ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಕಪ್ಪ ಕಾಣಿಕೆ ಪಡೆದಿದ್ದಾರೆ ಎಂದು ನಗರಸಭೆ ಸದಸ್ಯ ವರಸಿದ್ದಿ ವೇಣುಗೋಪಾಲ್ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.
‘ಪಕ್ಷದ ಸಿದ್ಧಾಂತ, ಶಿಸ್ತು ಉಲ್ಲಂಘನೆ ಮಾಡಿದ್ದರಿಂದ ವೇಣುಗೋಪಾಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪಕ್ಷದ ಮುಖಂಡರು ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ನಾನು ನಗರಸಭೆ ಅಧ್ಯಕ್ಷೆಯಾಗಲು ಯಾವುದೇ ಕಪ್ಪ ಕಾಣಿಕೆಯನ್ನು ಯಾರಿಗೂ ನೀಡಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ನನ್ನ ಮತ್ತು ಪಕ್ಷದ ಮುಖಂಡರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ವೇಣುಗೋಪಾಲ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರು ನಗರಸಭೆ ಅಧ್ಯಕ್ಷರಾದಾಗ ಎಷ್ಟು ಕಪ್ಪ ಕಾಣಿಕೆ ನೀಡಿದ್ದರು’ ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯ ಅಮೃತೇಶ್ ಚನ್ನಕೇಶವ, ಸದಸ್ಯರಾದ ರಾಜು, ಲಲಿತಾಬಾಯಿ, ಬಿಜೆಪಿ ನಗರ ಘಟಕದ ಕಾರ್ಯದರ್ಶಿ ಕಾರ್ತಿಕ್, ಸಿ.ಎಂ. ಕೌಶಿಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.