ADVERTISEMENT

‘ತ್ರಿಭಾಷಾ ಸೂತ್ರ ಇರಿಯುವ ತ್ರಿಶೂಲ ಎಂದಿದ್ದ ಕುವೆಂಪು’

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವೈ.ಎಸ್‌.ವಿ.ದತ್ತ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:55 IST
Last Updated 14 ಅಕ್ಟೋಬರ್ 2025, 6:55 IST
ಕಡೂರು ತಾಲ್ಲೂಕು ದೊಡ್ಡಪಟ್ಟಣಗೆರೆಯ ಕಟ್ಟೆಹೊಳೆಯಮ್ಮ ದೇವಾಲಯದಲ್ಲಿ ಭಾನುವಾರ ನಡೆದ ಕಡೂರು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ರಂಗಗಳ ಸಾಧಕರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೈ.ಎಸ್‌.ವಿ.ದತ್ತ, ಪಿ.ಎಚ್‌.ವಿಜಯಲಕ್ಷ್ಮಿ, ಸೂರಿ ಶ್ರೀನಿವಾಸ್‌, ನೀಲಕಂಠಪ್ಪ ಇದ್ದರು
ಕಡೂರು ತಾಲ್ಲೂಕು ದೊಡ್ಡಪಟ್ಟಣಗೆರೆಯ ಕಟ್ಟೆಹೊಳೆಯಮ್ಮ ದೇವಾಲಯದಲ್ಲಿ ಭಾನುವಾರ ನಡೆದ ಕಡೂರು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ರಂಗಗಳ ಸಾಧಕರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೈ.ಎಸ್‌.ವಿ.ದತ್ತ, ಪಿ.ಎಚ್‌.ವಿಜಯಲಕ್ಷ್ಮಿ, ಸೂರಿ ಶ್ರೀನಿವಾಸ್‌, ನೀಲಕಂಠಪ್ಪ ಇದ್ದರು   

ಕಡೂರು: ಮಹಾಕವಿ ಕುವೆಂಪು ಅವರ ಕಾವ್ಯದ ಸಾಲುಗಳಲ್ಲಿ "ಸತ್ತಂತಿಹರನು ಬಡಿದೆಚ್ಚರಿಸುʼ ಎನ್ನುವಂತಹ ರೋಷಾವೇಶ ವ್ಯಕ್ತವಾಗಲು ಕನ್ನಡದ ಬಗ್ಗೆ ಕನ್ನಡಿಗರ ನಿರಾಸಕ್ತಿಯೇ ಕಾರಣವಾಗಿದೆ ಎಂದು ಸಂಸ್ಕೃತಿ ಚಿಂತಕ ವೈ.ಎಸ್‌.ವಿ.ದತ್ತ ಅಭಿಪ್ರಾಯಪಟ್ಟರು.

ಕಡೂರು ತಾಲ್ಲೂಕು ದೊಡ್ಡಪಟ್ಟಣಗೆರೆಯ ಕಟ್ಟೆಹೊಳೆಯಮ್ಮ ದೇವಾಲಯದಲ್ಲಿ ಭಾನುವಾರ ನಡೆದ ಕಡೂರು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ, ಇಂಗ್ಲಿಷ್‌, ಹಿಂದಿಯ ತ್ರಿಭಾಷಾ ಸೂತ್ರ ಕನ್ನಡಿಗರನ್ನು ಇರಿಯುವ ತ್ರಿಶೂಲ ಎಂದು ಕುವೆಂಪು ಬಣ್ಣಿಸಿದ್ದರು. ರಾಜ್ಯಕ್ಕೆ ದ್ವಿಭಾಷಾ ಸೂತ್ರವೇ ಮೇಲು, ಒಂದು ಮಾತೃಭಾಷೆ, ಇನ್ನೊಂದು ಐಚ್ಛಿಕ ಭಾಷೆ ಇರಲಿ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಕನ್ನಡಿಗರ ನಿರಾಸಕ್ತಿ ಅವರನ್ನು ಕೆಣಕಿ ಸಾಹಿತ್ಯದ ಆವೇಶ ಮೇಳೈಸಿ ಕಾವ್ಯ ಸೃಷ್ಟಿಯಾಗಿತ್ತು. ಭಾಷೆಯ ಉಳಿವಿಗೆ ಮತ್ತು ಕನ್ನಡಪರ ವಾತಾವರಣ ಸೃಷ್ಟಿಗೆ ಸಾತ್ವಿಕ ಸಿಟ್ಟಿನ ಅಗತ್ಯ ಎನ್ನುವುದು ಅವರ ನಿಲುವಾಗಿತ್ತು ಎಂದು ವಿವರಿಸಿದರು.

