ADVERTISEMENT

ಬೀರೂರು | ‘ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ’

ಅಗ್ನಿಶಾಮಕ ವಿಭಾಗದ ಡಿಐಜಿ ರವಿ.ಡಿ.ಚನ್ನಣ್ಣನವರ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:18 IST
Last Updated 10 ಸೆಪ್ಟೆಂಬರ್ 2025, 7:18 IST
ಬೀರೂರಿನ ಎಸ್‌.ರಾಧಾಕೃಷ್ಣನ್‌ ಗುರುಭವನದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಉದ್ಘಾಟಿಸಿದರು. ರವಿ.ಡಿ.ಚನ್ನಣ್ಣನವರ್‌, ಕೆ.ಎಸ್‌.ಆನಂದ್‌, ಬುರ್ಹನುದ್ದಿನ್‌ ಚೋಪ್‌ದಾರ್‌ ಉಪಸ್ಥಿತರಿದ್ದರು
ಬೀರೂರಿನ ಎಸ್‌.ರಾಧಾಕೃಷ್ಣನ್‌ ಗುರುಭವನದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಉದ್ಘಾಟಿಸಿದರು. ರವಿ.ಡಿ.ಚನ್ನಣ್ಣನವರ್‌, ಕೆ.ಎಸ್‌.ಆನಂದ್‌, ಬುರ್ಹನುದ್ದಿನ್‌ ಚೋಪ್‌ದಾರ್‌ ಉಪಸ್ಥಿತರಿದ್ದರು   

ಬೀರೂರು (ಕಡೂರು): ‘ಸಮಾಜದ ಚಾಲಕ ಶಕ್ತಿಯಾಗಿರುವ ಶಿಕ್ಷಕರಿಗೆ ಬೋಧನೆ ಹೊರತುಪಡಿಸಿ ಇತರೆ ಕೆಲಸಗಳ ಹೊರೆ ಹೆಚ್ಚಾದರೆ ಸುಭದ್ರ ಸಮಾಜ ಕಟ್ಟಲು ಸಾಧ್ಯವಿಲ್ಲ’ ಎಂದು ಅಗ್ನಿಶಾಮಕ ವಿಭಾಗದ ಡಿಐಜಿ ರವಿ ಡಿ.ಚನ್ನಣ್ಣವರ್‌ ಅಭಿಪ್ರಾಯಪಟ್ಟರು.

ಇಲ್ಲಿನ ಎಸ್‌.ರಾಧಾಕೃಷ್ಣನ್‌ ಗುರುಭವನದಲ್ಲಿ ಮಂಗಳವಾರ ನಡೆದ ಬೀರೂರು ಶೈಕ್ಷಣಿಕ ವಲಯದ 64ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆ ಹಾಳಾದರೆ ಒಂದು ಜನಾಂಗವೇ ನಾಶವಾದಂತೆ ಎನ್ನುವ ಎಚ್ಚರ ಇರಬೇಕು. ಶಿಕ್ಷಕರು ಅತ್ಯಂತ ವೃತ್ತಿಪರರಾಗಿ ಶೈಕ್ಷಣಿಕ ವಲಯ ಮುನ್ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸಬೇಕಿರುವುದು ಜಾಗೃತ ಸಮಾಜದ ಜವಾಬ್ದಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡಿ ಪಡೆಯುವ ಹಕ್ಕುಗಳೇ ಹೆಚ್ಚಿದ್ದು, ಯುವಜನರು ಪ್ರಶ್ನಿಸುವ ಗುಣ ಬೆಳೆಸಿಕೊಂಡು ಸಮಾಜದ ಮಾರ್ಗದರ್ಶಕರಾಗಬೇಕು. ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸಿದ್ದು, ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಸಂಪತ್ತು, ಶಿಕ್ಷಣ, ಅಧಿಕಾರಶಾಹಿಯಲ್ಲಿನ ಅಸಮತೋಲನ ಹಾಗೂ ಹೆಚ್ಚುತ್ತಿರುವ ಮೌಲ್ಯಗಳ ಬಡತನ ತೊಡೆಯಲು ಶಿಕ್ಷಕರೇ ಸಮರ್ಥರು ಎಂದು ಹೇಳಿದರು.

ADVERTISEMENT

ಶಿಕ್ಷಣದ ತಳಹದಿ ಭದ್ರವಾಗಿಸಲು ಪ್ರಾಥಮಿಕ ಹಂತದಲ್ಲಿಯೇ ನಮ್ಮ ಆಲೋಚನಾ ಲಹರಿಯನ್ನು ಪ್ರಖರಗೊಳಿಸುವ ಪ್ರಯತ್ನ ನಡೆಯಬೇಕು. ನಿಸ್ವಾರ್ಥದಿಂದ ಇತರರಿಗಾಗಿಯೇ ಬದುಕುವ ಅಂತಃಕರಣ ಹೊಂದಿದ ಶಿಕ್ಷಕರು ಅನೌಪಚಾರಿಕ ಶಿಕ್ಷಣಕ್ಕೂ ಒತ್ತು ನೀಡಬೇಕು. ಗುರು ಎನ್ನುವ ಪದಕ್ಕೆ ಡಾ.ಎಸ್‌.ರಾಧಾಕೃಷ್ಣನ್‌ ಅನ್ವರ್ಥಕ. ಅವರು ತತ್ವಜ್ಞಾನವನ್ನು ಜಗತ್ತಿನೆಲ್ಲೆಡೆ ಪಸರಿಸಿ ಗೌರವ ಪಡೆದವರು. ಹಾಗೆಯೇ ಶಿಕ್ಷಕರನ್ನು ನಿರಂತರವಾಗಿ ಗೌರವಿಸುವ ಕೆಲಸವಾಗಲಿ ಎಂದು ಆಶಿಸಿದರು.

