ADVERTISEMENT

ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ವಿಧುಶೇಖರಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 4:23 IST
Last Updated 14 ಸೆಪ್ಟೆಂಬರ್ 2022, 4:23 IST
ಶೃಂಗೇರಿಯ ನರಸಿಂಹವನದ ಗುರುನಿವಾಸದಲ್ಲಿ ಶಂಕರ ತತ್ವ ಪ್ರಸಾರ ಅಭಿಯಾನದಡಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮಠದ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಶೃಂಗೇರಿಯ ನರಸಿಂಹವನದ ಗುರುನಿವಾಸದಲ್ಲಿ ಶಂಕರ ತತ್ವ ಪ್ರಸಾರ ಅಭಿಯಾನದಡಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮಠದ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.   

ಶೃಂಗೇರಿ: ‘ಶಂಕರಾಚಾರ್ಯರ ಜೀವನ ಚರಿತ್ರೆಯು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಮೂಲ್ಯವಾದ ಪಾಠವಾಗಿದೆ. ಅವರ ಜೀವನ ಚರಿತ್ರೆಯಲ್ಲಿರುವ ಕಾರ್ಯ ಶೈಲಿಯನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ವಿಧುಶೇಖರಭಾರತಿ ಸ್ವಾಮೀಜಿ ಹೇಳಿದರು.

ಶೃಂಗೇರಿಯ ನರಸಿಂಹವನದ ಗುರುನಿವಾಸದಲ್ಲಿ ಶಂಕರ ತತ್ವ ಪ್ರಸಾರ ಅಭಿಯಾನದಡಿ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಶಂಕರ ವಿಜಯ’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಲೌಕಿಕ ಜೀವನದಲ್ಲಿ ಮನುಷ್ಯನು ನೂರು ಕೋಟಿ ದುಡಿದರೂ ಹತ್ತು ಜನರು ಸೇವಿಸುವ ಆಹಾರವನ್ನು ಒಬ್ಬನೇ ತಿನ್ನಲು ಸಾಧ್ಯವಿಲ್ಲ. ಎಲ್ಲವೂ ನನಗೆ ಬೇಕು, ನಾನು ಯಾರಿಗೂ ಸಹಾಯ ಮಾಡುವುದಿಲ್ಲ ಎಂಬ ಸ್ವಾರ್ಥಪರ ಚಿಂತನೆಯನ್ನು ದೂರವಿಡಬೇಕು. ಎಷ್ಟು ಬೇಕೋ ಅಷ್ಟನ್ನು ಮಾತ್ರ ನಾವು ವಿನಿಯೋಗಿಸಿ ಉಳಿದ ಸಂಪಾದನೆ
ಯನ್ನು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಆಗ ಮಾತ್ರ ಮನುಷ್ಯ ಎತ್ತರಕ್ಕೆ ಬೆಳೆಯಲು ಸಾಧ್ಯ’ ಎಂದರು.

ADVERTISEMENT

‘ಮಕ್ಕಳು ತಂದೆ, ತಾಯಿ ಮತ್ತು ಗುರುಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು. ನಮ್ಮ ಜೀವನದಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಶಂಕರರು ಮಾತೃ ದೇವೋಭವ ಎಂಬ ಮೌಲ್ಯವನ್ನು ಸ್ವತಃ ಆಚರಿಸಿ ಜಗತ್ತಿಗೆ ಸಾರಿದ್ದಾರೆ. ಅವರ ಜೀವನ ಚರಿತ್ರೆ ಮನುಷ್ಯನ ಬುದ್ಧಿಶೀಲತೆ, ಯೋಗ್ಯತೆಗೆ ಮಾರ್ಗದರ್ಶನ ನೀಡಲು ಸಹಕಾರಿ’ ಎಂದು ಹೇಳಿದರು.

ಮನುಷ್ಯನಿಗೆ ಆನೆಯಷ್ಟು ಬಲವಿಲ್ಲ. ಹಕ್ಕಿಯಂತೆ ಹಾರಲು ಸಾಧ್ಯವಿಲ್ಲ. ಮೀನಿನಂತೆ ಸಮುದ್ರದಲ್ಲಿ ಈಜಾಡಲು ಆಗುವುದಿಲ್ಲ. ಆದರೆ, ಬುದ್ಧಿಶಕ್ತಿಯಿಂದ ವಿಮಾನ ಕಂಡು ಹಿಡಿದಿದ್ದಾನೆ. ತಂತ್ರಜ್ಞಾನದಿಂದ ಈಜಾಡುವ ಪರಿಕರಗಳನ್ನು ಕಂಡುಹಿಡಿದಿದ್ದಾನೆ. ಪಂಚಭೂತಗಳು ಭಗವಂತನ ಸೃಷ್ಟಿ. ಸಂಸ್ಕಾರವನ್ನು ರೂಪಿಸಿಕೊಂಡಾಗ ಮಾತ್ರ ಮಾಡುವ ಕಾರ್ಯಗಳು ಸರ್ವರಿಗೂ ಸದ್ವಿನಿಯೋಗವಾಗುತ್ತವೆ ಎಂದು ಶ್ರೀಗಳು ಹೇಳಿದರು.

ಸ್ಪರ್ಧೆಯಲ್ಲಿ 1,400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿ ಆದಿತ್ಯ ಡಿ. ಯಾಜಿ (ಪ್ರಥಮ ₹ 5,000), ದರ್ಶಿನಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿನಿ ಗಾಯತ್ರಿ ಕೆ.ಎಸ್ (ದ್ವಿತೀಯ ₹ 3,500), ಜ್ಞಾನಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಮನೀಷಾ ಜಿ. ಭಟ್ (ತೃತೀಯ ₹ 2,500) ಬಹುಮಾನ ಪಡೆದರು. ಸ್ಪರ್ಧೆ ಆಯೋಜಕರಾದ ಉಮೇಶ್ ಹರಿಹರ, ಶಾರದಾ ಮಠದ ಅಧಿಕಾರಿ ದಕ್ಷಿಣಾಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.