
ಆಲ್ದೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಗುಂಪು ಗುಂಪಾಗಿ ಸಂಚರಿಸುವ ಶ್ವಾನಗಳನ್ನು ಕಂಡು ಭಯದಿಂದ ಓಡಾಟ ನಡೆಸುವ ಆತಂಕ ಎದುರಾಗಿದೆ.
ಕೆಲವರು ಸಂತೆ ಮೈದಾನ ಸಂತೆಕಟ್ಟೆಯ ಬಳಿ ನಾಯಿ ಮರಿಗಳನ್ನು ತಂದು ಬಿಡುತ್ತಿದ್ದು, ಇದರಿಂದ ನಾಯಿಗಳ ಪ್ರಮಾಣ ಅಧಿಕವಾಗುತ್ತಿದೆ. ಈ ರೀತಿ ಬೇರೆ ಸ್ಥಳಗಳಿಂದ ಊರಿನಿಂದ ಆಲ್ದೂರು ಮತ್ತು ಸಂತೆ ಮೈದಾನಕ್ಕೆ ನಾಯಿಗಳನ್ನು ತಂದು ಬಿಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಪಟ್ಟಣ ನಿವಾಸಿಗಳದ್ದಾಗಿದೆ.
ಬೀದಿ ನಾಯಿಗಳು ಎಷ್ಟೋ ಬಾರಿ ರಾತ್ರಿ ಸಮಯ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬರುವುದರಿಂದ ಅಪಘಾತ ಸಂಭವಿಸುತ್ತಿವೆ. ಪಟ್ಟಣದ ಕೋಳಿ ಮಾಂಸದ ಅಂಗಡಿಗಳ ಮುಂಭಾಗ ಇರುವ ಹಲವು ನಾಯಿಗಳಿಗೆ ಚರ್ಮರೋಗಗಳು ಕಾಣಿಸಿಕೊಂಡಿದ್ದು ಇದರಿಂದ ಮನೆಯಲ್ಲಿರುವ ಸಾಕು ಪ್ರಾಣಿಗಳಿಗೂ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ.
ಕಳೆದ ವರ್ಷ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 560ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, 786 ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಕೇಂದ್ರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಬೀದಿ ನಾಯಿಗಳ ಕಡಿತದಿಂದ ನಮ್ಮ ಸಾಕು ನಾಯಿ ಮೃತಪಟ್ಟಿತು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಾಯಿಗಳು ಕಾಣಿಸಿಕೊಳ್ಳುತ್ತಿದ್ದು, ನಾಯಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಪಂಚಾಯಿತಿ ಅಧಿಕಾರಿಗಳು ಈ ಕುರಿತು ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸಂತೆ ಮೈದಾನ ನಿವಾಸಿ ರವಿಚಂದ್ರ ಒತ್ತಾಯಿಸಿದರು.
ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಕೋಳಿ ಮಾಂಸದ ಅಂಗಡಿ ಮಳಿಗೆಗಳ ಬಳಿ ಅತಿಹೆಚ್ಚಿನ ಬೀದಿ ನಾಯಿಗಳು ಕಾಣಿಸಿಕೊಳ್ಳುತ್ತಿದ್ದು, ಮಳಿಗೆಯ ಹಿಂಭಾಗ ಖಾಸಗಿ ಶಾಲೆ ಕೂಡ ಇದೆ. ಪೋಷಕರು ಪ್ರತಿದಿನವೂ ಮಕ್ಕಳನ್ನು ಆತಂಕದಿಂದ ಕಳುಹಿಸುವಂತಾಗಿದೆ. ಶ್ವಾನಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನು ಸ್ಥಳೀಯ ಆಡಳಿತ ಮಾಡಬೇಕು ಸ್ಥಳೀಯ ಎ.ಯು. ಇಬ್ರಾಹಿಂ ಆಗ್ರಹಿಸಿದರು.
ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕುರಿತು ಗ್ರಾಮ ಸಭೆಗಳಲ್ಲಿ ಸಾರ್ವಜನಿಕರಿಂದ ದೂರು ಬಂದಿದ್ದು ಖಾಸಗಿ ಸಂಸ್ಥೆಗಳು ನಾಯಿಗಳ ಸ್ಥಳಾಂತರ ಕಾರ್ಯಾಚರಣೆಗೆ ಬೇಡಿಕೆಯನ್ನು ಸಲ್ಲಿಸಿದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದುಶಂಶೂನ್ ನಹರ್ ಆಲ್ದೂರು ಗ್ರಾಮ ಪಂಚಾಯಿತಿ ಪಿಡಿಒ
ಮುಂದಿನ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮತ್ತು ಸ್ಥಳಾಂತರಿಸಿ ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದುಜುಬೇದ ಹಸೈನರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.