ಶೃಂಗೇರಿ: ತಾಲ್ಲೂಕಿನಲ್ಲಿ ಈ ವರ್ಷ ಅತಿಯಾದ ಮಳೆಯಿಂದ ಅಡಿಕೆ, ಕಾಫಿ, ಕಾಳು ಮೆಣಸಿಗೆ ಕೊಳೆರೋಗ ಬಂದಿದೆ. ಒಮ್ಮೆ ಸಿಂಪರಣೆ ಮಾಡಿದ್ದ ಔಷಧಿ ಮಳೆ ತೊಳೆದಿದ್ದರಿಂದ ಮತ್ತೊಮ್ಮೆ ಔಷಧಿ ಸಿಂಪರಣೆ ರೈತರಿಗೆ ಅನಿವಾರ್ಯವಾಗಿದೆ.
ಮೇ 15ರಿಂದ ಪೂರ್ವ ಮುಂಗಾರು ಮಳೆ ಆರಂಭಗೊಂಡಿತ್ತು. 15 ದಿವಸದಲ್ಲಿ 41 ಸೆಂಟಿ ಮೀಟರ್ ಮಳೆಯಾಗಿದ್ದರಿಂದ ಅಡಿಕೆ ತೋಟದಲ್ಲಿ ಕೊಳೆರೋಗ ನಿಯಂತ್ರಣ ಔಷಧಿ ಸಿಂಪಡಣೆಗೆ ಅಡ್ಡಿಯಾಗಿತ್ತು. ಜೂ. 12ರಿಂದ ಮತ್ತೆ ಮುಂಗಾರು ಮಳೆ ಜೋರಾಯಿತು. ಆದರೂ ಕೆಲವು ರೈತರು ಒಂದು ಬಾರಿ ಔಷಧಿ ಸಿಂಪಡಿಸಿದ್ದರು.
ಜನವರಿಯಿಂದ ಇಲ್ಲಿಯವರೆಗೆ ಒಟ್ಟು 311 ಸೆಂಟಿ ಮೀಟರ್ ಮಳೆಯಾಗಿದೆ. ಈ ಮೊದಲೇ ಸಿಂಪಡಿಸಿದ ಜೌಷಧಿ ವಾಯಿದೆ ಇದ್ದರೂ ಕೂಡ ಅಡಿಕೆ ಕೊನೆ, ಕಾಳು ಮೆಣಸಿನ ಬಳ್ಳಿಗಳ ಮೇಲಿನ ಎಲ್ಲಾ ಔಷಧಿಯು ಅತಿಯಾದ ಮಳೆಗೆ ತೊಳೆದು ಹೋಗಿದೆ.
ಇದರಿಂದಾಗಿ ಸಂಪೂರ್ಣ ಕೊಳೆ ರೋಗ ತಗುಲಿ ಇನ್ನೊಂದು ಬಾರಿ ಔಷಧಿ ಸಿಂಪಡಿಸುವುದು ಅನಿವಾರ್ಯವಾಗಿದೆ. ಅತಿ ಹೆಚ್ಚು ಮಳೆಯಾಗಿದ್ದರಿಂದ ತೋಟಕ್ಕೆ ಕೊಳೆ ರೋಗ ಮತ್ತಷ್ಟು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಮಳೆ ಸ್ವಲ್ಪ ಬಿಡುವು ನೀಡಿದ ನಂತರ ರೈತರು ಮತ್ತೊಮ್ಮೆ ಕೊಳೆರೋಗ ನಿಯಂತ್ರಣ ಔಷಧಿ ಸಿಂಪರಣೆಗೆ ಮುಂದಾಗಿದ್ದಾರೆ.
ಕೆರೆಕಟ್ಟೆ ಮತ್ತು ಕಿಗ್ಗಾ ಭಾಗದಲ್ಲಿ ದಟ್ಟವಾದ ಅರಣ್ಯ ಇರುವುದರಿಂದ ಮಳೆ ಪ್ರಮಾಣ ಶೃಂಗೇರಿಗಿಂತ ಮೂರು ಪಟ್ಟು ಅಧಿಕವಾಗಿರುತ್ತದೆ. ಅಲ್ಲಿನ ರೈತರ ಬದುಕು ಇನ್ನಷ್ಟು ಅತಂತ್ರವಾಗಿದೆ.
