ADVERTISEMENT

ಏಕಾಗ್ರತೆ ಹೆಚ್ಚಿಸಲು ಚೆಸ್ ಸಹಕಾರಿ

ರಾಜ್ಯ ಮಟ್ಟದ ಚೆಸ್ ಟೂರ್ನಿಯಲ್ಲಿ ಎಸ್.ಎಲ್.ಧರ್ಮೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 13:21 IST
Last Updated 8 ನವೆಂಬರ್ 2019, 13:21 IST
ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಚೆಸ್ ಟೂರ್ನಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು.
ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಚೆಸ್ ಟೂರ್ನಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು.   

ಚಿಕ್ಕಮಗಳೂರು: ತಾಳ್ಮೆ, ಏಕಾಗ್ರತೆ ಹೆಚ್ಚಿಸಲು ಚೆಸ್ ಕ್ರೀಡೆ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಇಎಸ್ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಚೆಸ್ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಪಠ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.

ADVERTISEMENT

ವಿಧಾನಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿದ ಯಾವ ಸರ್ಕಾರವೂ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಿಲ್ಲ. 1ನೇ ತರಗತಿಯಿಂದ ಪದವಿ ಕಾಲೇಜಿನವರೆಗೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯ ಇದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿಯೇ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ’ ಎಂದು ವಿಷಾದಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಮಾನ ವೇತನ ನೀಡುವ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಈ ಬಗ್ಗೆ ಇದೇ 13ರಂದು ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆಯ ಮುಖ್ಯ ಅಧಿಕಾರಿಗಳು ಸಭೆ ನಡೆಸುವರು. ಪ್ರಸ್ತಾವ ಅಂಗೀಕಾರಕ್ಕೆ ಶ್ರಮಿಸಲಾಗುವುದು ಎಂದರು.

ವಿವಿಧ ಜಿಲ್ಲೆಗಳಿಂದ ಟೂರ್ನಿಗೆ ಬಂದಿರುವ ಸ್ಪರ್ಧಿಗಳು ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಗೆ ಭೇಟಿ ನೀಡಬೇಕು. ಮಲೆನಾಡಿನ ಪ್ರಕೃತಿ ಸಿರಿ ಸವಿಯಬೇಕು ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಮಾತನಾಡಿ, ‘ರಾಜ್ಯ ಮಟ್ಟದ ಟೂರ್ನಿಗಳು ನಡೆಯುತ್ತಿರುವುದರಿಂದ ನಗರದಲ್ಲಿ ಹಬ್ಬದ ವಾತಾವರಣ ಮೂಡಿದೆ. ಚೆಸ್ ಕ್ರೀಡೆ ಬುದ್ಧಿವಂತರಿಗೆ ಮಾತ್ರ ಎನ್ನುವ ನಾಣ್ಣುಡಿ ಇದೆ. ವಿದ್ಯಾರ್ಥಿಗಳು ಟಿವಿ, ಮೊಬೈಲ್ ಗೀಳಿನಿಂದ ಹೊರಬರಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು’ ಎಂದರು.

ಬೆಳಿಗ್ಗೆ 10.30ಕ್ಕೆ ಟೂರ್ನಿ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಉದ್ಘಾಟಕರು, ಅತಿಥಿಗಳ ಬರುವಿಕೆಗಾಗಿ ಸ್ಪರ್ಧಿಗಳು ಕಾಯ್ದುಕುಳಿತಿದ್ದರು. ಮೊಗಸಾಲೆಯಲ್ಲಿ ಉಪನಿರ್ದೇಶಕರ ವಿರುದ್ಧ ಕೆಲ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. 11.45ಕ್ಕೆ ಕಾರ್ಯಕ್ರಮ ಆರಂಭವಾಯಿತು.

ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್, ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ಶ್ರೀನಿವಾಸಮೂರ್ತಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ಸುದರ್ಶನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಬಸವನಹಳ್ಳಿ ಬಾಲಕಿಯರ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.