ADVERTISEMENT

ಕಳಸ: ಜನರ ನಿದ್ದೆಗೆಡಿಸಿದ ಜೀರುಂಡೆ ಸದ್ದು

ಕೀಟ ಸಂಖ್ಯೆಯಲ್ಲಿ ಭಾರಿ ಏರಿಕೆ; ಸತತ ಸದ್ದಿನಿಂದ ಜನರು ಹೈರಾಣ

ರವಿ ಕೆಳಂಗಡಿ
Published 23 ಆಗಸ್ಟ್ 2023, 4:40 IST
Last Updated 23 ಆಗಸ್ಟ್ 2023, 4:40 IST
ಕಳಸದಲ್ಲಿ ಮನೆಯ ಒಳಗೆ ಕಂಡು ಬರುತ್ತಿರುವ ಜೀರುಂಡೆ
ಕಳಸದಲ್ಲಿ ಮನೆಯ ಒಳಗೆ ಕಂಡು ಬರುತ್ತಿರುವ ಜೀರುಂಡೆ   

ಕಳಸ (ಚಿಕ್ಕಮಗಳೂರು): ಕಿವಿಗಡಚಿಕ್ಕುವಂತೆ ವಿಶಿಷ್ಟ ಸದ್ದು ಮಾಡುವ ಜೀರುಂಡೆಗಳ ಹಾವಳಿ ವಾರದಿಂದೀಚೆಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಗಣನೀಯವಾಗಿ ಹೆಚ್ಚಿದೆ. ಹಗಲು ರಾತ್ರಿ ಸತತವಾಗಿ ಕಿವಿಗಪ್ಪಳಿಸುವ ಜೀರುಂಡೆಗಳ ಸದ್ದಿನಿಂದ ಜನರು ಹೈರಾಣಾಗಿದ್ದಾರೆ.

ಮನೆಯ ಹೊರಗೆ ಅರಣ್ಯ ಪ್ರದೇಶದಲ್ಲಿ, ತೋಟಗಳಲ್ಲಿ ಕಂಡುಬರುತ್ತಿದ್ದ ಈ ಕೀಟಗಳು ಈಚೆಗೆ ಮನೆಯಂಗಳದ ಮರದಲ್ಲಿ, ಮನೆಯ ಗೋಡೆಯ ಮೇಲೂ ಕಾಣಿಸುತ್ತಿವೆ. ಮನೆಯ ಒಳಗೂ ಬಂದು ಒಂದೇ ಸಮನೆ ಸದ್ದು ಮೊಳಗಿಸುತ್ತಿವೆ. ಜನವಸತಿ ಪ್ರದೇಶದಲ್ಲಿ ಅಪರೂಪವಾಗಿದ್ದ ಜೀರುಂಡೆಗಳ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚುವುದಕ್ಕೆ ಕಾರಣ ಏನು ಎಂಬ ಕುತೂಹಲ ಹೆಚ್ಚಾಗಿದೆ.

ಈ ಬಾರಿ ಮಳೆಯ ಪ್ರಮಾಣ ಕಡಿಮೆ ಆಗಿ, ಇವುಗಳ ಸಂತಾನೋತ್ಪತ್ತಿ ಭಾರಿ ಪ್ರಮಾಣದಲ್ಲಿ ಆಗಿರಬಹುದು ಎಂದೂ ಕೃಷಿಕರು ತರ್ಕಿಸುತ್ತಿದ್ದಾರೆ. 

ADVERTISEMENT

ಮಲೆನಾಡಿನಲ್ಲಿ ಸಾಮಾನ್ಯವಾಗಿರುವ ಇವು ಒಂದು ವರ್ಷ ಆಯಸ್ಸು ಹೊಂದಿವೆ. ಹೆಣ್ಣು ಜೀರುಂಡೆ ಮರಗಳ ರೆಂಬೆಗಳ ಮೇಲೆ ಒಮ್ಮೆಗೆ 400ರಷ್ಟು ಮೊಟ್ಟೆಗಳನ್ನು ಇಡುತ್ತದೆ. 6 ರಿಂದ 10 ವಾರಗಳ ನಂತರ ಮರಿಗಳು ಮೊಟ್ಟೆಯಿಂದ ಹೊರಬಂದು ಮಣ್ಣಿನಡಿ ಸೇರಿಕೊಳ್ಳುತ್ತವೆ.

ಈ ಕೀಟಗಳು ಮರಗಳ ಬೇರುಗಳ ದ್ರವಾಹಾರ ಸೇವಿಸಿ ಜೀವನದ ಬಹುಪಾಲನ್ನು ಮಣ್ಣಿನಡಿಯಲ್ಲೇ ಕಳೆಯುತ್ತವೆ. ಅನುಕೂಲಕರ ವಾತಾವರಣ ಕಂಡು ಬಂದಾಗ ದೇಹದ ಕವಚ ಹರಿದು ಹೊರಬರುತ್ತವೆ. ಸಂಗಾತಿಯನ್ನು ಹುಡುಕಿ ಸಂತಾನೋತ್ಪತ್ತಿ ಮಾಡುತ್ತವೆ. ಮಣ್ಣಿನಿಂದ ಹೊರಗೆ ಬಂದ ನಂತರ 4 ರಿಂದ 6 ವಾರ ಮಾತ್ರ ಬದುಕುತ್ತವೆ. ಸಂಗಾತಿಯನ್ನು ಆಕರ್ಷಿಸಲು ಗಂಡು ಜೀರುಂಡೆಗಳು ಕಿಬ್ಬೊಟ್ಟೆ ಭಾಗದಿಂದ ಸದ್ದು ಹೊರಡಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಹವಾಮಾನ ಏರುಪೇರಾದಾಗ ಒಂದು ಎಕರೆ ವ್ಯಾಪ್ತಿಯಲ್ಲಿ 15 ಲಕ್ಷದಷ್ಟು ಸಂಖ್ಯೆಯಲ್ಲಿ ಕೂಡ ಕಂಡು ಬರುವ ಸಾಧ್ಯತೆ ಇದೆ ಎಂದು ನ್ಯಾಶನಲ್ ಜಿಯಾಗ್ರಫಿ ಸಂಸ್ಥೆಯ ಅಧ್ಯಯನ ಹೇಳುತ್ತದೆ. 

ಸಾವಿರಾರು ಜೀರುಂಡೆಗಳು ಏಕಕಾಲಕ್ಕೆ ಹೊರಡಿಸುವ ಕಿವಿ ಕೋರೈಸುವ ಸದ್ದು ಸದ್ಯಕ್ಕೆ ತಾಲ್ಲೂಕಿನ ಜನರ ನಿದ್ದೆಗೆಡಿಸಿದೆ.

ಹವಾಮಾನ ವೈಪರೀತ್ಯದಿಂದ ಜೀರುಂಡೆಗಳ ಸಂಖ್ಯೆ ಹೆಚ್ಚಿರಬಹುದು. ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾಗಿದೆ. ಇದರಿಂದ ಈ ವರ್ಷ ಕಂಬಳಿ ಹುಳುಗಳೂ ನಾಪತ್ತೆ ಆಗಿವೆ. ಮಳೆ ಹುಳುಗಳು ಅಕಾಲದಲ್ಲಿ ಕಂಡು ಬರುತ್ತಿವೆ.
ನಾಗರಾಜ ಕೂವೆ ಪರಿಸರ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.