ADVERTISEMENT

ಮಾಜಿ ಸಚಿವ ಸಗೀರ್ ಅಹಮದ್ ಪತ್ನಿ ಹೆಸರಿನಲ್ಲಿದ್ದುದು ಸರ್ಕಾರಿ ಭೂಮಿ!

ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:12 IST
Last Updated 14 ಸೆಪ್ಟೆಂಬರ್ 2024, 16:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಗ್ರಾಮದ ಸರ್ವೆ ನಂಬರ್‌ನಲ್ಲಿ ಮಾಜಿ ಸಚಿವ ಸಿ.ಆರ್‌.ಸಗೀರ್ ಅಹಮದ್ ಅವರ ಪತ್ನಿ ಹೆಸರಿನಲ್ಲಿದ್ದ 31 ಎಕರೆ, 31 ಗುಂಟೆ ಜಾಗವು ಸರ್ಕಾರಿ ಜಾಗ ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದುವರೆಗೂ ಖಾಸಗಿ ಸ್ವತ್ತಿನಲ್ಲಿದೆ ಎಂದುಕೊಂಡಿದ್ದ ದಬೆದಬೆ ಜಲಪಾತ ಮತ್ತು ಅದಕ್ಕೆ ಸಾಗುವ ರಸ್ತೆ ಪ್ರದೇಶ ಕೂಡಾ ಸರ್ಕಾರದ್ದು ಎಂದೂ ಘೋಷಿಸಿದ್ದಾರೆ.

ADVERTISEMENT

ಮೂಲತಃ ಈ ಜಾಗ ಇನಾಂ ದತ್ತಾತ್ರೇಯ ಪೀಠ, ಬಾಬಾಬುಡನ್ ದರ್ಗಾ ಧಾರ್ಮಿಕ ಸಂಸ್ಥೆಗೆ ಸೇರಿದ್ದಾಗಿತ್ತು. ಸಂಸ್ಥೆಯ ವಹಿವಾಟುದಾರರಾಗಿದ್ದ ಸಜ್ಮದ್ ಅವರು ವಾಸಿಮಲ್ ಎಂಬುವವರಿಗೆ ಗೇಣಿಗೆ ನೀಡಿದ್ದರು. 

1955ರಲ್ಲಿ ಜಾರಿಗೆ ಬಂದಿದ್ದ ಕರ್ನಾಟಕ ರಿಲೀಜಿಯಸ್ ಆ್ಯಂಡ್ ಚಾರಿಟಬಲ್ ಇನಾಂ ಅಬಾಲಿಷನ್ ಕಾಯ್ದೆಯ ಪ್ರಕಾರ ಅಷ್ಟೂ ಜಾಗ ಸರ್ಕಾರಕ್ಕೆ ಸೇರ್ಪಡೆಯಾಗಿತ್ತು. 

ವಾಸಿಮಲ್ ಅವರು 1966ರಲ್ಲಿ ಇ‌ಲ್ಲಿಸ್ ಖಾನ್ ಎಂಬುವರಿಗೆ ಮಾರಾಟ ಮಾಡಿದ್ದು, ಅವರಿಂದ ಮೆ.ಸಿಪಾನಿ ಆ್ಯಂಡ್ ಕಂಪನಿ ಖರೀದಿ ಮಾಡಿದೆ. ಆ ನಂತರ 1978ರಲ್ಲಿ ಸಿ.ಆರ್. ಸಗೀರ್ ಅಹಮದ್ ಅವರ ಪತ್ನಿ ಫಾತಿಮಾಬಿ ಖರೀದಿ ಮಾಡಿದ್ದಾರೆ. ಅದಾದ ಬಳಿಕ ಫಾತಿಮಾಬಿ ಅವರು ಇನಾಂ ರದ್ದತಿ ಕಾಯ್ದೆಯಲ್ಲಿನ ಅವಕಾಶದಂತೆ ಅದಿಭೋಗದಾರಿಕೆ ಹಕ್ಕನ್ನು ಭೂನ್ಯಾಯ ಮಂಡಳಿ ಮುಂದೆ ಮಂಡಿಸುತ್ತಾರೆ. 1994ರಲ್ಲಿ ಅದಿಭೋಗದಾರಿಕೆ ಹಕ್ಕನ್ನು ನ್ಯಾಯ ಮಂಡಳಿ ನೋಂದಾಯಿಸಿ ಆದೇಶಿಸಿದೆ. 

ಇದೇ ಜಾಗದಲ್ಲಿ ಇದ್ದ ದಬೆದಬೆ ಜಲಪಾತಕ್ಕೆ ಹೋಗುವ ರಸ್ತೆಯು ಸಾರ್ವಜನಿಕ ರಸ್ತೆಯಲ್ಲ ಎಂದು ಫಾತಿಮಾಬಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ರಸ್ತೆ ಯಾರಿಗೆ ಸೇರಿದ್ದು ಎಂಬುದನ್ನು ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶಿಸಿತ್ತು. 

ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ‘1993ರ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ರದ್ದುಗೊಳಿಸಿದ ಇನಾಂ ಜಮೀನುಗಳನ್ನು ಮರಳಿ ಅದಿಭೋಗದಾರಿಕೆ ನೀಡುವ ಅಧಿಕಾರ ಇರುವುದು ಜಿಲ್ಲಾಧಿಕಾರಿಗೆ ಮಾತ್ರ. ಆದ್ದರಿಂದ ಭೂನ್ಯಾಯ ಮಂಡಳಿ ನೀಡಿರುವ ಮಂಜೂರಾತಿ ಅಸಿಂಧು ಎಂದು ತೀರ್ಮಾನಿಸಲಾಗಿದೆ ಎಂದು ಆದೇಶಿಸಿದ್ದಾರೆ.

ಭೂನ್ಯಾಯ ಮಂಡಳಿಯ ಆದೇಶದ ಜೆರಾಕ್ಸ್ ಪ್ರತಿ ಇದ್ದು, ಮೂಲಪ್ರತಿ ಲಭ್ಯವಿಲ್ಲ. ಫಾತಿಮಾಬಿ ಅವರ ಹಕ್ಕುದಾರಿಕೆ ಕಾನೂನುಬದ್ಧವಲ್ಲ. ಐದು ಸರ್ವೆ ನಂಬರ್‌ಗಳಲ್ಲಿರುವ ಅಷ್ಟೂ ಜಾಗ ಸರ್ಕಾರಕ್ಕೆ ಸೇರಿದೆ. ಕಾಲುದಾರಿ, ಬಂಡಿದಾರಿ, ರಸ್ತೆಗಳ ಮೇಲೂ ಅವರಿಗೆ ಹಕ್ಕುದಾರಿಕೆ ಇಲ್ಲ. ‘ಸರ್ಕಾರಿ ಜಾಗ’ ಎಂದು ಪಹಣಿಯಲ್ಲಿ ದಾಖಲಿಸಬೇಕು ಎಂದು ತಹಶೀಲ್ದಾರ್‌ ಅವರು ಸೂಚನೆ ನೀಡಿ ಸೆ.3ರಂದು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.