ಸಾಂದರ್ಭಿಕ ಚಿತ್ರ
ತರೀಕೆರೆ (ಚಿಕ್ಕಮಗಳೂರು): ‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಬರುವ ವಸತಿ ಶಾಲೆಗಳಿಗೆ ಮಕ್ಕಳ ಆಯ್ಕೆ ಸಂಬಂಧ ಯಾವುದೇ ಹಂತದಲ್ಲೂ ತಾರತಮ್ಯ ಅಥವಾ ಅವ್ಯವಹಾರ ನಡೆದಿಲ್ಲ’ ಎಂದು ಉಪ ವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಸ್ಪಷ್ಟಪಸಿದ್ದಾರೆ.
ತರೀಕೆರೆ ಉಪ ವಿಭಾಗದ ವ್ಯಾಪ್ತಿಯ 18 ಶಾಲೆಗಳಲ್ಲಿ ಖಾಲಿ ಉಳಿದಿದ್ದ 7ನೇ ತರಗತಿಯಲ್ಲಿ 46 ಸೀಟುಗಳು ಮತ್ತು 8ನೇ ತರಗತಿಯ 63 ಸೇರಿ 109 ಸೀಟುಗಳ ಭರ್ತಿಗೆ 638 ಅರ್ಜಿಗಳು ಬಂದಿದ್ದವು. ಸುತ್ತೋಲೆ ಪ್ರಕಾರ ಪಾರದರ್ಶಕವಾಗಿ ಸಿಸಿಟಿವಿ ಕಾವಲಿನಲ್ಲಿ ಪರೀಕ್ಷೆಮ ಹಾಗೂ ಮೌಲ್ಯಮಾಪನ ನಡೆಸಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಪ್ರಾಂಶುಪಾಲರಿಗೆ ತಿಳಿಸಲಾಗಿತ್ತು ಎಂದು ತಿಳಿಸಿದ್ದಾರೆ.
‘ಪರೀಕ್ಷೆ, ಮೌಲ್ಯಮಾಪನ ನಡೆಸಿ ರ್‍ಯಾಂಕ್ ಪಟ್ಟಿಯನ್ನು ದೃಢೀಕರಿಸಿ ಜಿಲ್ಲಾ ಸಮನ್ವಯಾಧಿಕಾರಿ ಕಚೇರಿಗೆ ಸಲ್ಲಿಸಿದ್ದರು. ಪರಿಶೀಲಿಸಿ ಯಥಾವತ್ತಾಗಿ ಪ್ರಕಟಿಸಿದೆ. 7 ಮತ್ತು 8ನೇ ತರಗತಿಯ ಖಾಲಿ ಇದ್ದ ಸೀಟುಗಳನ್ನು ನಿಯಮಾನುಸಾರ ಭರ್ತಿ ಮಾಡಲಾಗಿದೆ. ಯಾವುದೇ ಲೋಪವಾಗಿಲ್ಲ. ಆರೋಪ ನಿರಾಧಾರವಾಗಿದೆ. ಆದ್ದರಿಂದ ತನಿಖೆ ನಡೆಸಬಹುದು’ ಎಂದು ಹೇಳಿದ್ದಾರೆ.
‘ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸೀಟು ಭರ್ತಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಮಂಗಳವಾರ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.