ಶೃಂಗೇರಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳು ತಮ್ಮದೇ ಆದ ವಿಶೇಷ ಪಾತ್ರ ನಿರ್ವಹಿಸುತ್ತಿದ್ದು, ಅದನ್ನು ಯಥಾವತ್ತಾಗಿ ಪಾಲಿಸುವುದು ಪ್ರಜೆಗಳು ಮತ್ತು ಅಧಿಕಾರಿಗಳಾದ ನಮ್ಮೆಲ್ಲರ ಕರ್ತವ್ಯ’ ಎಂದು ತಹಶೀಲ್ದಾರ್ ಅನುಪ್ ಸಂಜೋಗ್ ಹೇಳಿದರು.
ಶೃಂಗೇರಿಯ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಪಕ್ಷದ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಯಶಸ್ಸುಗಳಿಸಲು ನಮ್ಮಂಥ ಸರ್ಕಾರಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಸರ್ಕಾರ ಹಲವಾರು ಸವಲತ್ತುಗಳನ್ನು ನೌಕರರಿಗೆ ನೀಡುತ್ತಿದೆ. ಅಧಿಕಾರಿಗಳಿಗೆ ನೀಡುವ ಸಂಬಳ ಸಾರ್ವಜನಿಕರದ್ದು, ಈ ಕಾರಣದಿಂದ ಸಾರ್ವಜನಿಕರ ಪರ ಕೆಲಸ ಮಾಡಬೇಕು’ ಎಂದರು.
ಮಾಹಿತಿ ಹಕ್ಕು ವಿಷಯದ ಕುರಿತು ಜಯಪುರ ಪಿಡಿಒ ಶಿವಕುಮಾರ್ ಮಾತನಾಡಿ, ‘ಕೆಲಸ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಹಲವು ಸವಾಲುಗಳನ್ನು ಎದುರಿಸಬೇಕು. ಸರ್ಕಾರಿ ದಾಖಲೆಗಳನ್ನು ಪಡೆಯುವ ಹಕ್ಕು ಸಾರ್ವಜನಿಕರಿಗೆ ಇದೆ. ಕೆಲವು ದಾಖಲೆಗಳನ್ನು ಮಾತ್ರ ನೀಡುವ ಹಕ್ಕು ಅಧಿಕಾರಿಗಳಿಗೆ ಇದೆ. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ. ಸರ್ಕಾರಿ ನೌಕರರು ಸಾರ್ವಜನಿಕ ಹಿತಾಸಕ್ತಿಗಳನ್ನು ಗೌರವಿಸಿ ಕೆಲಸ ಮಾಡಬೇಕು’ ಎಂದರು.
ಸಂಘದ ಅಧ್ಯಕ್ಷ ಬಿ.ಜಿ.ನಾಗೇಶ್ ಮಾತನಾಡಿ, ‘ಸರ್ಕಾರಿ ನೌಕರರಿಗೆ ಕಾನೂನು ಹಾಗೂ ಆಡಳಿತ ವ್ಯವಸ್ಥೆಯ ಅರಿವು ಇರಬೇಕು. ಸರ್ಕಾರ ರೂಪಿಸುವ ಯೋಜನೆಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು. ಸರ್ಕಾರಿ ನೌಕರರ ಸಂಘವು ಸಮನ್ವಯ, ಸಾಂಘಿಕ ಭಾವದಿಂದ ಕೆಲಸ ಮಾಡಿದರೆ ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ’ ಎಂದರು.
ಸಂಘದ ಅಧ್ಯಕ್ಷರು, ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನೂತನ ಅಧ್ಯಕ್ಷ ಬಿ.ಜಿ.ನಾಗೇಶ್ ಅವರನ್ನು ತಾಲ್ಲೂಕಿನ ವಿವಿಧ ಸಂಘದ ಪದಾಧಿಕಾರಿಗಳು ಗೌರವಿಸಿದರು. ಅಪ್ಸರ ಮ್ಯೂಸಿಕ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಘದ ಗೌರವ ಅಧ್ಯಕ್ಷ ಸುದೀಪ್ ಎಚ್., ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ, ಕೊಪ್ಪ ತಹಶೀಲ್ದಾರ್ ಲಿಖಿತ ಮೋಹನ್, ಕೊಪ್ಪ ತಾಲ್ಲೂಕು ಘಟಕದ ಬಿ.ಸಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಕೋಶಾಧ್ಯಕ್ಷ ಪೂರ್ಣೇಶ್, ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಸುಂದರೇಶ್, ವಿಜಯ್ ಕುಮಾರ್, ಈಶ್ವರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.