ADVERTISEMENT

ನರಸಿಂಹರಾಜಪುರ: ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ

47 ಉಣುಗು ಮಾದರಿ ಸಂಗ್ರಹಿಸಿ ಪರಮಾಣು ಕ್ರಿಮಿ ಪ್ರಯೋಗಶಾಲೆಗೆ ರವಾನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 13:52 IST
Last Updated 14 ಮಾರ್ಚ್ 2025, 13:52 IST
ನರಸಿಂಹರಾಜಪುರ ತಾಲ್ಲೂಕಿನ ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವೇಣುಗೋಪಾಲ್ ನೇತೃತ್ವದ ತಂಡ ಭೇಟಿ ನೀಡಿ, ಉಣುಗು ಮಾದರಿ ಸಂಗ್ರಹಿಸಿತು
ನರಸಿಂಹರಾಜಪುರ ತಾಲ್ಲೂಕಿನ ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವೇಣುಗೋಪಾಲ್ ನೇತೃತ್ವದ ತಂಡ ಭೇಟಿ ನೀಡಿ, ಉಣುಗು ಮಾದರಿ ಸಂಗ್ರಹಿಸಿತು   

ನರಸಿಂಹರಾಜಪುರ: ತಾಲ್ಲೂಕಿನ ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವೇಣುಗೋಪಾಲ್ ನೇತೃತ್ವದ ತಂಡ ಭೇಟಿ ನೀಡಿ, ಉಣುಗು ಮಾದರಿ ಸಂಗ್ರಹಿಸಿತು.

ತಾಲ್ಲೂಕು ವ್ಯಾಪ್ತಿಯಲ್ಲಿ ಜನವರಿಯಿಂದ ಒಟ್ಟು 26 ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆ ಅಧಿಕಾರಿಗಳು ಮಂಗನ ಕಾಯಿಲೆ ಬಂದಿರುವಂತಹ ರೋಗಿಗಳ ಮನೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಬಿ.ಕಣಬೂರು ಹೋಬಳಿಯ ಕರ್ಕೇಶ್ವರ, ಐಬಿಸಿ ಎಸ್ಟೇಟ್, ಮೇಲ್ಪಾಲ್, ಕಾನೂರು, ಕಟ್ಟಿನ ಮನೆ, ಕಸಬಾ ಹೋಬಳಿಯ ಮಡಬೂರು ಸುತ್ತಮುತ್ತ ವಿವಿಧ ಗ್ರಾಮಗಳಲ್ಲಿ 47 ಉಣುಗು ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗಶಾಲೆಗೆ ಕಳಿಸಲಾಯಿತು.

ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವೇಣುಗೋಪಾಲ್ ಮಾತನಾಡಿ, ‘ಮಂಗನ ಕಾಯಿಲೆ ವೈರಸ್‌ನಿಂದ ಬರುವ ಕಾಯಿಲೆಯಾಗಿದ್ದು, ಸೋಂಕಿತ ಉಣುಗು ಮನುಷ್ಯನಿಗೆ ಕಚ್ಚುವುದರ ಮೂಲಕ ಈ ಕಾಯಿಲೆ ಮನುಷ್ಯರಲ್ಲಿ ಕಂಡು ಬರುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮೈ–ಕೈ ನೋವು, ಜ್ವರ, ಹೊಟ್ಟೆ ನೋವು, ಹಸಿವಾಗದಿರುವುದು, ಕಣ್ಣು ಕೆಂಪಾಗುವುದು, ವಸಡಿನಲ್ಲಿ ರಕ್ತಸ್ರಾವ, ಮಲದಲ್ಲಿ ರಕ್ತ ಕಂಡುಬರುವುದು ಇದರ ಲಕ್ಷಣ. ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷಿಸಿದರೆ ಮರಣ ಸಂಭವಿಸುತ್ತದೆ’ ಎಂದರು.

ADVERTISEMENT

ಕಾಡಿನ ಸುತ್ತಮುತ್ತ ಮಂಗಗಳು ಮರಣ ಹೊಂದುವುದು, ಈ ಕಾಯಿಲೆ ಆ ಪ್ರದೇಶದಲ್ಲಿ ಕಂಡುಬರುವ ಮುನ್ಸೂಚನೆಯಾಗಿದೆ. ಕಾಡಿಗೆ ಮತ್ತು ತೋಟಗಳಿಗೆ ಕೆಲಸಕ್ಕೆ ಹೋಗುವವರು ಆರೋಗ್ಯ ಇಲಾಖೆಯಿಂದ ವಿತರಿಸಿರುವ ಡೆಪ ತೈಲ ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಧರಿಸಿದ್ದ  ಬಟ್ಟೆಯನ್ನು ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಬಿಸಿಲಲ್ಲಿ ಒಣಗಿಸಿ ನಂತರ ಉಪಯೋಗಿಸಬೇಕು. ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಎಂದರು.

ನರಸಿಂಹರಾಜಪುರ ತಾಲ್ಲೂಕಿನಲ್ಲಿ ಒಟ್ಟು 459 ಸಂಶಯಾಸ್ಪದ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗದ ಪರಮಾಣು ಕ್ರಿಮಿ ಪ್ರಯೋಗಶಾಲೆ ಕಳುಹಿಸಲಾಗಿತ್ತು. ಇದರಲ್ಲಿ ಒಟ್ಟು 26 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಪ್ರಸ್ತುತ 22 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖ ಹೊಂದಿದ್ದು, ನಾಲ್ಕು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮೇಲ್ಪಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಗಣೇಶ್ ಭಟ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗೇಂದ್ರಪ್ಪ, ಆರ್.ಕೇಶವಮೂರ್ತಿ, ಪಿ.ಕೆ.ಭಗವಾನ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಮಹಮ್ಮದ್ ಇಲಿಯಾಸ್ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.