ಮತ್ತೆ ಮಳೆ ಆರಂಭವಾದರೆ ಕೊಳೆರೋಗ ಇನ್ನಷ್ಟು ವ್ಯಾಪಿಸುವ ಆತಂಕ ರೈತರಲ್ಲಿದೆ. ಆದ್ದರಿಂದ ಮಳೆ ಬಿಡುವು ನೀಡಿರುವ ಸಂದರ್ಭದಲ್ಲಿ ಔಷಧ ಸಿಂಪರಣೆಗೆ ಮಾಡುತ್ತಿದ್ದಾರೆ. ಈಗಾಗಲೇ ಕೊಳೆ ರೋಗ ವ್ಯಾಪಿಸಿರುವುದರಿಂದ ಅಡಿಕೆ, ಮೆಣಸು ಮತ್ತು ಕಾಫಿಗೆ ಬೆಳೆಯ ಫಸಲು ಕಡಿಮೆಯಾಗಿ ರೈತರ ವಾರ್ಷಿಕ ಆದಾಯಕ್ಕೆ ಕುತ್ತು ಬಂದಿದೆ.
ದುಬಾರಿಯಾದರೂ ಮೈಲುತುತ್ತದ ಮೊರೆ ತಾಲ್ಲೂಕಿನಲ್ಲಿ ಜನವರಿಯಿಂದ ಈವರೆಗೆ 311 ಸೆಂಟಿ ಮೀಟರ್ ಮಳೆ ಸತತ ಮಳೆಯಿಂದ ಅಡಿಕೆ, ಕಾಫಿ, ಕಾಳು ಮೆಣಸು ಬೆಳೆ ನಾಶ
ಜನವರಿಯಿಂದ ಮೇ ತನಕ ಬಂದ ಪೂರ್ವ ಮುಂಗಾರು ಮಳೆಯಿಂದ ಕೊಳೆರೋಗ ಉಲ್ಬಣಗೊಂಡಿದೆ. ಈ ವರ್ಷ ತೋಟದ ಬೆಳೆಗಳಿಂದ ಅರ್ಥಿಕ ಲಾಭ ನಿರೀಕ್ಷಿಸುವುದು ಕಷ್ಟಕಲ್ಕುಳಿ ವಿಠಲ್ ಹೆಗ್ಗಡೆ ಪರಿಸರವಾದಿ
ರೈತರಿಗೆ ಔಷಧ ಸಿಂಪಡಣೆ ಮಾಹಿತಿ ನೀಡಲಾಗಿದೆ. ಗುಣ ಮಟ್ಟದ ಮೈಲುತುತ್ತ ಸುಣ್ಣ ಹಾಗೂ ರಾಳ ಬಳಸಬೇಕು. ಹೆಚ್ಚಿನ ಮಾಹಿತಿಯನ್ನು ತೋಟಗಾರಿಕಾ ಇಲಾಖೆಯಿಂದ ಪಡೆಯಬಹುದುಶ್ರೀಕೃಷ್ಣ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ
ಎಲ್ಲವೂ ದುಬಾರಿ ಈ ಸಂಕಷ್ಟದ ಕಾಲದಲ್ಲಿ ದುಬಾರಿಯಾದರೂ ಮೈಲುತುತ್ತ ಬೆರೆಸಿ ಔಷಧ ಸಿಂಪಡಿಸಬೇಕಾಗಿದೆ. ಇದರೊಂದಿಗೆ ಕಾರ್ಮಿಕರ ಸಂಬಳ ಯಂತ್ರ ಮತ್ತು ಪೆಟ್ರೋಲ್ ಖರ್ಚು ಹೆಚ್ಚಿದೆ. ಔಷಧಿ ಸಿಂಪರಣೆ ಎಲ್ಲರಿಂದ ಸಾಧ್ಯವಿಲ್ಲ. ಪರಿಣಿತ ಕಾರ್ಮಿಕರೇ ಬೇಕಾಗಿದ್ದು ಎಲ್ಲ ತೋಟಗಳಲ್ಲೂ ಇದೇ ಕಾರ್ಯದಲ್ಲಿ ನಡೆಯುತ್ತಿರುವುದುರಿಂದ ಈ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ಎಕರೆಗೆ ಕನಿಷ್ಠ ₹18 ಸಾವಿರ ಹೆಚ್ಚುವರಿ ಖರ್ಚಾಗುತ್ತಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.