ADVERTISEMENT

ಸದ್ಯ ರಾಜ್ಯಸರ್ಕಾರ ದ್ವಿಭಾಷಾ ಸೂತ್ರ ಅನುಸರಿಸಲು ಮುಂದಾಗಿರುವುದು 6 ದಶಕಗಳ ಕನ್ನಡ ಪರ ಹೋರಾಟಕ್ಕೆ ಕೊಟ್ಟ ಮಾನ್ಯತೆ ಎಂದೇ ಭಾವಿಸಬೇಕು. ಕನ್ನಡ ಓದುವ, ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ಮತ್ತು ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ತಲುಪಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಜಾಲತಾಣಗಳ ಭರಾಟೆಯಲ್ಲಿ ಸಾಂಸಾರಿಕ ಮೌಲ್ಯಗಳು ಛಿದ್ರವಾಗಿ, ಮಾನವ ಸಂಬಂಧಗಳು ಭಗ್ನವಾಗುವ ಅಪಾಯಕಾರಿ ಸನ್ನಿವೇಶ ಕಾಡುತ್ತಿದೆ. ಇಂತಹ ವಿಶ್ವಾಸಘಾತಕ ವ್ಯವಸ್ಥೆಗೆ ಯುವಸಮೂಹ ಮಾರು ಹೋಗಿದೆ. ಓದುವ ಹವ್ಯಾಸವನ್ನು ಪುನರುಜ್ಜೀವನಗೊಳಿಸಿ ಯುವ ಪೀಳಿಗೆಯಲ್ಲಿ ಪ್ರೀತಿ, ಅಂತಃಕರಣ, ಮಾನವೀಯತೆ ಹುಟ್ಟಿಸುವ ಪ್ರಯತ್ನ ಸಾಗಲಿ. ಮನುಷ್ಯ ಸಂಬಂಧಗಳು ಗಟ್ಟಿಯಾಗಲು ಪರಸ್ಪರ ಸಂವಹನ ಅಗತ್ಯವಾಗಿದೆ ಎಂದರು.

ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಇಮ್ರಾನ್‌ ಅಹಮದ್‌ ಬೇಗ್‌ ಮಾತನಾಡಿ, ಕನ್ನಡದ ಮಕ್ಕಳನ್ನು ಸಾಹಿತ್ಯಕ ಚಟುವಟಿಕೆಗಳತ್ತ ಸೆಳೆಯುವ ಕೆಲಸ ಆಗಬೇಕಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕಟ್ಟೆಹೊಳೆಯಮ್ಮ ಜಾತ್ರಾ ಸಮಿತಿ ಅಧ್ಯಕ್ಷ ಎಸ್‌.ಬಿ.ಹನುಮಂತಪ್ಪ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಪಿ.ಎಚ್‌.ವಿಜಯಲಕ್ಷ್ಮಿ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌, ತಾಲ್ಲೂಕು ಕಸಾಪ ಅಧ್ಯಕ್ಷ ಪರಮೇಶ್‌, ಗ್ರಾಮದ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ, ಟಿ.ಗೋವಿಂದಸ್ವಾಮಿ, ದಾಸಯ್ಯನ ಗುತ್ತಿ ಚಂದ್ರಪ್ಪ, ಕುರುಬಗೆರೆ ಲೋಕೇಶ್‌, ಪೂರ್ವಿಕಾ, ಸಿ.ಕೆ.ಸ್ವಾಮಿ, ಲಕ್ಷ್ಮೀನಾರಾಯಣಪ್ಪ, ಹನುಮಂತಪ್ಪ, ಲತಾ ರಾಜಶೇಖರ್‌ ಮತ್ತಿತರರು ಹಾಜರಿದ್ದರು.

