ADVERTISEMENT

ತರೀಕೆರೆ | ಒಂದೆಡೆ ಅಭಿವೃದ್ಧಿ; ಮತ್ತೊಂದೆಡೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:47 IST
Last Updated 16 ಆಗಸ್ಟ್ 2025, 6:47 IST
ಬಿ.ಎಚ್.ರಸ್ತೆಯ ಮಧ್ಯದಲ್ಲಿ ಗುಂಡಿಗಳು ಬಿದ್ದಿರುವುದು
ಬಿ.ಎಚ್.ರಸ್ತೆಯ ಮಧ್ಯದಲ್ಲಿ ಗುಂಡಿಗಳು ಬಿದ್ದಿರುವುದು   

ತರೀಕೆರೆ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಬಿ.ಎಚ್.ರಸ್ತೆ ದ್ವಿಪಥ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಇರುವುದರಿಂದ ಜನ ಸಮಸ್ಯೆ ಎದುರಿಸುತ್ತಿದ್ದಾರೆ.

ಸರ್ಕಾರದ ವಿವಿಧ ಮೂಲಗಳಿಂದ ಕೋಡಿಕ್ಯಾಂಪ್‍ ವೃತ್ತದಿಂದ ಎಂ.ಜಿ.ಸರ್ಕಲ್‌ವರೆಗಿನ 1.2 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹ 20 ಕೋಟಿ, ಅರಣ್ಯ ಇಲಾಖೆ ಮುಂಭಾಗದಿಂದ ಮಿನಿ ವಿಧಾನಸೌಧದ ವರೆಗೆ 300 ಮೀ ರಸ್ತೆ ಅಭಿವೃದ್ಧಿಗೆ ₹ 4 ಕೋಟಿ, ಮಿನಿ ವಿಧಾನಸೌಧದಿಂದ ಆರ್‌ಟಿಒ ಕಚೇರಿವರೆಗೆ ಮತ್ತು ಕೋಡಿಕ್ಯಾಂಪ್‍ ಸರ್ಕಲ್‍ನಿಂದ ಯಾಸೀಲ್ ಅಂಗಡಿವರೆಗೆ ತಲಾ 450ಮೀ. ನಂತೆ ರಸ್ತೆ ಅಭಿವೃದ್ಧಿಗೆ ಒಟ್ಟು ₹ 9.95 ಕೋಟಿ, ಯಾಸೀನ್ ಅಂಗಡಿಯಿಂದ ಭದ್ರಾ ಮೇಲ್ದಂಡೆ ನಾಲೆವರೆಗೆ ದ್ವಿಪಥ ರಸ್ತೆ ಅಭಿವೃದ್ಧಿ ಹಾಗೂ ಭದ್ರಾ ನಾಲೆಯಿಂದ ಎನ್.ಎಚ್. 206ರ ಬೈಪಾಸ್‍ ರಸ್ತೆವರೆಗೆ ರಿ ಸರ್ಫೇಸಿಂಗ್‌ಗೆ ₹ 4.32 ಕೋಟಿ ಹಾಗೂ ಈ ಮುಖ್ಯ ರಸ್ತೆಯಲ್ಲಿ ಬರುವ ಕೋಡಿಕ್ಯಾಂಪ್‍ನ ಓಂ ಮತ್ತು ಮಹಾತ್ಮ ಗಾಂಧಿ ವೃತ್ತಗಳ ಅಭಿವೃದ್ಧಿಗಾಗಿ ತಲಾ ₹ 4 ಕೋಟಿ ಅನುದಾನ ಬಿಡುಗಡೆಯಾಗಿದೆ.

