ADVERTISEMENT

ನೀರು ಮಿತವ್ಯಯ: ಜಾಗೃತಿ ಮೂಡಿಸಿ; ತಹಶೀಲ್ದಾರ್ ನೂರುಲ್ ಹುದಾ

ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಬರ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:57 IST
Last Updated 24 ಫೆಬ್ರುವರಿ 2026, 7:57 IST
ನರಸಿಂಹರಾಜಪುರದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ಬರಪೂರ್ವ ಸಿದ್ಧತಾ ಸಭೆ ನಡೆಯಿತು 
ನರಸಿಂಹರಾಜಪುರದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ಬರಪೂರ್ವ ಸಿದ್ಧತಾ ಸಭೆ ನಡೆಯಿತು    

ನರಸಿಂಹರಾಜಪುರ: ಬೇಸಿಗೆ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೋಲು ಮಾಡದಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಹಶೀಲ್ದಾರ್ ನೂರುಲ್ ಹುದಾ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬರಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ ನೀರು ಸಂಗ್ರಹ, ಮರು ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮ ಸಭೆಗಳಲ್ಲಿ, ನೀರು ನೈರ್ಮಲ್ಯ ಸಮಿತಿ ಸಭೆಗಳಲ್ಲಿ ನೀರನ್ನು ಮಿತವಾಗಿ ಬಳಸುವ ಬಗ್ಗೆ ತಿಳಿಸಬೇಕು. ಕುಡಿಯುವ ನೀರನ್ನು ಬಳಸಿ ವಾಹನ ತೊಳೆಯುವುದು, ತೋಟಕ್ಕೆ ಹಾಯಿಸುವುದು ಅಥವಾ ಬೇರೆ ಉದ್ದೇಶಕ್ಕೆ ಬಳಸುವುದನ್ನು ನಿಲ್ಲಿಸುವಂತೆ ಪ್ರಚಾರ ಮಾಡಬೇಕು. ಈ ರೀತಿ ಕಂಡುಬಂದಲ್ಲಿ ದಂಡ ವಿಧಿಸಬೇಕು ಎಂದರು.

ADVERTISEMENT

ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ರೋಹಿತ್ ಮಾತನಾಡಿ, ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಮಳೆಯಾಗದಿದ್ದರೆ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿ ತೋಟಗಳು ಒಣಗಿ ಹೋಗುವ ಸಾಧ್ಯತೆಯಿದೆ ಎಂದರು.

ತಾಲ್ಲೂಕಿನ ಮುತ್ತಿನಕೊಪ್ಪ ಪಂಚಾಯಿತಿ ವ್ಯಾಪ್ತಿಯ ಚೌಡಿಕಟ್ಟೆಯ ಗ್ರಾಮದಲ್ಲಿ 40 ಮನೆಗಳಿದ್ದು ಕೊಳವೆಬಾವಿ ನೀರು ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಮಡಬೂರಿನ ಗುಡ್ಡೆಕೊಪ್ಪದಲ್ಲೂ ನೀರಿನ ಸಮಸ್ಯೆಯಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಯ ಗಮನಕ್ಕೆ ತಂದರು. 

ಕಾನೂರು ಪಂಚಾಯಿತಿ ಮೇಲ್ ಮಡೋಡಿ ರಿಂಗ್ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ದೊಡ್ಡಹಡ್ಲು, ಕೋಣನಗುಡ್ಡೆ, ಗೋಣಿಕೊಪ್ಪದಲ್ಲಿ ಕೊಳವೆ ಬಾವಿ ಸಿದ್ಧವಿದ್ದು ವಿದ್ಯುತ್ ಪರಿವರ್ತಕ ಅಳವಡಿಸಬೇಕಾಗಿದೆ. ಜೋಗಿಮಕ್ಕಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರದಕ್ಕೆ ನೀರಿನ ಸಮಸ್ಯೆಯಾಗಿದ್ದು ಹೊಸದಾಗಿ ಕೊಳವೆ ಬಾವಿ ಕೊರೆಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.

ಬಿ.ಕಣಬೂರು ಗ್ರಾಮ ಪಂಚಾಯಿತಿಯ ಇಟ್ಟಿಗೆ ಸೀಗೂಡು, ಆದರ್ಶ್ ನಗರದಲ್ಲಿ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದ್ದು ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಸ್ಥಿತಿಯಿದೆ ಎಂದು ಪಿಡಿಒ ಹೇಳಿದರು. 

ಬನ್ನೂರು ಪಂಚಾಯಿತಿಯ ಹಲಸೂರಿನ 48 ಮನೆಗಳಿಗೆ ಒಂದು ಕೊಳವೆ ಬಾವಿಯಿಂದ ನೀರು ಪೂರೈಸಬೇಕಾಗಿದೆ. ರಾತ್ರಿ ವೇಳೆ ಕಾಡಾನೆಗಳ ಹಾವಳಿ ಇರುವುದರಿಂದ ಬೆಳಿಗ್ಗೆ ವೇಳೆ ತ್ರಿಫೇಸ್ ವಿದ್ಯುತ್ ಪೂರೈಸಿದರೆ ಅನುಕೂಲವಾಗಲಿದೆ ಎಂದು ಪಿಡಿಒ ಹೇಳಿದರು. ಕಡಹಿನಬೈಲು ಪಂಚಾಯಿತಿಯ ದೊಡ್ಡಿಹಟ್ಟಿ 30 ಮನೆಗಳಿದ್ದು ಕೊಳವೆಬಾವಿಯಲ್ಲಿ ನೀರು ಕಡಿಮೆಯಿದೆ. ಬಾಳೆಕೊಪ್ಪದ ಅಜ್ಜಿಗುಡ್ಡದಲ್ಲಿ ನೀರು ಕಡಿಮೆಯಿದೆ ಎಂದು ಅಧಿಕಾರಿ ಗಮನಕ್ಕೆ ತಂದರು.

ಮೆಣಸೂರು, ಬಾಳೆ, ಆಡುವಳ್ಳಿ, ಮಾಗುಂಡಿ, ಗುಬ್ಬಿಗಾ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್ ಮಾತನಾಡಿ, 15ನೇ ಹಣಕಾಸಿನ ಯೋಜನೆಯಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಕುಡಿಯುವ ನೀರಿನ ಪೂರೈಕೆಗೆ ಬಳಸಬೇಕು. ನೀರಿನ ಸಮಸ್ಯೆ ಹೆಚ್ಚಿದಲ್ಲಿ ದಿನಬಿಟ್ಟು ದಿನ ಅಥವಾ ಎರಡು ದಿನಕ್ಕೊಮ್ಮೆ ನೀರು ಬಿಡುವ ನಿರ್ಧಾರ ತೆಗೆದುಕೊಳ್ಳಬೇಕು. ಹೊಸದಾಗಿ ಕೊಳವೆ ಬಾವಿ ಕೊರೆಸಲು ಅನುದಾನದ ಲಭ್ಯತೆ ನೋಡಿಕೊಳ್ಳಬೇಕು ಎಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಸುನಿಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್.ಎಲ್. ಮನೀಷ್, ಕೃಷಿ ಸಹಾಯಕ ನಿರ್ದೇಶಕ ಮಹೇಶ್, ಕಂದಾಯ ನಿರೀಕ್ಷಕ ಮಂಜುನಾಥ್, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ, ಪಿಡಿಒ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.