ADVERTISEMENT

ಫೇಸ್‌ಬುಕ್‍ನಲ್ಲಿ ತೇಜಸ್ವಿ ಕೃತಿ ಬಗ್ಗೆ ಅವಹೇಳನೆ

ರಾಘವೇಂದ್ರ ಮೆಣಸೆ ಸುಬ್ರಹ್ಮಣ್ಯ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 15:17 IST
Last Updated 23 ಸೆಪ್ಟೆಂಬರ್ 2020, 15:17 IST
ಸಾಹಿತಿ ತೇಜಸ್ವಿ ಅವರ ಕುರಿತು ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಹೇಳಿಕೆ ಬರೆದ ರಾಘವೇಂದ್ರ ಮೆಣಸೆ ಸುಬ್ರಮಣ್ಯ ಎಂಬಾತನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬುಧವಾರ ಪೊಲೀಸ್ ಠಾಣೆಗೆ ಶೃಂಗೇರಿ ತಾಲ್ಲೂಕು ಯುವ ಒಕ್ಕಲಿಗರ ವೇದಿಕೆ ಮನವಿ ಸಲ್ಲಿಸಿದರು
ಸಾಹಿತಿ ತೇಜಸ್ವಿ ಅವರ ಕುರಿತು ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಹೇಳಿಕೆ ಬರೆದ ರಾಘವೇಂದ್ರ ಮೆಣಸೆ ಸುಬ್ರಮಣ್ಯ ಎಂಬಾತನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬುಧವಾರ ಪೊಲೀಸ್ ಠಾಣೆಗೆ ಶೃಂಗೇರಿ ತಾಲ್ಲೂಕು ಯುವ ಒಕ್ಕಲಿಗರ ವೇದಿಕೆ ಮನವಿ ಸಲ್ಲಿಸಿದರು   

ಶೃಂಗೇರಿ: ಸಾಹಿತಿ ಪೂರ್ಣಚಂದ್ರ ತೇಜಸ್ವಿ ಕೃತಿ ಕುರಿತು ಅವಹೇಳನೆ ಮಾಡಿರುವ ರಾಘವೇಂದ್ರ ಮೆಣಸೆ ಸುಬ್ರಮಣ್ಯ ಎಂಬಾತನ ವಿಚಾರಣೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲ್ಲೂಕು ಯುವ ಒಕ್ಕಲಿಗರ ವೇದಿಕೆ ವತಿಯಿಂದ ಬುಧವಾರ ಇಲ್ಲಿನ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ವೇದಿಕೆಯ ಅಧ್ಯಕ್ಷ ರಾಜೇಶ್ ದ್ಯಾವಂಟು ಮಾತನಾಡಿ, ಅನನ್ಯ ಸಾಹಿತಿ ತೇಜಸ್ವಿ ಅವರ ಜಾತಿಗೆ ಹೊಂದಿಕೊಂಡ ಮಾಂಸದ ಆಹಾರವನ್ನು ಜೋಡಿಸಿ ಅವಹೇಳನೆ ಮಾಡಲಾಗಿದೆ. ಭಾನುವಾರದ ಬಾಡೂಟ, ಕಾಫಿ ತೋಟದಲ್ಲಿ ಕಾಡುಕೋಳಿ, ಮಲೆನಾಡಿನ ಮಟನ್ ವೈರೈಟಿಗಳು, ಉಡದ ಮಾಂಸದ ಚಿದಂಬರ ರಹಸ್ಯ, ಅಲೆಮಾರಿಯ ಆಡುಗಳು, ಕಾಡೆಮ್ಮೆ ಕೊಂದುಂಡ ಕಥೆಗಳು, ನಿಗೂಢ ರೆಸಿಪಿಗಳ ನಿಗೂಢ ಮನುಷ್ಯರು, ಆ ಕ್ರಾಸಿನಲ್ಲಿ ಜಿಂಕೆ ಮಾಂಸದ ಜುಗಾರಿ ಎಂಬಿತ್ಯಾದಿ ಸಾಲುಗಳ ಮೂಲಕ ತೇಜಸ್ವಿ ಕೃತಿಗಳನ್ನು ಮಾಂಸ ತಿನ್ನುವ ಜಾತಿಯ ಸಾಹಿತಿ ಎಂದು ಅವಹೇಳನೆ ಮಾಡಿ ಪೋಸ್ಟ್‌ ಹಾಕಲಾಗಿದೆ’ ಎಂದು ದೂರಿದರು.

ತೇಜಸ್ವಿ ಅವರ ಅಪಾರ ಅಭಿಮಾನಿಗಳಿಗೆ ಹಾಗೂ ಸಮುದಾಯಕ್ಕೆ ಇದರಿಂದ ತುಂಬಾ ನೋವು ಉಂಟಾಗಿದೆ. ಸಮಾಜದ ಶಾಂತಿಯನ್ನು ಹಾಳು ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಪೊಲೀಸ್ ಹೆಡ್ ಕಾನ್‍ಸ್ಟೆಬಲ್ ನಂದೀಶ್ ಮನವಿ ಸ್ವೀಕರಿಸಿದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಪ್ರವೀಣ್, ಸದಸ್ಯ ಕೆ.ಎಸ್.ರಮೇಶ್, ಯುವ ಒಕ್ಕಲಿಗರ ವೇದಿಕೆ ಮಾಜಿ ಅಧ್ಯಕ್ಷ ಸಂತೋಷ್ ಕಾಳ್ಯ, ಪದಾಧಿಕಾರಿಗಳಾದ ಅಂಗುರ್ಡಿ ದಿನೇಶ್, ಅವಿನಾಶ್ ಕುಂಚೇಬೈಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.