ಪ್ರಜಾವಾಣಿ ವಾರ್ತೆ
ತರೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವದ ‘ನಮ್ಮ ಸಂಸ್ಕೃತಿ-ನಮ್ಮ ಹೆಮ್ಮ’ ಕಾರ್ಯಕ್ರಮ ನಡೆಯಿತು.
ಬುಧವಾರ ಬೆಳಿಗ್ಗೆ 10ಗಂಟೆಗೆ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ರಚನಾ ಶ್ರೀನಿವಾಸ್ ಚಾಲನೆ ನೀಡಿದರು.
ಬಯಲು ರಂಗಮಂದಿರದಿಂದ ಕಾಲೇಜಿನವರೆಗೆ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಂದ ವೀರಗಾಸೆ, ಶೃಂಗಾರಗೊಂಡ ಎತ್ತಿನ ಗಾಡಿ, ಮಹಾ ಕುಂಭ, ತಮಟೆ, ಬಂಜಾರ ನೃತ್ಯ ಮೆರುಗು ನೀಡಿದವು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಗೋರಿ, ಗೋಲಿ ಆಟ, ಚಿನ್ನಿ ದಾಂಡು, ಮಡಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ಕುಂಟೆಬಿಲ್ಲೆ, ಜಾನಪದ ನೃತ್ಯ, ಜಾನಪದ ಗೀತೆ, ರಂಗೋಲಿ ಸ್ಪರ್ಧೆ, ವಿವಿಧ ವೇಷಭೂಷಣ ಸ್ಪರ್ಧೆ, ಇನ್ನಿತರೆ ಚಟುವಟಿಕೆ ಆಯೋಜಿಸಲಾಗಿತ್ತು.
ಬೀಸುವ ಕಲ್ಲು, ಒನಕೆ, ಅಳಗುಳಿ ಮಣೆ, ಬೇಸಾಯ ಸಾಮಾಗ್ರ, ಪುಸ್ತಕಗಳು, ಪುರಾತನ ಅಂಚೆ ಪತ್ರ, ಮಡಕೆ–ಕುಡಿಕೆಗಳು, ಹಳೆಯ ಕಾಲದ ನಾಣ್ಯಗಳು, ವಿವಿಧ ಲೋಹಗಳ ಪಾತ್ರೆಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಟಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಸಾಂಪ್ರದಾಯಿಕ ಉಡುಗೆ ಧರಿಸಿ, ಉತ್ಸವಕ್ಕೆ ಮೆರುಗು ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.