ADVERTISEMENT

ಮೂಡಿಗೆರೆ | ಕಾಫಿ ಕೊಯ್ಲಿಗೆ ಕಾರ್ಮಿಕರಿಲ್ಲದೇ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 13:38 IST
Last Updated 8 ಜನವರಿ 2024, 13:38 IST
ಮೂಡಿಗೆರೆ ಪಟ್ಟಣದ ಲೋಕವಳ್ಳಿ ಬಳಿ ಕಾಫಿ ಕಣದಲ್ಲಿ ಮುಗ್ಗಲು ಬಂದಿರುವ ಕಾಫಿ
ಮೂಡಿಗೆರೆ ಪಟ್ಟಣದ ಲೋಕವಳ್ಳಿ ಬಳಿ ಕಾಫಿ ಕಣದಲ್ಲಿ ಮುಗ್ಗಲು ಬಂದಿರುವ ಕಾಫಿ   

ಮೂಡಿಗೆರೆ: ತಾಲ್ಲೂಕಿನ ಆರ್ಥಿಕ ಶಕ್ತಿಯಾದ ಕಾಫಿ ಉದ್ಯಮಕ್ಕೆ ನಾಲ್ಕು ದಿನಗಳ ಹಿಂದೆ ಸುರಿದ ಮಳೆಯು ಶಾಪವಾಗಿ ಪರಿಣಮಿಸಿದ್ದು, ಬಹುತೇಕ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.

ಈಗಾಗಲೇ ಅರೇಬಿಕಾ ಕಾಫಿ ಕೊಯ್ಲು ಶೇ 70ರಷ್ಟು ಮುಗಿದಿದ್ದು, ರೋಬಾಸ್ಟಾ ಕಾಫಿ ಕಟಾವಿಗೆ ಸಿದ್ಧವಾಗಿದೆ. ಹಲವೆಡೆ ಕೊಯ್ಲು ಪ್ರಾರಂಭವಾಗಿದೆ. ಈಚೆಗೆ ಮಳೆ ಸುರಿದ ಬಳಿಕ ಏಕಕಾಲದಲ್ಲಿ ಕಾಫಿ  ಹಣ್ಣಾಗತೊಡಗಿದ್ದು, ಕಟಾವು ಮಾಡಲು ಕಾರ್ಮಿಕರಿಲ್ಲದೇ ಪರದಾಡುವಂತಾಗಿದೆ. ತಾಲ್ಲೂಕಿನ ಹಲವೆಡೆ  ಕಾಫಿ ಕೊಯ್ಲಿಗೆ ಜನರು ಬೇಕಾಗಿದ್ದಾರೆ ಎಂಬ ಬೋರ್ಡ್‌ಗಳನ್ನು ನೇತು ಹಾಕಲಾಗಿದೆ.

ಬಿಸಿಲಿಗೆ ಒಣಗಲು ಹಾಕಿದ್ದ ಕಾಫಿ ಹಣ್ಣು ಮಳೆ ನೀರಿಗೆ ಸಿಲುಕಿ ಹಾನಿಯಾಗಿದೆ. ಕಾಫಿ ರಾಶಿ ಮಾಡಿ, ಎಷ್ಟೇ ನಿಗಾವಹಿಸಿ ಪ್ಲಾಸ್ಟಿಕ್ ಹೊದಿಕೆ ಹೊದೆಸಿದರೂ ಕಾಫಿ ಬೀಜ ನೆನೆದು ಮುಗ್ಗಲು ಬಂದಿದೆ. ಮೋಡ ಕವಿದ ವಾತಾವರಣ ಮುಂದುವರಿದಿರುವುದರಿಂದ ಕಾಫಿ ಒಣಗಿಸಲು ಹರಸಾಹಸ ಪಡುವಂತಾಗಿದೆ.

