
ಕಡೂರು: ಎಚ್ಐವಿ ಸೋಂಕಿತರನ್ನು ಸಾಮಾಜಿಕವಾಗಿ ಕೀಳಾಗಿ ಕಾಣುವುದು ಹಾಗೂ ತಿರಸ್ಕರಿಸುವುದು ಸರಿಯಲ್ಲ. ಅವರೂ ಸಹ ಸಮಾಜದಲ್ಲಿ ಬದುಕುವ ಹಕ್ಕನ್ನು ಹೊಂದಿದ್ದು ಅವರ ಬಗ್ಗೆ ಅನುಕಂಪ ಇರಲಿ ಎಂದು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ತಿಳಿಸಿದರು.
ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ನಡೆದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೋಂಕಿತರನ್ನು ದೂರ ಇಡುವುದರಿಂದ ಅವರಲ್ಲಿನ ಆತ್ಮಸ್ಥೈರ್ಯವನ್ನು ಕುಗ್ಗಿಸಿದಂತಾಗುತ್ತದೆ. ಸಾರ್ವಜನಿಕರ ಈ ನಡೆಯಿಂದ ಸೋಂಕಿತರು ರೋಗಕ್ಕಿಂತ ಹೆಚ್ಚು ಜನರ ನಿಂದನೆಯಿಂದ ಸಂಕಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಯಾರೂ ದೂಷಿಸಬಾರದು. ಆಧುನಿಕ ವೈದ್ಯಕೀಯ ವಿಧಾನದಲ್ಲಿ ಏಡ್ಸ್ ಅಥವಾ ಎಚ್‌ಐವಿ ತಡೆಗೆ ಮತ್ತು ಚಿಕಿತ್ಸೆಗಾಗಿ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿದ್ದು, ಎಚ್‌ಐವಿ ಪೀಡಿತರನ್ನು ಕೀಳಾಗಿ ಕಾಣದೆ ಸಮಾಜದಲ್ಲಿ ಬದುಕಲು ಸಹಾಯ ಮಾಡಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಎಚ್ಐವಿ ಎಂದರೆ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು. ಈ ವೈರಾಣುವಿನ ಪರಿಣಾಮವಾಗಿ ಸೋಂಕಿತರು ಗುಣಪಡಿಸಲು ಕಷ್ಟಕರವಾದ ಹಲವು ರೋಗಗಳಿಗೆ ಒಳಗಾಗುವ ಸ್ಥಿತಿಯನ್ನು ಏಡ್ಸ್ ಎನ್ನುತ್ತಾರೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವುದು, ಪರೀಕ್ಷಿಸದ ರಕ್ತ ಪಡೆಯುವುದು, ಸಂಸ್ಕರಣೆ ಮಾಡದ ಸೂಜಿ, ಸಿರಂಜು ಬಳಸುವುದರಿಂದ ಎಚ್ಐವಿ ಸೋಂಕು ಬರಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಆಪ್ತಮಿತ್ರ ಐಸಿಟಿಸಿ ಕೇಂದ್ರಗಳಲ್ಲಿ ಉಚಿತ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಗೆ ಒಳಗಾದವರ ಎಲ್ಲಾ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು. ಎಚ್‌ಐವಿ ಪೀಡಿತರಿಗಾಗಿಯೇ ಸರ್ಕಾರದಿಂದ ಪಡಿತರ ಚೀಟಿ, ವಿಶೇಷ ಪಾಲನಾ ಯೋಜನೆ, ವಸತಿ, ಉಚಿತ ತಪಾಸಣೆ ಮತ್ತು ಚಿಕಿತ್ಸೆ, ಉಚಿತ ಶಿಕ್ಷಣ, ಮಹಿಳೆಯರಿಗೆ ವ್ಯಾಪಾರಕ್ಕಾಗಿ ಸಹಾಯಧನ, ಸಾಲ, ಉಚಿತ ಕಾನೂನು ಸೇವೆ ಸೇರಿ ಹಲವಾರು ಸೌಲಭ್ಯಗಳಿದ್ದು ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಾಹ ಖಲೀಲ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದಾ, ಡಾ.ಗುರುಮೂರ್ತಿ ಏಡ್ಸ್ ಕುರಿತು ಉಪನ್ಯಾಸ ನೀಡಿದರು. ಶರತ್ ಪ್ಯಾರಾ ಮೆಡಿಕಲ್ ಮತ್ತು ಕಾಮಧೇನು ಕಾಲೇಜಿನ ವಿದ್ಯಾರ್ಥಿಗಳು ಭಿತ್ತಿಫಲಕಗಳನ್ನು ಹಿಡಿದು ಜಾಥಾ ನಡೆಸಿದರು. ಮಮತಾ, ಐಸಿಟಿಸಿಯ ಲೋಹಿತಾಶ್ವ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.