರ್ಥನೆ ಸಲುವಾಗಿ ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಆರ್.ಮಂಜುನಾಥ್ (ಥಾಮಸ್), ಚಂದ್ರಪ್ಪ, ರವಿ ಆಟೊ, ಪ್ರಶಾಂತ್, ಕುಮಾರ್, ಸೋಮು, ರಾಧಮ್ಮ, ಹೇಮ ಮತ್ತು ಸುಕನ್ಯ ಹಾಗೂ ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.