ನರಸಿಂಹರಾಜಪುರ: ಗುಡಿಗಳು (ದೇವಾಲಯಗಳು) ಕೇವಲ ಪೂಜೆ, ಪ‍್ರಸಾದ, ರಥೋತ್ಸವಕ್ಕೆ ಸೀಮಿತವಾಗಿರದೆ ಜನರ ಜೀವನಾಡಿಯಾಗಿ ಪರಿವರ್ತನೆಯಾಗ ಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಮನೋಹರ ಮಠದ ಹೇಳಿದರು.
ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಮುದಾಯಭವನದಲ್ಲಿ ದೇವಾಲಯ ಸಂವರ್ಧನ ಸಮಿತಿ ಕರ್ನಾಟಕ, ನರಸಿಂಹರಾಜಪುರ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ದೇವಾಲಯ ಆಡಳಿತ ಸಮಿತಿ ಸದಸ್ಯರ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಪುರಾತನ ಕಾಲದಿಂದಲೂ ದೇವಾಲಯಗಳು ಪೂಜನೀಯ ಕೇಂದ್ರಗಳಾಗಿರುವುದರ ಜತೆಗೆ ವಿದ್ಯೆ, ಜ್ಞಾನ, ಉದ್ಯೋಗ ನೀಡುವ, ಆರ್ಥಿಕವಾಗಿ ಗ್ರಾಮಕ್ಕೆ ಸ್ವಾವಲಂಬನೆ ನೀಡುವ, ನ್ಯಾಯಕೊಡುವ ಸಂಸ್ಕೃತಿ, ಸಂಸ್ಕಾರ ಕೊಡುವ, ಸಾಮಾಜಿಕ ಸಮಸ್ಯೆ ಎದುರಿಸುವ, ಊರಿನ ಜನರಿಗೆ ರಕ್ಷಣೆ ನೀಡುವ ಕೇಂದ್ರಗಳಾಗಿವೆ ಎಂದರು.
ಜನರಲ್ಲಿ ಧರ್ಮ ಜಾಗೃತಿ, ಸಂಸ್ಕೃತಿ, ಅನ್ನವನ್ನು ಕೊಡುವ, ಸಂತೋಷ, ನೆಮ್ಮದಿ ಕೊಡುವ ಕಲೆ, ವಾಸ್ತುಶಿಲ್ಪ, ಸಂಗೀತ, ವಿದ್ಯೆಕಲಿಸುವ, ಶೈಕ್ಷಣಿಕ, ಸಾಮಾಜಿಕ ಕೇಂದ್ರವಾಗಿ ಜಾತಿ, ಮತ, ಪಕ್ಷಬೇಧವಿಲ್ಲದೆ ಭಗವಂತನ ಆರಾಧನೆ ಮಾಡುವ, ಜನರಿಗೆ ಔಷಧಿ ನೀಡುವ, ಆಯುರ್ವೆದದ ಬಗ್ಗೆ ತರಬೇತಿ ನೀಡುವ ಸೇವಾ ಕೇಂದ್ರಗಳಾಗಬೇಕು ಎಂಬುದು ದೇವಾಲಯ ಸಂವರ್ಧನ ಸಮಿತಿಯ ಆಶಯವಾಗಿದೆ ಎಂದರು.
ದುರ್ಬಲವಾಗಿರುವ ದೇವಸ್ಥಾನಗಳಿಗೆ ಸಬಲವಾಗಿರುವ ದೇವಸ್ಥಾನಗಳು ದೇಣಿಗೆ ನೀಡಬೇಕು ಎಂಬ ಉದ್ದೇಶದಿಂದ ದೇವಸ್ಥಾನ ಸಮಿತಿಗಳನ್ನು ಸಂಘಟಿಸಲಾಗುತ್ತಿದೆ. 29,650 ಗ್ರಾಮಗಳಲ್ಲಿ 2.50ಲಕ್ಷ ಖಾಸಗಿ ದೇವಸ್ಥಾಗಳಿವೆ. 34,563 ಮುಜರಾಯಿ ದೇವಸ್ಥಾನ ಗಳಿವೆ. ಆದರೆ, ಬಹುತೇಕ ಅರ್ಚಕರ ಸ್ಥಿತಿ ದಯನಿಯವಾಗಿದೆ. ವೇದ–ಆಗಮ, ಉಪನಿಷಿತ್ತು ಕಲಿತ 50ಸಾವಿರ ಮಂದಿ ಮಾತ್ರ ಇದ್ದಾರೆ. ಭಕ್ತರು, ಆಚರ್ಕರು, ಆಡಳಿತ ಮಂಡಳಿ ಸೇರಿ ದೇವಸ್ಥಾನ ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.
ದೇವಾಲಯ ಸಂವರ್ಧನ ಸಮಿತಿಯ ರಾಜೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನಗಳು ಮನುಷ್ಯನ ಜೀವನಾಡಿಯಾಗಿದ್ದು, ದೇವಾಲಯವನ್ನು ಪೂಜೆ, ಪ್ರಾರ್ಥನೆಗೆ ಸೀಮಿತಗೊಳಿಸಲಾಗಿದೆ. ಪ್ರಸ್ತುತ ದೇವಾಲಯಗಳನ್ನು ಬಹುಚಟುವಟಿಕೆಯ ಕೇಂದ್ರವಾಗಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿರುವ ದೇವಾಲಯಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ಚಿಂತನಾ ಸಭೆ ಆಯೋಜಿಸಲಾಗಿದೆ ಎಂದರು.
ಹಾಸನ ವಿಭಾಗ ಪ್ರಾಂತ್ಯ ಪ್ರಚಾರಕ ವಿಜಯಕುಮಾರ್, ದೇವಸ್ಥಾನ ಸಂವರ್ಧನ ಸಮಿತಿ ಜಿಲ್ಲಾ ಸಂಚಾಲಕ ಕಾರ್ತಿಕೇಯ ಕೆ.ಭಟ್, ಶೆಟ್ಟಿಕೊಪ್ಪ ಎಂ.ಮಹೇಶ್, ವಾಣಿ ನರೇಂದ್ರ ಭಾಗವಹಿಸಿದ್ದರು.
ತಾಲ್ಲೂಕಿನ ದೇವಸ್ಥಾನ ಆಡಳಿತ ಮಂಡಳಿಯವರು ಭಾಗವಹಿಸಿದ್ದರು. ಶೆಟ್ಟಿಕೊಪ್ಪ ಎಂ.ಮಹೇಶ್ ಮತ್ತು ತಂಡದವರಿಂದ ಅಂಟಿಕೆ, ಪಿಂಟಿಕೆ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.