ನಾಲ್ಕು ನಿರ್ಣಯ ಅಂಗೀಕಾರ

ಕೃತಿ ಬಿಡುಗಡೆ ಸಮಾರೋಪಕ್ಕೂ ಮುನ್ನ ನಡೆದ ಬಹಿರಂಗ ಅಧಿವೇಶನದಲ್ಲಿ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಲಾಯಿತು. ದೊಡ್ಡಪಟ್ಟಣಗೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಕ್ರಮ ವಹಿಸಬೇಕು. ಹುಲಿಕಟ್ಟೆ ಬಳಿಯ ಜೈನಸ್ಮಾರಕಗಳ ರಕ್ಷಣೆ ಕ್ರಮ ವಹಿಸಬೇಕು. ತಂಗಲಿ ಬಳಿಯ ಕೆ.ವೆಂಕಟಲಕ್ಷ್ಮಮ್ಮ ಅವರ ಸಮಾಧಿ ಪುನರುಜ್ಜೀವಗೊಳಿಸುವುದು. ದೊಡ್ಡಪಟ್ಟಣಗೆರೆಯ ಐತಿಹಾಸಿಕ ಲಕ್ಷ್ಮೀನಾರಾಯಣ ದೇವಾಲಯದ ಜೀರ್ಣೋದ್ಧಾರ ಆಗಬೇಕು. ಕಡೂರು ಕಲಾಸಂಘವನ್ನು ಪುನರುಜ್ಜೀವನಗೊಳಿಸಿ ಅದರಲ್ಲಿ ಸಾಹಿತ್ಯ ಸಂಗೀತ ಕಲಾ ಚಟುವಟಿಕೆಗೆ ಪೋಷಣೆ ನೀಡಬೇಕು ಎಂಬ ಸರ್ವಾನುಮತದ ನಿರ್ಣಯಗಳನ್ನು ಅಂಗೀಕರಿಸಲಾಯಿತು.   ಸಮ್ಮೇಳನದಲ್ಲಿ ಚಿಕ್ಕಬಾಸೂರು ಅನಂತು ವಿರಚಿತ ‘ಸಾಗದ ದಾರಿʼ ಕಾದಂಬರಿ ಸಮ್ಮೇಳನಾಧ್ಯಕ್ಷೆ ವಿಜಯಲಕ್ಷ್ಮಿ ಅವರ ‘ನೆನಪರಳಿದಾಗʼ ಕವನ ಸಂಕಲನ ದೀಪಕ್‌ ನಿಡಘಟ್ಟ ಅವರ ʼಮಾಯಾಗಿರಿಯ ನೆರಳುʼ ಪತ್ತೇದಾರಿ ಕಾದಂಬರಿ ಶಿವಗಂಗಮ್ಮ ರಚಿಸಿದ ‘ದಶರೂಪಕʼ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಬೀರೂರಿನ ಶಾಸನ ಸಂಶೋಧಕ ಡಿ.ಇಸ್ಮಾಯಿಲ್‌ ಹಿರೇನಲ್ಲೂರು ಪಾಂಡುರಂಗ ಶಿಶು ಸಾಹಿತಿ ಸಿಂಗಟಗೆರೆ ಸಿದ್ದಪ್ಪ ಅವರಿಗೆ ʼಸಾಹಿತ್ಯ ಸಿರಿʼ ವೈ.ಎಸ್‌.ರವಿಪ್ರಕಾಶ್‌ ಮತ್ತು ಶಿಕ್ಷಕಿ ಸೀತಾಲಕ್ಷ್ಮಿ ಅವರಿಗೆ ‘ಕನ್ನಡಶ್ರೀʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.