ADVERTISEMENT

‘ಪುನರ್ವಸತಿ, ಪರಿಹಾರ: ಹೊಸ ಮೌಲ್ಯಮಾಪನ ಮಾಡಿ‘

ಹೋರಾಟ ಸಮಿತಿಯಿಂದ ಶಾಸಕ ಟಿ.ಡಿ.ರಾಜೇಗೌಡಗೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:59 IST
Last Updated 29 ಅಕ್ಟೋಬರ್ 2025, 3:59 IST
ಶೃಂಗೇರಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ ವಸತಿ ಹೋರಟ ಸಮಿತಿಯವರು ಬಾಸಪುರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಭೇಟಿ ಮಾಡಿ ಕುದುರೆಮುಖ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಆಗಿತ್ತಿರುವ ಅನ್ಯಾಯವನ್ನು ತಡೆಗಟ್ಟುವಂತೆ ಮನವಿ ನೀಡಿದರು 
ಶೃಂಗೇರಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ ವಸತಿ ಹೋರಟ ಸಮಿತಿಯವರು ಬಾಸಪುರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಭೇಟಿ ಮಾಡಿ ಕುದುರೆಮುಖ ವ್ಯಾಪ್ತಿಯ ಮೂಲ ನಿವಾಸಿಗಳಿಗೆ ಆಗಿತ್ತಿರುವ ಅನ್ಯಾಯವನ್ನು ತಡೆಗಟ್ಟುವಂತೆ ಮನವಿ ನೀಡಿದರು    

ಶೃಂಗೇರಿ: ‘ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ 2003ರಲ್ಲಿ ಘೋಷಣೆಯಾಗಿದ್ದು, ಇಲ್ಲಿನ ಮೂಲ ನಿವಾಸಿಗಳಿಗೆ 2008ರ ಒಳಗೆ ಪುನರ್ವಸತಿ ಮತ್ತು ಪರಿಹಾರ ಒದಗಿಸಲು ಸರ್ಕಾರ ಆದೇಶಿಸಿತ್ತು. ಕೆಲವರಿಗೆ ಇದುವರೆಗೂ ಪರಿಹಾರ ನೀಡದೆ, 2025ರಲ್ಲಿ 2005ರ ಮೌಲ್ಯಮಾಪನ ಮಾಡಿದ ಪರಿಹಾರವನ್ನು ನೀಡಲು ಹೊರಟಿದ್ದಾರೆ. ಇದರಿಂದ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ’ ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ವಸತಿ ಹೋರಾಟ ಸಮಿತಿಯ ನೆಮ್ಮಾರ್ ದಿನೇಶ್ ಹೆಗ್ಡೆ ಹೇಳಿದರು.

ಶೃಂಗೇರಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ವಸತಿ ಹೋರಾಟ ಸಮಿತಿಯವರು ಬಾಸಪುರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಭೇಟಿ ಮಾಡಿ ಕುದುರೆಮುಖದ ಮೂಲ ನಿವಾಸಿಗಳಿಗೆ ನ್ಯಾಯ ಒದಗಿಸುವಂತೆ ಮನವಿ ನೀಡಿ ಮಾತನಾಡಿದರು.

‘2008ರ ಒಳಗೆ ಎಲ್ಲ ಕುಟುಂಬಗಳಿಗೆ ಪುನರ್ವಸತಿ ನೀಡುವುದಾಗಿ 2005ರಲ್ಲಿ ಸರ್ಕಾರದಿಂದ ಅನುಮತಿ ಪಡೆದಾಗ ಹೇಳಿದ್ದರು. ಆದರೆ, ಇದುವರೆಗೂ ಪರಿಹಾರ ನೀಡಿಲ್ಲ. ಹಣದ ಮೌಲ್ಯ ಕಾಲ ಕಾಲಕ್ಕೆ ಶೇ 5ರಿಂದ 6ರಷ್ಟು ಏರಿಕೆಯಾಗುತ್ತಿದ್ದು, ಭೂಮಿಯ ಬೆಲೆಯೂ ಹೆಚ್ಚಾಗಿದೆ. ಈಗ ನೀಡುತ್ತಿರುವ ಪುನರ್ವಸತಿ ಮೌಲ್ಯದಿಂದ ಹಲವು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿಯಿದೆ. ಸರ್ಕಾರದ ಯೋಜನೆಗಾಗಿ ಮೂಲ ನಿವಾಸಿಗಳು ಕಟ್ಟಿಕೊಂಡಿದ್ದ ಬದುಕನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. 2005ರ ಪುನರ್ವಸತಿ ಪ್ಯಾಕೇಜ್‌ನಲ್ಲಿ ನೀಡಿದ್ದ ಎಲ್ಲ ಮೌಲ್ಯಗಳನ್ನು 2025ರ ಮಾರುಕಟ್ಟೆ ದರಕ್ಕೆ ಹೋಲಿಕೆ ಮಾಡಿ, ಆದೇಶಗಳನ್ನು ಪುನರ್ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ.ರಮೇಶ್ ಭಟ್ ಮಾತನಾಡಿ, ‘ಪುನರ್ವಸತಿ ಹೊಂದುವ ಪ್ರತಿ ಕುಟುಂಬಕ್ಕೆ ಕನಿಷ್ಠ ₹50 ಲಕ್ಷ ಮೂಲ ಪರಿಹಾರ ಪ್ಯಾಕೇಜ್ ನೀಡಬೇಕು. 2005ರ ಸರ್ಕಾರಿ ಆದೇಶದಲ್ಲಿ ಹೇಳಿರುವಂತೆ ಅಕ್ರಮ ಸಾಗುವಳಿದಾರರು, ಅರಣ್ಯ ಒತ್ತುವರಿ ಸಾಗುವಳಿದಾರರ ಎಲ್ಲ ಬೆಳೆಗಳಿಗೆ ಮೌಲ್ಯಮಾಪನ ಮಾಡಿ ಪರಿಹಾರ ನೀಡಬೇಕು. ವಾಸದ ಮನೆಗಳಿಗೆ ಈ ಸ್ವತ್ತು ಇಲ್ಲ. ಇಂಥ ಪ್ರಕರಣಗಳನ್ನು ಸರಳೀಕರಿಸಿ ಹಕ್ಕು ಪರಿತ್ಯಾಜನ ಪತ್ರದ ಮೂಲಕ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಮಾತೋಳ್ಳಿ ಸುನೀಲ್ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಭೂ ಒಡೆತನ ಯೋಜನೆ ಅಡಿ ಭೂಮಿ ನೀಡಬೇಕು. ಪುನರ್ವಸತಿ ಪರಿಹಾರ ಮೌಲ್ಯಮಾಪನ ಸಮಿತಿಯಲ್ಲಿ ಸ್ಥಳೀಯ ಜನ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು. ಪುನರ್ವಸತಿ ಹೊಂದುವ ಎಲ್ಲ ಕುಟುಂಬಗಳಿಗೂ ನಿರಾಶ್ರಿತರು ದೃಢೀಕರಣ ಪತ್ರ ನೀಡಬೇಕು. ಪ್ರತಿ ಕುಟುಂಬಕ್ಕೂ ಒಂದು ಸರ್ಕಾರಿ ಹುದ್ದೆ, ವಿದ್ಯಾಭ್ಯಾಸ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು’ ಎಂದರು.

