ತರೀಕೆರೆ: ‘ವೈಚಾರಿಕ ಕ್ರಾಂತಿ, ವಿಚಾರಧಾರೆ ಕೊಂಡೊಯ್ದವರು ಬಸವಣ್ಣನವರು. ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು, ಜೊತೆ ಜೊತೆಯಾಗಿ ಬದುಕುವುದೇ ಶರಣರ ತತ್ವವಾಗಿದೆ’ ಎಂದು ಉಪನ್ಯಾಸಕ ಚೇತನ್ ಗೌಡ ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಬೂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಕದಿಂದ ಬದುಕು ಎಂದು ಹೇಳಿಕೊಟ್ಟವರು ಬಸವಣ್ಣನವರು. ಅವರ ಸಹೋದರಿ ಶರಣೆ ಅಕ್ಕನಾಗಲಾಂಬಿಕೆ ತರೀಕೆರೆ ನೆಲಸಿದ ಪುಣ್ಯ ಸ್ಥಳವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ ಮಾತನಾಡಿ, ‘ಬಸವಣ್ಣ ಸಾಂಸ್ಕೃತಿಕ ನಾಯಕರು, ಜ್ಞಾನದ ಬೆಳಕು ನೀಡಿದವರು, ಧ್ವನಿ ಇಲ್ಲದವರಿಗೆ ಧ್ವನಿಯಾದವರು’ ಎಂದು ಬಣ್ಣಿಸಿದರು.
ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಾಗೇಂದ್ರ ನಾಯ್ಕ ಮಾತನಾಡಿದರು. ಬೂದಿ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬೇಲೇನಹಳ್ಳಿ ಸೋಮಶೇಖರ್, ಬೂದಿ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಉಪಾಧ್ಯಕ್ಷ ಟಿ.ಎಂ.ನವೀನ್ ಮಾತನಾಡಿದರು.
ಪುರಸಭೆ ಮಾಜಿ ಸದಸ್ಯ ಲೋಕೇಶ್, ಕೆ.ವಿ. ಬಾಬು, ವಿಶ್ವನಾಥ್, ರವಿ ಕುಮಾರ್ ಹಂಜಿ, ನಾಗರಾಜ್, ಶಾರದ ಅಶೋಕ್ ಕುಮಾರ್, ವನಜ ಹರೀಶ್, ಗೀತಾ ಶುಭಾಕರ್ ಭಾಗವಹಿಸಿದ್ದರು. ಬೂದಿ ಬಸವೇಶ್ವರ ದೇವಸ್ಥಾನದಿಂದ ಶ್ರೀಬಸವೇಶ್ವರ ರಥೋತ್ಸವವನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.