ADVERTISEMENT

ಚಿಕ್ಕಮಗಳೂರು: ಸಮುದಾಯ ಆರೋಗ್ಯ ಕೇಂದ್ರ; ತಜ್ಞ ವೈದ್ಯರ ಕೊರತೆ

ಕಳಸ, ಅಜ್ಜಂಪುರ, ಪಂಚನಹಳ್ಳಿಯಲ್ಲಿ ಹೆಚ್ಚು ಹುದ್ದೆ ಖಾಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:22 IST
Last Updated 5 ಅಕ್ಟೋಬರ್ 2025, 4:22 IST
   

ವಿಜಯಕುಮಾರ್ ಎಸ್.ಕೆ.

ಚಿಕ್ಕಮಗಳೂರು: ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದ್ದು, ಮಲೆನಾಡು ಭಾಗದಲ್ಲಿ ವೈದ್ಯರಿಲ್ಲವಾಗಿದೆ. ಅದರಲ್ಲೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ(ಸಿಎಚ್‌ಸಿ) ತಜ್ಞ ವೈದ್ಯರೇ ಇಲ್ಲವಾಗಿದೆ.

ಜಿಲ್ಲೆಯ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಟ್ಟು 178 ವೈದ್ಯ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 26 ಹುದ್ದೆಗಳು ಖಾಲಿ ಇವೆ. ಖಾಲಿ ಇರುವುದು ಬಹುತೇಕ ತಜ್ಞ ವೈದ್ಯರ ಹುದ್ದೆಗಳು. 21 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ.

ADVERTISEMENT

ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ ಸೇರಿ ಮಲೆನಾಡು ಭಾಗದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ತಾಲ್ಲೂಕು ಕೇಂದ್ರವಾಗಿರುವ ಕಳಸ ಸಮದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾಗಿರುವ ಐವರು ತಜ್ಞ ವೈದ್ಯರ ಹುದ್ದೆಗಳಲ್ಲಿ ನಾಲ್ಕು ಹುದ್ದೆಗಳು ಖಾಲಿ ಇವೆ. ಮೂಡಿಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ 11 ತಜ್ಞ ವೈದ್ಯರ ಹುದ್ದೆಗಳಿದ್ದು, ಮೂರು ಹುದ್ದೆಗಳು ಖಾಲಿ ಇವೆ.  ಶೃಂಗೇರಿ ತಾಲ್ಲೂಕು ಆಸ್ಪತ್ರೆಯಲ್ಲಿ 5 ತಜ್ಞ ವೈದ್ಯರ ಹುದ್ದೆಗಳ ಪೈಕಿ 3 ಹುದ್ದೆಗಳು ಖಾಲಿ ಇವೆ.

ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ ಬಯಲು ಸೀಮೆಯಾದ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ 5 ತಜ್ಞ ವೈದ್ಯರ ಹುದ್ದೆಗಳಲ್ಲಿ ಎರಡು ಹುದ್ದೆ ಮಾತ್ರ ಭರ್ತಿಯಾಗಿವೆ. ತಾಲ್ಲೂಕು ಕೇಂದ್ರವಾಗಿರುವ ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಲ್ಕು ತಜ್ಞ ವೈದ್ಯರ ಪೈಕಿ ಮೂರು ಹುದ್ದೆಗಳು ಖಾಲಿ ಇವೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಮಾನ್ಯ ಕರ್ತವ್ಯ ವೈದ್ಯರನ್ನು(ಎಂಬಿಬಿಎಸ್) ನೇಮಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 74 ಹುದ್ದೆಗಳು ಮಂಜೂರಾಗಿದ್ದು, 72 ಹುದ್ದೆಗಳು ಭರ್ತಿಯಾಗಿ 2 ಹುದ್ದೆ ಮಾತ್ರ ಖಾಲಿ ಇವೆ.

ಮಲೆನಾಡು ಭಾಗದಲ್ಲಿ ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಬಡವರು ನೂರಾರು ಕಿಲೋ ಮೀಟರ್ ದೂರ ಕ್ರಮಿಸಬೇಕಾದ ಸ್ಥಿತಿ ಇದೆ. ಇಲ್ಲವೆ ದುಬಾರಿ ಹಣ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.