ಸಮಿತಿಯ ಕೃಷ್ಣಪ್ಪ, ಹೊಲ್ಮ ದಿನೇಶ್, ಪ್ರದೀಪ್ ಕೂಳೆಗದ್ದೆ, ಸುಬ್ರಹ್ಮಣ್ಯ ಹಾದಿ, ಸುಂದರೇಶ್ ಮಂಡಗದ್ದೆ, ಪ್ರದೀಪ್ ಕೂಳೆಗದ್ದೆ, ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ನಿಯೋಗ ತೆರಳೋಣ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಒಳಗಿರುವ ಜನರ ಸಮಸ್ಯೆಗಳನ್ನು ನೇರವಾಗಿ ನೋಡಿದ್ದೇನೆ. ಶಾಸಕನಾಗಿಲ್ಲದ ಸಮಯದಲ್ಲಿ ವಿವಿಧ ಹೋರಾಟಗಳಲ್ಲಿ ಭಾಗಿವಹಿಸಿದ್ದೇನೆ. ಈ ಸಮಸ್ಯೆಯನ್ನು ಬಗೆಹರಿಸಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅರಣ್ಯ ಸಚಿವ ಮತ್ತು ಕಂದಾಯ ಸಚಿವರ ಬಳಿ ನಿಯೋಗ ತೆರಳೋಣ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಹೊಸ ದರ ಅನ್ವಯಿಸಿ

ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುವ ಹಲವು ರೈತರು ಅರಣ್ಯ ಹಕ್ಕು ಕಾಯ್ದೆ ಅಡಿ ಭೂಮಿ ಪಡೆದಿದ್ದಾರೆ. ಅವರಿಗೆ ಪಹಣಿಯಲ್ಲಿ ನಮೂದು ಆಗಿಲ್ಲ. ಅವರಿಗೂ ಪರಿಹಾರ ನೀಡಬೇಕು. ಈಗಾಗಲೇ ಜಿಲ್ಲಾ ಸಮಿತಿಯಲ್ಲಿ ಅನುಮೋದನೆಗೊಂಡ ಮತ್ತು ಪರಿಹಾರ ನೀಡಲು ಬಾಕಿ ಇರುವ ಪ್ರಕರಣಗಳನ್ನು ಮತ್ತು ಮೌಲ್ಯಮಾಪನ ಸಂಪೂರ್ಣಗೊಂಡು ಜಿಲ್ಲಾ ಸಮಿತಿಯ ಅನುಮೋದನೆಗೆ ಬಾಕಿ ಇರುವ ಪ್ರಕರಣಗಳಿಗೆ 2025‌ರ ಹೊಸ ದರ ಅನ್ವಯಿಸುವಂತೆ ಮಾಡಬೇಕು. ತೋಟಗಾರಿಕೆ ಇಲಾಖೆಯ ಬೆಳೆಗಳ ಮೌಲ್ಯಮಾಪನ ವೇಳೆಯಲ್ಲಿ ರೈತರು ಬೆಳೆದ ಎಲ್ಲ ಮಾದರಿಯ ಬೆಳೆಗಳಿಗೆ ಗ್ರೇಡ್ 1 ದರ್ಜೆ ನೀಡಬೇಕು ಎಂದು ಸಮಿತಿಯ ಪ್ರದೀಪ್ ಕೂಳೆಗದ್ದೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.