ADVERTISEMENT

ತರೀಕೆರೆ | 'ಶಿಕ್ಷಕರು ಗುರುವಿನ ಸ್ಥಾನಕ್ಕೆ ತಲುಪಿ'

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಟೇಶ್‍ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:18 IST
Last Updated 10 ಸೆಪ್ಟೆಂಬರ್ 2025, 7:18 IST
ತರೀಕೆರೆ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ನಟೇಶ್ ಎನ್.ವಿ. ಉದ್ಘಾಟಿಸಿದರು
ತರೀಕೆರೆ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ನಟೇಶ್ ಎನ್.ವಿ. ಉದ್ಘಾಟಿಸಿದರು   

ತರೀಕೆರೆ: ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಶಿಕ್ಷಕರಾಗಿಯೇ ಉಳಿದ್ದಾರೆ. ಶಿಕ್ಷಕರು ಗುರುವಿನ ಸ್ಥಾನ ತಲುಪಬೇಕು. ಮಕ್ಕಳ ಬೆಳವಣಿಗೆ, ನೀಡುವ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಆದರೆ ಕೆಲ ವಿಚಾರಗಳಲ್ಲಿ ಶಿಕ್ಷಕರು ಹಿಂದೆ ಬಿದ್ದಿದ್ದಾರೆ. ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಶಿಕ್ಷಣ ಮುಂದಿನ ದಿನಗಳಲ್ಲಿ ಭದ್ರ ಬುನಾದಿಯಾಗುತ್ತದೆ ಎಂದು ಉಪವಿಭಾಗಾಧಿಕಾರಿ ನಟೇಶ್ ಎನ್.ವಿ. ಹೇಳಿದರು.

ಪಟ್ಟಣದ ಸಪ್ತಗಿರಿ ಕನ್ವೆಷನ್‌ ಹಾಲ್‌ನಲ್ಲಿ ಮಂಗಳವಾರ ನಡೆದ 64ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ವೃತ್ತಿ ಸದ್ಯ ಬೋಧನೆಗಾಗಿಯೇ ಉಳಿದಿಲ್ಲ. ವೃತ್ತಿಯ ಜತೆಗೆ ಹಲವು ಸರ್ಕಾರಿ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೋಧನೆಯನ್ನು ಬಿಟ್ಟು ಬೇರೆ ಕೆಲಸ ಮಾಡುತ್ತಿರುವುದರಿಂದ ಅವರ ಮೇಲೆ ಒತ್ತಡ ಏರಿದಂತಾಗಿದೆ. ಶಿಕ್ಷಕರು ತಮ್ಮ ಕೆಲಸದಿಂದ ಸಮಾಜವನ್ನು ತನ್ನತ್ತ ನೋಡುವಂತೆ ಮಾಡಬೇಕು ಎಂದರು.

ADVERTISEMENT

ಚಿಂತಕ ನಿಕೇತ್‌ರಾಜ್‌ ಮೌರ್ಯ ಮಾತನಾಡಿ, ಒಂದು ಕಾಲಘಟ್ಟದಲ್ಲಿ ಮೇಷ್ಟ್ರುಗಳಿಗೆ ಇದ್ದ ಗೌರವ, ಅವರಲ್ಲಿದ್ದ ಮೌಲ್ಯಗಳು ಇತ್ತೀಚಿನ ದಿನಗಳಲ್ಲಿ ಇಲ್ಲವಾಗಿದೆ. ಇಂದಿನ ಶಿಕ್ಷಕರಿಗೂ ಅಂದಿನ ಮೇಷ್ಟ್ರುಗಳ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. ಅಂದಿನ ದಿನಗಳಲ್ಲಿ ಹಲವು ಸಮಸ್ಯೆ, ವ್ಯಾಜ್ಯಗಳು ಅವರ ಸಮ್ಮುಖದಲ್ಲಿ ತೀರ್ಮಾನವಾಗುತ್ತಿದ್ದವು. ಅಂತಹ ಶಿಕ್ಷಕ ವೃತ್ತಿಯನ್ನು ಬಹು ಜೋಪಾನವಾಗಿ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ವಿದ್ಯೆ ಪಡೆಯುವುದು ಹಿಂದೆ ಕೆಲವರ ಸ್ವತ್ತಾಗಿತ್ತು ಎಂಬ ಕಾಲಘಟ್ಟದಲ್ಲಿ ಹಲವು ಮಹನೀಯರು ಶಿಕ್ಷಣದ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ. ವಿದ್ಯೆ ಯಾರ ಸ್ವತ್ತಲ್ಲ‌. ಕಷ್ಟಪಟ್ಟು ಕಲಿತರೆ ಯಾರು ಬೇಕಾದರೂ ಶಿಕ್ಷಣ ಪಡೆಯಬಹುದು. ಶಿಕ್ಷಣವಿಲ್ಲದಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ ಎಂದರು.

