ಆಲ್ದೂರು: ಸಮೀಪದ ಕಣತಿ ನರುಡಿ ಗ್ರಾಮದ ಬಳಿ ಮರವೊಂದರಲ್ಲಿ ಈಚೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಕಂಡ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಆದರೆ, ವ್ಯಕ್ತಿಯ ಮೃತದೇಹವನ್ನು ಕೆಳಗೆ ಇಳಿಸಲು ಮತ್ತು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ನೆರವಾಗಿದ್ದು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು.
ಇದೊಂದು ಉದಾಹರಣೆಯಷ್ಟೇ. ನೀರಿನಲ್ಲಿ ಮುಳುಗಿ ಮೃತಪಟ್ಟವರ ಶವ ಮೇಲೆತ್ತುವುದು, ಮಳೆಗಾಲದಲ್ಲಿ ಮನೆ, ರಸ್ತೆಗಳ ಮೇಲೆ ಬೀಳುವ ಮರಗಳ ತೆರವು ಕಾರ್ಯ, ಕಾಳ್ಗಿಚ್ಚು ತಡೆ, ಶಾಲೆ, ಆಸ್ಪತ್ರೆ, ಧಾರ್ಮಿಕ ಕೇಂದ್ರಗಳ ಆವರಣ ಸ್ವಚ್ಛತೆ, ರಸ್ತೆ ಅಪಘಾತವಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿರುವುದು, ರಸ್ತೆ ಗುಂಡಿ ರಿಪೇರಿ, ರಕ್ತದಾನ, ಆರ್ಥಿಕ ನೆರವು, ಹಾವು, ವನ್ಯ ಪ್ರಾಣಿಗಳ ರಕ್ಷಣೆ, ವೃದ್ಧರಿಗೆ ವಾತ್ಸಲ್ಯ ಮನೆ ನಿರ್ಮಾಣ... ಹೀಗೆ ಯಾವುದೇ ವಿಪತ್ತು ಬಂದರೂ ಸ್ಥಳೀಯರಿಗೆ ಇವರೇ ಆಪದ್ಬಾಂಧವರು.
‘ಯಾವುದೇ ಸಮಾಜಮುಖಿ ಕಾರ್ಯವಿರಲಿ, ನಮ್ಮ ತಂಡದ ಸದಸ್ಯರು ಅಲ್ಲಿ ಹಾಜರಿರುತ್ತಾರೆ. ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಸಬೇಕು ಎನ್ನುವುದರ ಕುರಿತು ತರಬೇತಿ ಪಡೆದಿರುವ ಪರಿಣತರು ತಂಡದಲ್ಲಿದ್ದಾರೆ. ಘಟಕದ ಮೂಲಕ ನಾಲ್ಕು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ ಹಾಂದಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಅಣ್ಣಪ್ಪ ನಾಯರ್.
‘ಗಾರೆ ಕೆಲಸ, ಮರ ಕೆಲಸ, ಆಟೊ ಚಾಲಕರು, ಟೈಲರ್ ವೃತ್ತಿ ಮಾಡುವರು, ದಿನಗೂಲಿ ಕಾರ್ಮಿಕರು ಹೀಗೆ ಬೇರೆ ಬೇರೆ ವೃತ್ತಿಗಳನ್ನು ಮಾಡುವರು, ಸಮಾಜ ಸೇವೆ ಮಾಡುವ ಉದ್ದೇಶದಿಂದ ನಮ್ಮ ತಂಡದ ಜತೆಗೆ ಗುರುತಿಸಿಕೊಂಡಿದ್ದಾರೆ. ತುರ್ತು ಸಂದರ್ಭ ಬಂದಾಗ ತ್ವರಿತವಾಗಿ ಸ್ಪಂದಿಸುತ್ತಾರೆ’ ಎನ್ನುತ್ತಾರೆ ಅವರು.
ಹಾಂದಿ ಘಟಕದಲ್ಲಿ ಪ್ರತಾಪ್, ರಾಕೇಶ್, ಅಭಿಲಾಶ್ ಎಂಬ ಮೂವರು ಮುಳುಗು ತಜ್ಞರು ಇದ್ದು, ಕಡೂರು, ಗೋಣಿಬೀಡು, ಆಲ್ದೂರು ಮುಂತಾದ ಕಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದ್ದಾರೆ. ಮೂಡಿಗೆರೆಯ ಕಸಬಾ ಶೌರ್ಯ ವಿಪತ್ತು ನಿರ್ವಹಣಾ ಘಟಕವು ಶ್ರಮದಾನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಅವರು ಹೇಳಿದರು.