ಪಟ್ಟಣದ ಹಳಿಯೂರಿನಿಂದ ಆರ್‌ಟಿಒ ಕಚೇರಿವರೆಗೆ ರಸ್ತೆ ವಿಸ್ತರಣೆ ಕಾರ್ಯ ಭರದಿಂದ ಸಾಗುತ್ತಿದೆ. ಇದರಿಂದ ರಸ್ತೆಯ ಇಕ್ಕೆಲಗಳಲಿದ್ದ ಮರಗಳನ್ನು ತೆರವುಗೊಳಿಸಿ, ಬಾಕ್ಸ್‌ ಚರಂಡಿ ಕಾಮಗಾರಿ ಭಾಗಶಃ ಅಂತಿಮ ಹಂತದಲ್ಲಿದೆ. ಇದೇ ರೀತಿ ಅಲ್ಲಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ADVERTISEMENT

ಆದರೆ, ಈ ಸಂದರ್ಭದಲ್ಲಿ ಸಾರ್ವಜನಿಕರು ಓಡಾಡಲು, ವಾಹನ ಸಂಚಾರಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸಮರ್ಪಕವಾಗಿ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ದಿನನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ.

ಚರಂಡಿ ಮತ್ತು ಸೇತುವೆ ನಿರ್ಮಾಣ ಸಂದರ್ಭದಲ್ಲಿ ಹಾಗೂ ಈ ಹಿಂದೆ ಹಾಳಾಗಿದ್ದ ರಸ್ತೆಯಿಂದಾಗಿ ಹಲವು ಹೊಂಡಗಳಾಗಿದ್ದು, ರಸ್ತೆ ಕಾಮಗಾರಿ ಪ್ರಾರಂಭವಾದಾಗಿನಿಂದ ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿಡಿದೆ. ಮಳೆ ನಿಂತಾಗ ದೂಳಿನ ಸಮಸ್ಯೆ ಆಗುತ್ತಿದೆ. ಇದರಿಂದ ಅವಘಡಗಳೂ ನಡೆದಿವೆ. ಮಳೆ ಇಲ್ಲದೆ ಇದ್ದಾಗ ನೀರು ಸಿಂಪಡಿಸಿ ದೂಳು ಏಳದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆಯ ಕಾಮಗಾರಿಗೆ ಯಾರೂ ತೊಂದರೆ ನೀಡುತ್ತಿಲ್ಲ. ಆದರೆ, ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿಲ್ಲ. ಮಳೆಗಾಲವಾದ್ದರಿಂದ ಚರಂಡಿ ನಿರ್ಮಾಣ ಮಾಡಿದ ನಂತರ ಚರಂಡಿ ಪಕ್ಕದಲ್ಲಿ ಗುಂಡಿಗಳು ಹಾಗೂ ಮಣ್ಣಿನ ರಾಶಿ ಬಿದ್ದಿದೆ. ಇವುಗಳನ್ನು ಸರಿಪಡಿಸಿದರೆ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗದು ಎಂದು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಚ್.ಒ.ದಯಾನಂದ ಹೇಳಿದರು.

ಪಟ್ಟಣದಲ್ಲಿ ಬಿ.ಎಚ್.ರಸ್ತೆಯ ಕಾಮಗಾರಿ ಭರದಿಂದ ಸಾಗಿದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನಿರ್ವಹಿಸಲು ಸೂಚಿಸಲಾಗಿದೆ. ಮುಂದಿನ ಬೇಸಿಗೆಯೊಳಗೆ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಲೋಕೋಪಯೋಹಿ ಇಲಾಖೆಯ ತರೀಕೆರೆ ಎಇಇ ಸೋಮಶೇಖರ್ ಬಿ. ತಿಳಿಸಿದರು.

ಬಿ.ಎಚ್.ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಕಾಣದಂತಾಗಿದೆ
ಬಿ.ಎಚ್.ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ವಾಹನಗಳು ನಿಧಾನವಾಗಿ ಸಾಗಬೇಕಾದ ಸ್ಥಿತಿ ಇದೆ
ಮಳೆ ಇಲ್ಲದೆ ಇದ್ದಾಗ ಬಿ.ಎಚ್.ರಸ್ತೆಯಲ್ಲಿ ದೂಳು ಎದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.