ಶಾಸಕ ಕೆ.ಎಸ್‌.ಆನಂದ್‌ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನಕ್ಕೆ ಹೆಚ್ಚು ಮಹತ್ವವಿದೆ. ಶಿಕ್ಷಕರದ್ದು ಭವ್ಯ ಭಾರತಕ್ಕೆ ಸತ್ಪ್ರಜೆಗಳನ್ನು ಕೊಡುವ ಮಹತ್ವದ ಪಾತ್ರ. ನಮ್ಮ ಜೀವನ ರೂಪುಗೊಳಿಸುವವರು ಶಿಕ್ಷಕರರೇ ಆಗಿದ್ದು, ಪ್ರಗತಿಪರ ಮತ್ತು ಶಕ್ತಿಶಾಲಿ ದೇಶ ನಿರ್ಮಾಣಕ್ಕೆ ಶಿಕ್ಷಣವೇ ಅಸ್ತ್ರವಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹನುದ್ದೀನ್‌ ಚೋಪ್‌ದಾರ್‌, ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಶ್ರಮ ಅತ್ಯಮೂಲ್ಯ ಎಂದರು.

‘ಶಿಕ್ಷಕರು ನಮ್ಮೆಲ್ಲರ ದಾರಿದೀಪ ಹಾಗೂ ದೇಶ ನಿರ್ಮಾಣದ ಶಿಲ್ಪಿಗಳು’ ಎಂದು ಪುರಸಭಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಂಗೀತ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯಾಧಿಕಾರಿ ಶೇಖರಪ್ಪ, ಕಡೂರು ಬಿಇಒ ಎಂ.ಎಚ್‌.ತಿಮ್ಮಯ್ಯ, ಬಿಆರ್‌ಸಿ ಪ್ರೇಮ್‌ಕುಮಾರ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇವರಾಜ್‌, ದೈಹಿಕ ಶಿಕ್ಷಣ ಪರಿವೀಕ್ಷಕ ಜಯದೇವಪ್ಪ, ಸರ್ಕಾರಿ ನೌಕರರ ಸಂಗದ ಎಂ.ಬಿ.ಮಂಜುನಾಥ್‌, ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಜೆ.ಜಗದೀಶ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಜಕುಮಾರ್‌, ಆರ್‌.ಟಿ.ಅಶೋಕ್‌, ಕೃಷ್ಣಮೂರ್ತಿ, ಮೈಲಾರಪ್ಪ, ಕವಿತಾ, ಸೀತಾಲಕ್ಷ್ಮಿ, ಜಯಶ್ರೀ, ಯಮುನಾ ಇತರರು ಹಾಜರಿದ್ದರು.

ಜ್ಞಾನ ಹೊಂದಿದವರಿಗಿಂತ ಮಾನವೀಯ ಮೌಲ್ಯಗಳು ಇರುವವರ ಅವಶ್ಯಕತೆ ಸಮಾಜಕ್ಕೆ ಇಂದು ಹೆಚ್ಚಿದೆ. ಅಧಿಕಾರ ಸ್ಥಾನದಲ್ಲಿರುವವರೂ ಕಾನೂನಿಗಿಂತ ವಿವೇಚನೆ ಬಳಸಿ ಅಧಿಕಾರ ಚಲಾಯಿಸುವಂತಾಗಬೇಕು.‌
ರವಿ ಡಿ.ಚನ್ನಣ್ಣವರ್‌ ಅಗ್ನಿಶಾಮಕ ವಿಭಾಗದ ಡಿಐಜಿ

ದ್ವಿಭಾಷಾ ಶಿಕ್ಷಣಕ್ಕೆ ಆದ್ಯತೆ’

ಇಂದಿನ ಸಮಾಜ ಇಂಗ್ಲಿಷ್‌ ವ್ಯಾಮೋಹದಿಂದ ಕಾನ್ವೆಂಟ್‌ ಶಿಕ್ಷಣಕ್ಕೆ ಮಾರು ಹೋಗುತ್ತಿದ್ದು ಪೋಷಕರಾದ ನಾವು ಎಲ್ಲೋ ತಪ್ಪುತ್ತಿದ್ದೇವೆ ಎನ್ನುವ ಭಾವನೆ ಬಲವಾಗುತ್ತಿದೆ ಎಂದು ಶಾಸಕ ಎಸ್‌.ಆನಂದ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರವೂ ಅನಿವಾರ್ಯವಾಗಿ ದ್ವಿಭಾಷಾ ಶಿಕ್ಷಣಕ್ಕೆ ಒತ್ತು ಕೊಟ್ಟು 6 ಸಾವಿರ ದ್ವಿಭಾಷಾ ಶಾಲೆಗಳನ್ನು ಆರಂಭಿಸಿದೆ. ಕೆಪಿಎಸ್‌ ಶಾಲೆಗಳನ್ನು ಬಲ ಪಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ. ಆದರೂ ಎಲ್ಲ ಸೌಲಭ್ಯ ಶಿಕ್ಷಕರನ್ನು ಹೊಂದಿದ್ದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಾಡುತ್ತಿದೆ. ನಮ್ಮ ಶಾಲೆಗಳು ವ್ಯವಸ್ಥಿತ ಬೋಧನಾ ಪದ್ಧತಿ ಹಾಗೂ ಮೂಲಸೌಕರ್ಯ ಹೊಂದಿವೆ. ಸರ್ಕಾರಿ ಶಿಕ್ಷಣ ಮತ್ತು ಶಾಲೆಗಳನ್ನು ಮತ್ತೆ ಪುನರುಜ್ಜೀವನಗೊಳಿಸಬೇಕಾದ ಅನಿವಾರ್ಯತೆ ಇದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.