ಬೀರೂರು/ಕಡೂರು: ಬೆಳೆಯುತ್ತಿರುವ ಬೀರೂರು ಪಟ್ಟಣದ ಅಭಿವೃದ್ಧಿಗೆ ವಿಶೇಷವಾಗಿ ಗಮನ ಹರಿಸಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಬೀರೂರಿನ ಬಸ್ ನಿಲ್ದಾಣದ ಬಳಿಯ ಬಿ.ಆರ್. ಅಂಬೇಡ್ಕರ್ ಟ್ಯಾಕ್ಸಿ ಸ್ಟ್ಯಾಂಡ್ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಟ್ಯಾಕ್ಸಿ ಚಾಲಕರ ಜೀವನ ಕಷ್ಟಕರವಾದದ್ದು. ವಾಹನಗಳು ಸದಾ ಕಾಲವೂ ಸುಸ್ಥಿತಿಯಲ್ಲಿ ಇರಬೇಕಾಗುತ್ತದೆ. ಅದನ್ನು ಮನಗಂಡು ಟ್ಯಾಕ್ಸಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣಗೊಂಡಿದೆ. ಇದಕ್ಕೆ ₹25 ಲಕ್ಷ ಅನುದಾನ ಒದಗಿಸಲಾಗಿದೆ. ಜರ್ಮನ್ ತಂತ್ರಜ್ಞಾನದಲ್ಲಿ ಈ ಸ್ಟ್ಯಾಂಡ್ ನಿರ್ಮಾಣವಾಗಿದೆ ಎಂದರು.
ಬೀರೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ₹12 ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. ಪುರಸಭೆಯವರು ಜಾಗ ಗುರುತಿಸಿದರೆ ಹೂವು ಮಾರಾಟಕ್ಕೆ ವ್ಯವಸ್ಥೆ ಹಾಗೂ ಫುಡ್ ಕೋರ್ಟ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಜೋಡಿ ರಸ್ತೆ ನಿರ್ಮಾಣದ ಅಗತ್ಯವಿದೆ. ಅದಕ್ಕಾಗಿ ಪ್ರಯತ್ನಗಳು ನಡೆದಿವೆ. ಅಜ್ಜಂಪುರ ರಾಜ್ಯ ಹೆದ್ದಾರಿ ಹಾಗೂ ಲಿಂಗದಹಳ್ಳಿ ರಸ್ತೆಗೆ ವಿದ್ಯುದ್ದೀಪ ಅಳವಡಿಸಲು ಈಗಾಗಲೇ ₹4 ಕೋಟಿ ಮಂಜೂರಾಗಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.
ಪುರಸಭೆ ಅಧ್ಯಕ್ಷೆ ವನಿತಾ ಭಾವಿಮನೆ ಮಧು ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಟ್ಯಾಕ್ಸಿ ಚಾಲಕರ ಸೇವೆ ಅನನ್ಯವಾದುದು. ಕಾರ್ಯ ನಿರ್ವಹಣೆಯ ನಡುವೆ ಕುಟುಂಬದ ಸುರಕ್ಷತೆ ಬಗ್ಗೆಯೂ ಚಾಲಕರು ಗಮನ ಹರಿಸಬೇಕು ಎಂದರು.
ಪುರಸಭೆ ಸದಸ್ಯರಾದ ಮುಬಾರಕ್, ಮೋಹನ್, ಬಿ.ಕೆ.ಶಶಿಧರ್, ಟ್ಯಾಕ್ಸಿ ಸ್ಟ್ಯಾಂಡ್ ಸಮಿತಿ ಗೌರವಾಧ್ಯಕ್ಷ ಬಿ.ಪಿ.ನಾಗರಾಜ್, ಅಧ್ಯಕ್ಷ ಸದಾಶಿವ, ಉಪಾಧ್ಯಕ್ಷ ಶ್ರೀಧರ್, ಮಂಜುನಾಥ್, ಕೇಶವಮೂರ್ತಿ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಂಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಪಿಎಸ್‌ಐ ಸಜಿತ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.