ADVERTISEMENT

‘ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 13:04 IST
Last Updated 10 ನವೆಂಬರ್ 2018, 13:04 IST
ಟಿಪ್ಪು ಕಿರುಪರಿಚಯದ ಕೈಪಿಡಿಯನ್ನು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಬಿಡುಗಡೆಗೊಳಿಸಿದರು. ಕೋಮು ಸೌಹಾರ್ದ ವೇದಿಕೆಯ ಗೌಸ್ ಮೊಯುದ್ದಿನ್, ದಲಿತ ಮುಖಂಡ ಕೆ.ಟಿ ರಾಧಾಕೃಷ್ಣ, ಬಿ.ತಿಪ್ಪೇರುದ್ರಪ್ಪ, ವಕ್ಫ್‌ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅತೀಕ್‌ ಖೈಸರ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್‌, ಹಜರತ್‌ ಟಿಪ್ಪು ಅಭಿಮಾನಿಗಳ ವೇದಿಕೆ ಜಿಲ್ಲಾಧ್ಯಕ್ಷ ಜಂಶಿದ್ ಖಾನ್, ಹಿಂದುಳಿದ ವರ್ಗಗಳ ಜಿಲ್ಲಾ ಒಕ್ಕೂಟದ ಕೋಶಾಧ್ಯಕ್ಷ ಎ.ಎನ್.ಮಹೇಶ್ ಇದ್ದಾರೆ.
ಟಿಪ್ಪು ಕಿರುಪರಿಚಯದ ಕೈಪಿಡಿಯನ್ನು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಬಿಡುಗಡೆಗೊಳಿಸಿದರು. ಕೋಮು ಸೌಹಾರ್ದ ವೇದಿಕೆಯ ಗೌಸ್ ಮೊಯುದ್ದಿನ್, ದಲಿತ ಮುಖಂಡ ಕೆ.ಟಿ ರಾಧಾಕೃಷ್ಣ, ಬಿ.ತಿಪ್ಪೇರುದ್ರಪ್ಪ, ವಕ್ಫ್‌ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅತೀಕ್‌ ಖೈಸರ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್‌, ಹಜರತ್‌ ಟಿಪ್ಪು ಅಭಿಮಾನಿಗಳ ವೇದಿಕೆ ಜಿಲ್ಲಾಧ್ಯಕ್ಷ ಜಂಶಿದ್ ಖಾನ್, ಹಿಂದುಳಿದ ವರ್ಗಗಳ ಜಿಲ್ಲಾ ಒಕ್ಕೂಟದ ಕೋಶಾಧ್ಯಕ್ಷ ಎ.ಎನ್.ಮಹೇಶ್ ಇದ್ದಾರೆ.   

ಚಿಕ್ಕಮಗಳೂರು: ಟಿಪ್ಪು ಈ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ದೇಶಕ್ಕಾಗಿ ಹೋರಾಡಿ ಮಡಿದ ವೀರ ಎಂದು ವಕ್ಫ್‌ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅತೀಕ್‌ ಖೈಸರ್‌ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಟಿಪ್ಪು ಜಯಂತ್ಯುತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಕ್ಕಳನ್ನೇ ಬ್ರಿಟಿಷರಿಗೆ ಟಿಪ್ಪು ಒತ್ತೆ ಇಟ್ಟಿದ್ದರು. ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಅವರ ತ್ಯಾಗ, ಬಲಿದಾನ ತಿಳಿಯುತ್ತದೆ ಎಂದರು.

ADVERTISEMENT

‘ಟಿಪ್ಪು ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಮತಬ್ಯಾಂಕಿಗಾಗಿ ಜಾತಿಜಾತಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂಷಿಸಿದರು.

ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ‘ಟಿಪ್ಪುವಿಗೆ ಮತಾಂಧ, ಕ್ರೂರಿ, ಮತಾಂತರಿ ಕನ್ನಡ ವಿರೋಧಿ ಎಂಬ ಹಣೆಪಟ್ಟಿ ಹಚ್ಚಿ, ಅವರ ಹೆಸರಿಗೆ ಕಳಂಕ ತರುವ ಕೆಲಸದಲ್ಲಿ ತೊಡಗಿರುವವರು ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಟೀಕೆಗಾಗಿ ಟೀಕೆ, ದೂಷಣೆಗಾಗಿ ದೂಷಣೆ ಮಾಡುವುದು ಸರಿಯಲ್ಲ. ದ್ವೇಷ ಬಿತ್ತುವ ಕೆಲಸ ಮಾಡಬಾರದು’ ಎಂದು ಸಲಹೆ ನೀಡಿದರು.

