ADVERTISEMENT

ಚಿಕ್ಕಮಗಳೂರು | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಸಾವು: ಪ್ರಾಂಶುಪಾಲೆ ಅಮಾನತು

ತನಿಖೆಗೆ ಆದೇಶ, ಪ್ರಾಂಶುಪಾಲೆ, ನಿಲಯ ಪಾಲಕ ಇಬ್ಬರು ಅಮಾನತು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 11:19 IST
Last Updated 9 ಜುಲೈ 2025, 11:19 IST
<div class="paragraphs"><p>ಅಮಾನತು</p></div>

ಅಮಾನತು

   

ಚಿಕ್ಕಮಗಳೂರು: ಕೊಪ್ಪ ಪಟ್ಟಣದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೃತಪಟ್ಟ ಇಬ್ಬರು ಬಾಲಕಿಯರ ಸಾವಿನ ಪ್ರಕರಣದ ಕುರಿತು ತನಿಖೆಗೆ ನಿವೃತ್ತ ನ್ಯಾಯಾಧೀಶೆ ಎಸ್. ಶೋಭಾ ಅವರನ್ನು ನೇಮಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್‌) ಆದೇಶಿಸಿದೆ.

2025ರ ಜೂನ್‌ 29ರಂದು ವಸತಿ ಶಾಲೆಯ ಸ್ನಾನದ ಮನೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿತ್ತು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸ್ಥಳೀಯರು ಕೊಪ್ಪದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಾಂಶುಪಾಲರು ಮತ್ತು ನಿಯಲ ಪಾಲಕರನ್ನು ಅಮಾನತು ಮಾಡಬೇಕು, ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ADVERTISEMENT

2023ರ ಜುಲೈ 27ರಂದು ಇದೇ ಶಾಲೆಯ 9ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿನಿಯ ಶವ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿತ್ತು. ಎರಡೂ ಪ್ರಕರಣಗಳನ್ನು ತನಿಖೆ ನಡೆಸಲು ಆದೇಶಿಸಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಯಾಗಿ ನಿವೃತ್ತ ಹೊಂದಿರುವ ಎಸ್.ಶೋಭಾ ಅವರನ್ನು ತನಿಖಾಧಿಕಾರಿಯಾಗಿ, ಜಿಲ್ಲಾ ಸಮನ್ವಯಾಧಿಕಾರಿ ಕೆ.ಪಿ.ಶೈಲಾ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡಬೇಕು ಎಂದು ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್. ಆದೇಶದಲ್ಲಿ ತಿಳಿಸಿದ್ದಾರೆ.

ಇಬ್ಬರ ಅಮಾನತು: ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಪ್ರಾಂಶುಪಾಲೆ ರಜಿನಿ ಮತ್ತು ನಿಲಯ ಪಾಲಕ(ಪ್ರಭಾರ) ಸುಂದರ ನಾಯ್ಕ ಅವರನ್ನು ಅಮಾನತು ಮಾಡಿ ಮತ್ತೊಂದು ಆದೇಶವನ್ನು ಕಾಂತರಾಜು ಪಿ.ಎಸ್. ಹೊರಡಿಸಿದ್ದಾರೆ.

ಇಬ್ಬರ ಕರ್ತವ್ಯ ಲೋಪ ಮತ್ತು ನಿರ್ಲಕ್ಷತೆಯಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಇಬ್ಬರನ್ನೂ ಅಮಾನತು ಮಾಡಿ ವಿದ್ಯಾರ್ಥಿನಿಯರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾವು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ನಿಸ್ಪಕ್ಷಪಾತ ತನಿಖೆ ನಡೆಯಬೇಕು’ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.