ADVERTISEMENT

ಉತ್ತರ ಕರ್ನಾಟಕದಿಂದ ಪಟ್ಟಣಕ್ಕೆ ಬರುವ ಕಾರ್ಮಿಕರನ್ನು ಕಾಫಿ ಕೊಯ್ಲಿಗಾಗಿ ಬೆಳೆಗಾರರು ಮುಗಿಬಿದ್ದು  ಕರೆದೊಯ್ಯುತ್ತಿದ್ದಾರೆ. ಕಾಫಿ ಬೆಳೆಗಾರ ಅನಿವಾರ್ಯತೆಯನ್ನೇ ಲಾಭ ಮಾಡಿಕೊಳ್ಳುತ್ತಿರುವ ಕೆಲವು ದಲ್ಲಾಳಿಗಳು, ಕಾರ್ಮಿಕರನ್ನು ಕರೆ ತರುವುದಾಗಿ ಮುಂಗಡ ಪಡೆದು ವಂಚಿಸುತ್ತಿದ್ದಾರೆ. ಮುಂಗಡ ಹಣ ನೀಡಿದ ಕಾಫಿ ಬೆಳೆಗಾರರು ಕಾರ್ಮಿಕರ ಬರುವಿಕೆಗಾಗಿ ಎದುರು ನೋಡುವಂತಾಗಿದೆ. ಕಾಫಿ ಎಸ್ಟೇಟ್‌ಗಳಲ್ಲಿ ನೆಲೆಸಿರುವ ಅಸ್ಸಾಂ ಕಾರ್ಮಿಕರು ಹೆಚ್ಚು ಕೂಲಿ ಆಕರ್ಷಣೆಯಿಂದ ಬೇರೆ ತೋಟಗಳಿಗೆ ರಾತ್ರೋರಾತ್ರಿ ಕೂಲಿ ಪಲಾಯನ ಮಾಡುತ್ತಿದ್ದಾರೆ. ಕಾರ್ಮಿಕರನ್ನು ಕರೆತಂದು ಕಾಫಿಯನ್ನು ಕೊಯ್ಲು ಮಾಡುವುದೇ ಬೆಳೆಗಾರರಿಗೆ ಸವಾಲಾಗಿದೆ.

‘ನಾಲ್ಕು ದಿನಗಳ ಹಿಂದೆ ಬಂದ ಮಳೆಯು ಕಾಫಿ ಬೆಳೆಗಾರರಿಗೆ ಬಾರಿ ಹೊಡೆತ ನೀಡಿದೆ. ಕಾಫಿ ಹಣ್ಣಾಗಿ ನೆಲಕ್ಕುದುರಿದೆ. ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಗಿಡದಲ್ಲಿ ಕಾಫಿ ಗಿಡಗಳಲ್ಲಿ ಹಣ್ಣುಗಳ ನಡುವೆ ಹೂವು ಅರಳಿವೆ. ಈಗ ಕಾಫಿ ಕೊಯ್ಲು ಮಾಡಿದರೆ ಹೂವು ಸಂಪೂರ್ಣ ನಾಶವಾಗುತ್ತದೆ. ಇದರಿಂದ ಮುಂದಿನ ವರ್ಷದ ಫಸಲು ಕೂಡ ಇಲ್ಲದಂತಾಗುತ್ತದೆ. ದಿಕ್ಕೇ ತೋಚದಂತಾಗಿದೆ’ ಎನ್ನುತ್ತಾರೆ ಬೆಳೆಗಾರರು.

ಬರದಿಂದ ತತ್ತರಿಸಿದ್ದ ಬೆಳೆಗಾರರಿಗೆ ನಾಲ್ಕು ದಿನಗಳ ಹಿಂದೆ ಸುರಿದ ಮಳೆಯು ಗಾಯದ ಮೇಲೆ ಬರೆ ಎಳೆದಾಂತಾಗಿದ್ದು ಸರ್ಕಾರವು ಕಾಫಿ ಬೆಳೆಗಾರರ ನೆರವಿಗೆ ಬರಬೇಕು.
ಬಾಲಕೃಷ್ಣ ಬಾಳೂರು, ತಾಲ್ಲೂಕು ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ
ಮೂಡಿಗೆರೆ ತಾಲ್ಲೂಕಿನ ತಳವಾರದಲ್ಲಿ ಕಾಫಿ ಕೊಯ್ಲಿಗೂ ಮುನ್ನವೇ ಮೊಗ್ಗಾಗಿರುವ ರೋಬಾಸ್ಟಾ ಕಾಫಿ
ಮೂಡಿಗೆರೆ ಪಟ್ಟಣದ ಅಂಗಡಿ ಮುಂಭಾಗದಲ್ಲಿ ಕಾಫಿ ಕೊಯ್ಲಿಗೆ ಕಾರ್ಮಿಕರು ಬೇಕಾಗಿದ್ದಾರೆ ಎಂಬ ನಾಮಫಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.