ADVERTISEMENT

ಕೊಟ್ಟಿಗೆಹಾರ|ವಿಶ್ವಮಾನವ ಸಂದೇಶ ಮೈಗೂಡಿಸಿಕೊಂಡಿದ್ದ ತೇಜಸ್ವಿ: ಪ್ರದೀಪ್ ಕೆಂಜಿಗೆ

ಬಣಕಲ್ ಪ್ರೌಢಶಾಲೆಯಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 13:10 IST
Last Updated 24 ಜೂನ್ 2023, 13:10 IST
ಬಣಕಲ್ ಪ್ರೌಢಶಾಲೆಯಲ್ಲಿ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಪೂಚಂತೇ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಶಾಂತ ಕುಮಾರ್, ವಿಶಾಲ ನಾಗರಾಜ್, ಟಿ.ಎಂ.ಆದರ್ಶ್ ಇದ್ದರು
ಬಣಕಲ್ ಪ್ರೌಢಶಾಲೆಯಲ್ಲಿ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಪೂಚಂತೇ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಶಾಂತ ಕುಮಾರ್, ವಿಶಾಲ ನಾಗರಾಜ್, ಟಿ.ಎಂ.ಆದರ್ಶ್ ಇದ್ದರು   

ಕೊಟ್ಟಿಗೆಹಾರ: ‘ಪರಿಸರ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಕೆ.ಪಿ.ಪೂರ್ಣಚಂದ್ರತೇಜಸ್ವಿ ಅವರು ಕುವೆಂಪು ಅವರ ವಿಶ್ವಮಾನವ ಸಂದೇಶವನ್ನೂ ಮೈಗೂಡಿಸಿಕೊಂಡಿದ್ದರು’ ಎಂದು ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಟ್ರಸ್ಟ್ ಕಡೂರು ಇದರ ಆಶ್ರಯದಲ್ಲಿ ಬಣಕಲ್ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಮೌಲ್ಯಗಳ ಪರಿಕಲ್ಪನೆಯನ್ನು ವೈಜ್ಞಾನಿಕವಾಗಿ ಹೇಗೆ ಸಾಧಿಸಬಹುದು ಎಂಬುದು ತೇಜಸ್ವಿ ಅವರ ಕಥೆಗಳಲ್ಲಿ ಅನಾವರಣಗೊಂಡಿವೆ. ಅವರು ಕಾಡುಗಳಲ್ಲಿ ವಿಶೇಷವಾದ ಪ್ರಾಣಿ ಮತ್ತು ಪಕ್ಷಿಗಳ ಅನ್ವೇಷಣೆ ಮಾಡುವ ಮೂಲಕ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಂ.ಶಾಂತಕುಮಾರ್ ಮಾತನಾಡಿ, ಪರಿಸರದ ಕಥೆಗಳು, ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಫೀಸು ಕೃತಿಗಳಲ್ಲಿ ತೇಜಸ್ವಿ ಅವರ ಸಾಮಾಜಿಕ ಪರಿಕಲ್ಪನೆಯನ್ನು ಕಾಣಬಹುದು ಎಂದರು.

ತೇಜಸ್ವಿ ಕೃತಿಯಲ್ಲಿ ಸ್ತ್ರೀ ಪಾತ್ರಗಳು ಕುರಿತು ಮೂಡಿಗೆರೆಯ ವಿಶಾಲ ನಾಗರಾಜ್ ಮಾತನಾಡಿ, ಕಿರಗೂರಿನ ಗೈಯ್ಯಾಳಿಗಳು ಕಥೆಯಲ್ಲಿ ಹಲವು ವಿಶೇಷವಾದ ಸ್ತ್ರೀ ಪಾತ್ರಗಳಿವೆ. ಗ್ರಾಮೀಣ ಪ್ರದೇಶದ ಕೃಷಿ ಸಂಸ್ಕೃತಿಯಲ್ಲಿ ಬರುವ ಎಲ್ಲ ಪಾತ್ರಗಳನ್ನು ತೇಜಸ್ವಿ ಅವರು ಕೃತಿಗಳಲ್ಲಿ ಸೃಷ್ಟಿಸುತ್ತಿದ್ದರು. ಗ್ರಾಮೀಣ ಸೊಗಡಿನ ಹಬ್ಬ, ಹರಿದಿನಗಳು ಅವುಗಳ ಸಂಸ್ಕೃತಿಯ ಪರಿಚಯವನ್ನೂ ಮಾಡಿಕೊಡುತ್ತಿದ್ದರು ಎಂದು ತಿಳಿಸಿದರು.

ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಜಿಲ್ಲೆಯಲ್ಲಿ ಇಂಥ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತಿಗಳನ್ನು ಹಾಗೂ ಅವರ ಕೃತಿಗಳನ್ನು ಪರಿಚಯಿಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಸಾಹಿತ್ಯ ವೇದಿಕೆ ಮೂಲಕ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಪೂಚಂತೇ ಕವಿ ಪರಿಚಯವನ್ನು ಕಾಫಿನಾಡಿನ ಗಾಯಕ ಬಕ್ಕಿ ಮಂಜುನಾಥ್ ಮಾಡಿಕೊಟ್ಟರು. ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು.

ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ ಟಿ.ಎಂ.ಆದರ್ಶ್, ಜಿಲ್ಲಾ ಕಸಾಪ ಮಹಿಳಾ ಘಟಕದ ಸಂಚಾಲಕರಾದ ಕಲಾವತಿ ರಾಜಣ್ಣ, ಮೂಡಿಗೆರೆ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾ ಜಗದೀಪ್, ಕಸಾಪ ಪ್ರಧಾನ ಕಾರ್ಯದರ್ಶಿ ಆರ್.ಪ್ರಕಾಶ್, ಲೋಕೇಶ್, ಬಣಕಲ್ ಹೋಬಳಿ ಕಾರ್ಯದರ್ಶಿ ವಸಂತ್, ಶಿಕ್ಷಕರಾದ ಜಿ.ಎಚ್.ಶ್ರೀನಿವಾಸ್, ಕವಿತಾ, ಸವಿತಾ, ಅಕ್ರಂ ಪಾಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.