ADVERTISEMENT

ಚಿಕ್ಕಮಗಳೂರು | ಸ್ಮಾರ್ಟ್‌ಫೋನ್‌ನಲ್ಲಿ ಮಕ್ಕಳಿಗೆ ಬೋಧನೆ

ಚಿಕ್ಕಮಗಳೂರಿನ ಯಲಗುಡಿಗೆ ಸರ್ಕಾರಿ ಶಾಲೆ ಶಿಕ್ಷಕರ ಕೈಂಕರ್ಯ

ಬಿ.ಜೆ.ಧನ್ಯಪ್ರಸಾದ್
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಚಿಕ್ಕಮಗಳೂರು ಜಿಲ್ಲೆ ಯಲಗುಡಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಮನೆಯೊಂದರಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಬೋಧನೆ ವೀಕ್ಷಿಸುತ್ತಿರುವುದು
ಚಿಕ್ಕಮಗಳೂರು ಜಿಲ್ಲೆ ಯಲಗುಡಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಮನೆಯೊಂದರಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಬೋಧನೆ ವೀಕ್ಷಿಸುತ್ತಿರುವುದು   

ಚಿಕ್ಕಮಗಳೂರು: ತಾಲ್ಲೂಕಿನ ಆಲ್ದೂರು ಹೋಬಳಿಯ ಯಲಗುಡಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ‘ಯೂ ಟ್ಯೂಬ್‌’ನಲ್ಲಿ ಬೋಧನೆ ಆರಂಭಿಸಿದ್ದಾರೆ. ಕೊರೊನಾದ ಈ ಕಾಲಘಟ್ಟದಲ್ಲಿ ಮನೆಯಲ್ಲೇ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಲು ಮುಂದಾಗಿದ್ದಾರೆ.

ಗ್ರಾಮಸ್ಥರೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿ ಬೋಧನೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳಿಂದ ಈ ಕೆಲಸ ಆರಂಭವಾಗಿದೆ. ಶಾಲೆಯಲ್ಲಿ 17 ವಿದ್ಯಾರ್ಥಿಗಳು ಇದ್ದಾರೆ. ಮುಖ್ಯಶಿಕ್ಷಕ ಅಣ್ಣಯ್ಯ, ಸಹಶಿಕ್ಷಕಿ ಕೆ.ಎಚ್‌. ಗೀತಾ ಇದ್ದಾರೆ.

ಶಿಕ್ಷಕಿ ಗೀತಾ ಅವರು ಒಂದನೇ ತರಗತಿಯವರಿಗೆ ಪರಿಸರ ವಿಜ್ಞಾನ ಬೋಧನೆ ವಿಡಿಯೊ ಶುರು ಮಾಡಿದ್ದಾರೆ. ‘ಕುಟುಂಬ’ ಪಾಠವನ್ನು ‘ಯೂ ಟ್ಯೂಬ್‌‘ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ADVERTISEMENT

ಗ್ರಾಮದಲ್ಲಿ 40 ಮನೆಗಳು ಇವೆ. ಇಲ್ಲಿನ ಜನರು ಜೀವನ ನಿರ್ವಹಣೆಗೆ ಕೂಲಿ ಕೆಲಸ ಆಶ್ರಯಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳಿಂದ ಕಳೆದ ವರ್ಷದ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ ಈಗಿನ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ದಾನಿಗಳಿಂದ ಕನ್ನಡ, ಇಂಗ್ಲಿಷ್‌ ಕಾಫಿ ಪುಸ್ತಕ, ನೋಟ್‌ಬುಕ್‌ ಒದಗಿಸಲಾಗಿದೆ.

‘ಮೇಘ ಶಾಲಾ ಎಂಬ ಆ್ಯಪ್‌ ಬಳಸಿಕೊಂಡು ಪಾಠ ಸಿದ್ಧಪಡಿಸಿದ್ದೇನೆ. ಮಕ್ಕಳನ್ನು ಒಂದು ಕಡೆ ಅಂತರದಲ್ಲಿ ಕೂರಿಸಿ ಪಾಠ ಕೇಳಿಸಲು ಪ್ರಯತ್ನ ಮಾಡಿದ್ದೇವೆ. ಗ್ರಾಮದ ಯುವಕರು ಸಹಕಾರ ನೀಡಿದ್ದಾರೆ. ‘ಕುಟುಂಬ’ ಪಾಠ ವೀಕ್ಷಿಸಿ ಮಕ್ಕಳು, ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ’ ಎಂದು ಶಿಕ್ಷಕಿ ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯ ವಿದ್ಯಾರ್ಥಿಗಳ ಪೋಷಕರ ಪೈಕಿ ಆನಂದ್‌ ಎಂಬ ಒಬ್ಬರ ಬಳಿ ಮಾತ್ರ ಸ್ಮಾರ್ಟ್‌ಫೋನ್‌ ಇದೆ. ಗ್ರಾಮದಲ್ಲಿ ನೆಟ್‌ವರ್ಕ್‌ ಸಮಸ್ಯೆ ವಿಪರೀತ ಇದೆ. ನೆಟ್‌ವರ್ಕ್‌ ಇದ್ದ ಕಡೆ ಪಾಠದ ಯೂ ಟ್ಯೂಬ್‌ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು, ಮನೆಯಲ್ಲಿ ಆಫ್‌ಲೈನ್‌ನಲ್ಲಿ ಮಕ್ಕಳಿಗೆ ಅದನ್ನು ತೋರಿಸಲು ತಿಳಿಸಿದ್ದೇನೆ’ ಎಂದು ತಿಳಿಸಿದರು.

‘ನಾವಿಬ್ಬರೂ ಶಿಕ್ಷಕರು ಹೊರ ಊರಿನಿಂದ ಬರುವವರು ಎಂದು ‘ವಠಾರ ಶಾಲೆ’, ‘ಮನೆಯಲ್ಲಿ ಬೋಧನೆ’ಗಳಿಗೆ ಪೋಷಕರು ಆಸಕ್ತಿ ತೋರಲಿಲ್ಲ. ಹೀಗಾಗಿ, ಈ ಮಾರ್ಗ ಕಂಡುಕೊಂಡಿದ್ದೇವೆ. ಪೋಷಕರು, ಮಕ್ಕಳೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದೇವೆ. ಪಾಠ ಮನದಟ್ಟಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ಪಡೆಯುತ್ತೇವೆ. ಗೊಂದಲಗಳಿದ್ದರೆ ಪರಿಹರಿಸುತ್ತೇವೆ’ ಎಂದು ತಿಳಿಸಿದರು.

ವಿಡಿಯೊ ವೀಕ್ಷಣೆಗೆ ಲಿಂಕ್‌: https://www.youtube.com/watch?v=5uKw6dueY-c&feature=youtu.be

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.