ADVERTISEMENT

ಶೃಂಗೇರಿ: ಹಂಸವಾಹಿನಿ ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 8:24 IST
Last Updated 8 ಅಕ್ಟೋಬರ್ 2021, 8:24 IST
ಶೃಂಗೇರಿಯಲ್ಲಿ ಹಂಸವಾಹಿನಿ ಅಲಂಕಾರದಲ್ಲಿ ಕಂಗೊಳಿಸಿದ ಶಾರದೆ (ಚಿತ್ರ 1). ನರಸಿಂಹರಾಜಪುರದ ಗಣಪತಿ ಪೆಂಡಾಲ್‌ನಲ್ಲಿ ದೇವಿಗೆ ಹಂಸವಾಹಿನಿ ಅಲಂಕಾರ ಮಾಡಲಾಗಿತ್ತು (ಚಿತ್ರ 2). ಬೀರೂರಿನ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದ ಅಶ್ವತ್ಥ ಶನೈಶ್ಚರಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಸಿದ್ಧಿಧಾತ್ರಿ ದೇವಿ (ಚಿತ್ರ 3). ಕಳಸದ ದುರ್ಗಾ ಮಂಟಪದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗಿದೆ (ಚಿತ್ರ 4). ಕೊಪ್ಪದ ಮಾರ್ಕೇಟ್ ರಸ್ತೆಯಲ್ಲಿನ ಬಲಮುರಿ ವೀರಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾದೇವಿಗೆ ಬ್ರಾಹ್ಮಿ ಅಲಂಕಾರ ಮಾಡಲಾಗಿತ್ತು.

ಶೃಂಗೇರಿ: ಶರನ್ನವರಾತ್ರಿಯ ಪ್ರಥಮ ದಿನವಾದ ಗುರುವಾರ ಶೃಂಗೇರಿ ಶಾರದೆ ಹಂಸವಾಹನಾಲಂಕಾರದಲ್ಲಿ ಕಂಗೊಳಿಸಿದಳು.

ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದರಸಿಯಾಗಿ ಅಲಂಕಾರ ಮಾಡಲಾಗಿತ್ತು.

ಶಾರದೆ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳು ಶಾರದಾ ಮಠದ ಒಳಂಗಾಣದಲ್ಲಿ ನೆರವೇರಿತು. ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿಯವರು ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಶಾರದಾ ಮಠದಲ್ಲಿ ಪುರೋಹಿತರಿಂದ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿಭಾಗವತ, ಮದ್ಭಾಗವತ, ಸೂತಸಂಹಿತೆ, ಭುವನೇಶ್ವರಿ ಜಪ, ದುರ್ಗಾಜಪ, ಶ್ರೀಚಕ್ರಕ್ಕೆ ನವಾವರಣ ಪೂಜೆ ನೆರವೇರಿತು. ಶಾರದೆಯ ದರ್ಶನಕ್ಕೆ ಬಂದ ಸದ್ಭಕ್ತರು ಶಾರದಾ ಪ್ರಸಾದವನ್ನು ಸ್ವೀಕರಿಸಿದರು.

ರಾತ್ರಿ ಕಿರಿಯ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಶಾರದಾ ಮಠದ ಸಂಪ್ರದಾಯದಂತೆ ಕಿರೀಟ, ಆಭರಣಗಳನ್ನು ಧರಿಸಿ ದೇವಾಲಯಕ್ಕೆ ಬಂದರು. ಶಾರದಾ ದೇವಾಲಯದ ಒಳಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನೆರವೇರಿತು. ರಥೋತ್ಸವದ ಬಳಿಕ ಗುರುಗಳ ಸಾನಿಧ್ಯದಲ್ಲಿ ವೇದಗಳ ಪಾರಾಯಣ, ಪಂಚಾಂಗಶ್ರವಣ ಬಳಿಕ ಶಾರದೆಗೆ ವಿಶೇಷ ಪೂಜೆ ನೆರವೇರಿತು.

ಶಾರದಾ ದೇವಿಗೆ ವಿಶೇಷ ಪೂಜೆ ನಡೆಯುವ ಸಂದರ್ಭದಲ್ಲಿ ಭಾರತೀತೀರ್ಥ ಸ್ವಾಮೀಜಿ ‘ಜಗತ್ತು ಕೋವಿಡ್‌ ಸಂಕಷ್ಟದಿಂದ ದೂರವಾಗಲಿ’ ಎಂದು ಸಂಕಲ್ಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.