‘ಟಿಪ್ಪುವು ಬಹುರಾಷ್ಟ್ರೀಯ ಕಲ್ಪನೆ ಇಟ್ಟುಕೊಂಡು ನಾಡಿನ ನೆಲದ ಅಂತಃಸತ್ವ ಉಳಿಸಿಕೊಳ್ಳಲು ಹೋರಾಟ ಮಾಡಿದ ಅಪ್ರತಿಮ ವೀರ. ಯುದ್ಧಭೂಮಿಯಲ್ಲಿ ಟಿಪ್ಪು ವೀರಮರಣ ಹೊಂದಿದಾಗ, ಭಾರತದಲ್ಲಿ ಇನ್ನು ನಮ್ಮ ದಾರಿ ಸುಗಮ ಎಂದು ಬ್ರಿಟಿಷ್‌ ಗವರ್ನರ್‌ ಜನರಲ್‌ ಹೇಳುತ್ತಾನೆ. ಟಿಪ್ಪು ಕಂಡರೆ ಬ್ರಿಟಿಷರಿಗೆ ಅಷ್ಟೊಂದು ಭಯ ಇತ್ತು’ ಎಂದು ಹೇಳಿದರು.

‘ಟಿಪ್ಪುವನ್ನು ಮತಾಂಧ, ಹಿಂದೂ ಧರ್ಮ ವಿರೋಧಿ ಎಂಬ ದೃಷ್ಟಿಕೋನದಲ್ಲಿ ಕೆಲವರು ವಿರೋಧಿಸುತ್ತಾರೆ. ಶ್ರೀರಂಗಪಟ್ಟಣದಲ್ಲಿ ಲಾಲ್‌ಮಹಲ್‌ ಅರಮನೆಗೆ ಹೊಂದಿಕೊಂಡಂತಿರುವ ಗಂಗಾಧರೇಶ್ವರ ದೇಗುಲವು ಟಿಪ್ಪುವಿನ ಕಾಲದಿಂದಲೂ ಇದೆ. ಆ ಗುಡಿಯ ಘಂಟಾನಾದ ಅರಮನೆವರೆಗೂ ಅನುರಣಿಸುತ್ತಿತ್ತು. ದೇಗುಲದಲ್ಲಿ ಘಂಟೆ ಸದ್ದು ಮಾಡಬೇಡಿ ಎಂದು ಟಿಪ್ಪು ಯಾವತ್ತೂ ಹೇಳಿರಲಿಲ್ಲ. ಆತನನ್ನು ಹಿಂದೂ ವಿರೋಧಿ ಎಂದು ಹೇಗೆ ಹೇಳಲು ಸಾಧ್ಯ? ಟಿಪ್ಪು ದೇಗುಲ ಭಂಜಕ ಆಗಿದ್ದರೆ, ಶ್ರೀರಂಗಪಟ್ಟಣದಲ್ಲಿ ಅರಮನೆ ಪಕ್ಕದಲ್ಲಿ ಇದ್ದ ಶ್ರೀರಂಗನಾಥ ದೇಗುಲ ಉಳಿಸುತ್ತಿರಲಿಲ್ಲ’ ಎಂದು ಹೇಳಿದರು.

‘ಹಿಂದೂಗಳ ಪ್ರಾಬಲ್ಯ ಜಾಸ್ತಿ ಇದ್ದಿದ್ದರಿಂದ ಶ್ರೀರಂಗಪಟ್ಟಣದಲ್ಲಿ ದೇಗುಲ ನಾಶಕ್ಕೆ ಅವಕಾಶವಾಗಿಲ್ಲ ಎಂದು ಕೆಲವರು ಇತಿಹಾಸ ತಿರುಚಿ ಸುಳ್ಳು ಹೇಳುತ್ತಾರೆ. ನೆಲ ಮತ್ತು ಪ್ರಭುತ್ವದ ಮೇಲೆ ದಾಳಿ ಮಾಡುವವರ ವಿರುದ್ಧ ಟಿಪ್ಪು ಸೆಟೆದು ನಿಲ್ಲುತ್ತಿದ್ದರೆ ಹೊರತು ಹಿಂದೂ ವಿರೋಧಿಯಾಗಿರಲಿಲ್ಲ’ ಎಂದರು.