‘ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬಿದ್ದ ಸಂದರ್ಭಗಳಲ್ಲಿ, ಮಳೆಗಾಲದಲ್ಲಿ ರಸ್ತೆಗೆ ಮರ ಉರುಳಿದಾಗ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಒದಗಿಸಿದ ಸಹಾಯವನ್ನು ಮರೆಯುವಂತಿಲ್ಲ’ ಎಂದು ಹಾಂದಿ ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ರಕ್ಷಣಾ ಕಾರ್ಯಾಚರಣೆ ಸವಾಲು. ಇಂಥ ಸಂದರ್ಭಗಳಲ್ಲಿ ಮಳೆ, ಗಾಳಿ, ಬಿಸಿಲು ಅಪಾಯ ಲೆಕ್ಕಿಸದೆ ದುರ್ಗಮ ಪ್ರದೇಶಗಳಲ್ಲೂ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಜತೆಗೆ ನಿಂತು ಕಾರ್ಯನಿರ್ವಹಿಸುತ್ತಿರುವುದು ಈ ತಂಡದ ಹೆಗ್ಗಳಿಕೆ.
ಇತ್ತೀಚೆಗೆ ಟ್ರಾಫಿಕ್ ಬ್ಯಾರಿಕೇಡ್‌ಗಳಿಗೆ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಬಣ್ಣ ಬಳಿದು ಕೊಟ್ಟಿದ್ದಾರೆ. ಇಂತಹ ಸಮಾಜಮುಖಿ ಚಿಂತನೆಯುಳ್ಳ ಸೇವಾ ಘಟಕಗಳ ಕೊಡುಗೆ ಅಮೂಲ್ಯ’ ಎಂದು ಪಿಎಸ್ಐ ಅಕ್ಷಿತಾ ಕೆ.ಪಿ. ಹೇಳಿದರು.
Quote - ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಮಾಜಿಕ ಸೇವಾ ಮನೋಭಾವ ಹೊಂದಿರುವವರಿಗೆ ವಿಶೇಷ ಕೌಶಲ ತರಬೇತಿ ನೀಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದೆ ಶಿವಾನಂದ್ ತಾಲ್ಲೂಕು ಯೋಜನಾಧಿಕಾರಿ
Cut-off box - ಎನ್‌ಡಿಆರ್‌ಎಫ್‌ನಿಂದ ತರಬೇತಿ ಮೂಡಿಗೆರೆ ತಾಲ್ಲೂಕಿನಲ್ಲಿ 2020ರಲ್ಲಿ ಘಟಕ ಆರಂಭಿಸಲಾಗಿದ್ದು ತುರ್ತು ಸಂದರ್ಭಗಳಲ್ಲಿ ಅರಣ್ಯ ಪೊಲೀಸ್ ಹಾಗೂ ಇತರ ಇಲಾಖೆಗಳೊಂದಿಗೆ ಒಟ್ಟುಗೂಡಿ ಕಾರ್ಯನಿರ್ವಹಿಸುತ್ತೇವೆ. ಎನ್‌ಡಿಆರ್‌ಎಫ್ ಮೂಲಕ 516 ಸ್ವಯಂಸೇವಕರಿಗೆ ಕಾರ್ಯಾಗಾರ ಏರ್ಪಡಿಸಿ ಕೌಶಲ ತರಬೇತಿ ನೀಡಲಾಗಿದೆ. ಸದ್ಯ ತಾಲ್ಲೂಕಿನಲ್ಲಿ 90 ಸ್ವಯಂಸೇವಕರಿದ್ದು ಹೆಸ್ಗಲ್ ಘಟಕದಲ್ಲಿ 14 ಆಲ್ದೂರು ಘಟಕದಲ್ಲಿ 18 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲ್ಲೂಕು ಮಾಸ್ಟರ್ ಪ್ರವೀಣ್ ಪೂಜಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.