ಶೃಂಗೇರಿ: ಪಟ್ಟಣದ ಶಾರದಾ ನಗರದಲ್ಲಿರುವ ಮೀನು ಮಾರುಕಟ್ಟೆ ಕಟ್ಟಡವು ಮೂಲ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪರಸ್ಥರು ಕೊಳಚೆ ಪ್ರದೇಶದಲ್ಲಿ ನಿಂತು ಮೀನು ಖರೀದಿ ಮಾಡುವ ಪರಿಸ್ಥಿತಿ ಇದೆ.
ಮೀನು ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಆದಾಯವನ್ನು ಪಟ್ಟಣ ಪಂಚಾಯಿತಿಗೆ ತಂದು ಕೊಡುತ್ತಿದೆ. ಆದರೆ, ಅಲ್ಲಿ ತೆರೆದ ಸ್ಥಳದಲ್ಲಿ ಮೀನು ಮಾರಾಟ ನಿಯಂತ್ರಣವಾಗಲಿ, ಮೂಲ ಸೌಕರ್ಯಗಳಾದ ನೀರು, ನಿತ್ಯದ ಕಸ ವಿಲೇವಾರಿ, ಶೌಚಾಲಯ, ಕಟ್ಟಡಕ್ಕೆ ಸುಣ್ಣಬಣ್ಣ ಮಾಡುವುದಾಗಲಿ ಆಗುತ್ತಿಲ್ಲ. ಮೀನು ಮಾರುಕಟ್ಟೆ ಸ್ಥಳ ಬದಲಾವಣೆಗೂ ಮುಂದಾಗುತ್ತಿಲ್ಲ ಎಂಬುದು ಮೀನು ಮಾರಾಟಗಾರರ ದೂರು.
ಮೀನು ಮಾರುಕಟ್ಟೆಯ 7 ಮಳಿಗೆಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಬೀದಿದೀಪದಿಂದ ರಾತ್ರಿ ಮೀನು ವ್ಯಾಪಾರ ಮಾಡುವ ಪರಿಸ್ಥಿತಿ. ಮೀನು ದಾಸ್ತಾನು ಇಡಬೇಕಾಗಿರುವ ಅಂಗಡಿಯ ಶಟರ್‌ಗಳ ಬೀಗ ಹಾಕುವ ವ್ಯವಸ್ಥೆ ಹಾಳಾಗಿದೆ. ತ್ಯಾಜ್ಯ ಹಾಕಲು ಮುಚ್ಚಿದ ಕಸದ ತೊಟ್ಟಿ ಇಲ್ಲ. ಸಂಗ್ರಹವಾದ ಕಸವನ್ನು ಕೊಂಡೊಯ್ಯಲು ವಾಹನವೂ ಇಲ್ಲಿಗೆ ಬರುವುದಿಲ್ಲ.
ಮಳಿಗೆಯ ಸೂರಿನ ಸಿಮೆಂಟ್ ಶೀಟ್ ತುಂಡಾಗಿದ್ದು, ಮಳೆ ಬಂದಾಗ ನೀರು ಸೋರುತ್ತದೆ. ಇರುವ ಶೀಟ್ ಮಾಡಿನ ಮೇಲೆ ಹುಲ್ಲು, ಗಿಡ ಬೆಳೆದಿವೆ. ವ್ಯಾಪಾರಿಗಳು ಮೀನುಚಾಪೆ ಮೊದಲಾದ ಒಣ ಕಸವನ್ನು ಗುಡ್ಡೆ ಹಾಕಿ ಬೆಂಕಿ ಹಾಕಿದಾಗ ಇಡೀ ಪರಿಸರ ದುರ್ಗಂಧವಾಗುತ್ತದೆ.