ಟಿಪ್ಪುವು ಶೃಂಗೇರಿ ಮಠಕ್ಕೆ ಎಲ್ಲ ರೀತಿಯ ರಕ್ಷಣೆ ನೀಡಿದ್ದರು. ನವರಾತ್ರಿಯಲ್ಲಿ ಶಾರದಾಂಬೆಗೆ ತೊಡಿಸುವ ಆಭರಣಗಳು, ಶೃಂಗೇರಿ ಸ್ವಾಮೀಜಿ ಅವರು ಆಸೀನರಾಗುವ ಬೆಳ್ಳಿ ಪಲ್ಲಕ್ಕಿಯೂ ಟಿಪ್ಪುವಿನ ಕೊಡುಗೆ. ಗದುಗೇಶ್ವರ ಮಠಕ್ಕೂ ಬೆಳ್ಳಿ ಅಡ್ಡಪಲ್ಲಕ್ಕಿ, ನಂಜನಗೂಡಿನ ದೇಗುಲಕ್ಕೂ ಪಂಚಲಿಂಗ ಕೊಡುಗೆ ನೀಡಿದ್ದರು ಎಂದರು.

ಟಿಪ್ಪು ಕೊಡಗಿನಲ್ಲಿ ಕೊಡವರನ್ನು ಶಿರಚ್ಛೇದನ ಮಾಡಿದ, ಕರಾವಳಿಯಲ್ಲಿ ಕ್ರಿಶ್ಚಿಯನ್ನರನ್ನು ಹಿಂಸಿಸಿದ, ಮತಾಂತರ ಮಾಡಿದ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಟಿಪ್ಪು ಕನ್ನಡ ವಿರೋಧಿಯಾಗಿರಲಿಲ್ಲ. ಶೃಂಗೇರಿ ಸ್ವಾಮೀಜಿ ಅವರಿಗೆ ಟಿಪ್ಪುವು ಕನ್ನಡದಲ್ಲೇ ಪತ್ರ ಬರೆದಿದ್ದಾರೆ. ಅವರ ಸೇನೆಯಲ್ಲಿ ಕನ್ನಡ, ತಮಿಳು, ತುಳು, ಮರಾಠಿ, ಹಿಂದಿ, ಉರ್ದು ಭಾಷಿಕರು ಇದ್ದರು. ಕನ್ನಂಬಾಡಿ ಕಟ್ಟೆಗೆ ಶಂಕುಸ್ಥಾಪನೆ ಮಾಡಿದ್ದು, ಫ್ರೆಂಚರ ನೆರವಿನೊಂದಿಗೆ ರಾಕೆಟ್‌ ತಂತ್ರಜ್ಞಾನ ಪರಿಚಯಿಸಿದ್ದು ಟಿಪ್ಪು ಎಂದರು.

ಹೈದರಾಲಿ ಮಗ ಟಿಪ್ಪುವಿಗೆ ಬರೆದ ಪತ್ರ ಇಂದಿನ ರಾಜಕಾರಣಿಗಳಿಗೆ ನೀತಿಪಾಠ ಆಗಬೇಕು. ಜನರ ಮುಗ್ದತೆಯನ್ನು ಶೋಷಣೆ ಮಾಡಿ ನಾವು ಸಿಂಹಾಸನದ ಗದ್ದುಗೆ ಏರಬಹುದು. ಜನರ ಅಭಿಲಾಷೆ ತಕ್ಕಂತೆ ಆಡಳಿತ ನಡೆಸದಿದ್ದರೆ ನಮ್ಮನ್ನು ಕುರ್ಚಿಯಿಂದ ಇಳಿಸುತ್ತಾರೆ ಎಂದು ಆ ಪತ್ರದಲ್ಲಿ ಎಂದು ಹೇಳಿದರು.

ಕಲಾಮಂದಿರದ ಪ್ರವೇಶ ದ್ವಾರದಲ್ಲಿ ಪೊಲೀಸರು ಸಭಿಕರನ್ನು ತಪಾಸಣೆ ಮಾಡಿ, ಒಳಕ್ಕೆ ಬಿಟ್ಟರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.