ಸದ್ಯ ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ. ಕಾನ್ವಂಟ್‌ ಶಿಕ್ಷಣದ ವ್ಯಾಮೋಹಕ್ಕೆ ಬಿದ್ದಿರುವ ಪೋಷಕರ ಮನಸ್ಥಿತಿಯಿಂದ ಮಕ್ಕಳು ಸರ್ಕಾರಿ ಶಾಲೆಗಳಿಂದ ವಿಮುಖರಾಗುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಸಿರಿವಂತರ ಮಕ್ಕಳು ಓದಲು ಬರುತ್ತಿಲ್ಲ. ಹೊಟ್ಟೆಪಾಡಿಗಾಗಿ ಕೂಲಿ ಮಾಡುವ ದುರ್ಬಲ ವರ್ಗದ, ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಾಣಸಿಗುತ್ತಾರೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳು ಮುಚ್ಚುವಂತಾಗಬಾರದು. ಶಿಕ್ಷಣಕ್ಕೆ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಶಕ್ತಿ ಇದೆ ಎಂದರು.

ಶಾಸಕ ಜಿ.ಎಚ್.ಶ್ರೀನಿವಾಸ್‌ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲ್ಲೂಕು ಉತ್ತಮ ಸ್ಥಾನ ಪಡೆದಿದೆ. ತಾಲ್ಲೂಕು ಮೊದಲ ಸ್ಥಾನಕ್ಕೆ ಬರುವಂತಾಗಬೇಕು. ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚುಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ತಾಲ್ಲೂಕಿನಲ್ಲಿ ಹೆಚ್ಚುವರಿ ಶಿಕ್ಷಕರು ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚುವರಿ ಶಿಕ್ಷಕರನ್ನು ಇಲ್ಲಿಯೇ ಉಳಿಸಿಕೊಳ್ಳಲಾಗುವುದು. ಈ ಸಂಬಂದ ಶಿಕ್ಷಣ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದರು.

ಬಿಇಒ ಪರುಶುರಾಮಪ್ಪ, ಪುರಸಭೆ ಅಧ್ಯಕ್ಷ ವಸಂತಕುಮಾರ್‌, ಉಪಾಧ್ಯಕ್ಷೆ ಪಾರ್ವತಮ್ಮ, ತಹಶೀಲ್ದಾರ್‌ ವಿಶ್ವಜಿತ್‌ ಮೆಹತಾ, ಗೋವಿಂದಪ್ಪ, ಮಾತನಾಡಿದರು.

ಸಭೆಯಲ್ಲಿ ತರೀಕೆರೆ ಇಒ ದೇವೇಂದ್ರಪ್ಪ, ಅಜ್ಜಂಪುರ ಇಒ ವಿಜಯಕುಮಾರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಆರ್.ಆನಂತಪ್ಪ, ರಾಮಚಂದ್ರಪ್ಪ, ಆನೇಕ ಗಣ್ಯರು ಭಾಗವಹಿಸಿದ್ದರು.

ಸಾಮಾಜಿಕ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಪುಲೆ ಶಿಕ್ಷಣಕ್ಕೆ ನೀಡಿದ ಆದ್ಯತೆಯಿಂದ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತಾಯಿತು. ಅವರು ಮೊದಲ ಸ್ತ್ರಿ ವಿಮೋಚನಾ ಶಕ್ತಿ. ಅವರ ಹೋರಾಟದಿಂದ ವಂಚಿತ ಮಕ್ಕಳಿಗೆ ಶಿಕ್ಷಣ ಸಿಗುವಂತಾಯಿತು
ನಿಕೇತ್‌ರಾಜ್‌ ಮೌರ್ಯ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.