ಮುಂದಿನ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಅಂದಾಜು ಪಟ್ಟಿ ತಯಾರಿಸಿ, ಅನುದಾನ ದೊರೆತ ಮೇಲೆ ದುರಸ್ತಿ ಮಾಡಲಾಗುವುದು. ಎಂದು ಸರಸ್ವತಿ ಷಣ್ಮುಗ ಸುಂದರಿ, ಮುಖ್ಯಾಧಿಕಾರಿ
ನಮಗೆ ಮೀನು ವ್ಯಾಪಾರ ಮಾಡಲು ಅಗತ್ಯವಾದ ನೀರು, ವಿದ್ಯುತ್, ಮಳಿಗೆಗೆ ಬೀಗದ ತಾಳ ಮತ್ತು ಒಳಚರಂಡಿ ವ್ಯವಸ್ಥೆ ಅಗತ್ಯವಾಗಿ ಬೇಕು ಎಂದು ಮೀನು ಮಾರಟಗಾರರಾದ ಮಹಮ್ಮದ್ ಅಕ್ರಂ, ಶ್ರೀಹರ್ಷ, ಅನ್ವರ್ ಬಾಷ, ಫೈರೋಜ್ ಖಾನ್, ಅಬ್ದುಲ್ ಬಶೀರ್, ಸಾದಿಕ್ ಖಾನ್, ಹಾಜಪ್ಪ, ಶಹಬುದ್ಧಿನ್ ಒತ್ತಾಯಿಸಿದ್ದಾರೆ.
‘₹5.50 ಲಕ್ಷ ಆದಾಯ’
ಪಟ್ಟಣ ಪಂಚಾಯಿತಿಯು ಮೀನು ಮಾರಾಟದ ಹಕ್ಕನ್ನು ಪ್ರತಿ ವರ್ಷ ಹರಾಜು ಹಾಕುತ್ತಿದ್ದು ಪ್ರತಿ ವರ್ಷ ಈ ಮೂಲದಿಂದ ಪಟ್ಟಣ ಪಂಚಾಯಿತಿಗೆ ಸುಮಾರು ₹5.50 ಲಕ್ಷ ಆದಾಯ ಬಂದಿದೆ ಎಂದು ಮೂಲಗಳು ತಿಳಿಸಿವೆ. ವ್ಯಾಪಾರಿಗಳು ತಮ್ಮ ದಾಸ್ತಾನನ್ನು ಕಟ್ಟಡದೊಳಗೆ ಇಡದೆ ತೆರೆದ ಪ್ರಾಂಗಣದಲ್ಲಿ ಮಾರಾಟಕ್ಕೆ ಇಡುತ್ತಿದ್ದಾರೆ. ಇದರಿಂದಾಗಿ ಶಾರದಾನಗರ ಪರಿಸರ ದುರ್ವಾಸನೆಯಾಗುತ್ತಿದೆ. ವ್ಯಾಪಾರಿಗಳು ಮಳಿಗೆ ಎದುರಿನ ಕಲ್ಲಿನ ಪ್ರಾಂಗಣದಲ್ಲಿ ಮೀನನ್ನು ಒಣ ಹಾಕುತ್ತಾರೆ. ಕಾಗೆಗಳು ಮೀನಿನ ಅವಶೇಷಗಳನ್ನು ಎತ್ತಿತಂದು ನಿವಾಸಿಗಳ ಮನೆಯಂಗಳ ಬಾವಿಗೆ ತಂದು ಹಾಕಿ ಪರಿಸರವನ್ನು ಕೊಳಕು ಮಾಡುತ್ತಿವೆ. ಮಾರುಕಟ್ಟೆ ಎದುರಿನಲ್ಲೇ ಇಂದಿರಾ ಕ್ಯಾಂಟೀನ್ ಅಂಚೆ ಕಚೇರಿ ಸಮುದಾಯ ಭವನ ಅಂಗನವಾಡಿ ಎಲ್ಲವೂ ಇವೆ. ಸಂಬಂಧಪಟ್ಟ ಇಲಾಖೆ ಇದನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.