ADVERTISEMENT

ಟಿಪ್ಪುನಗರ: ಜನರಿಗೆ ಗುಜರಿ ಕಿರಿಕಿರಿ

ಪಂಪಾನಗರ: ನಿವೇಶನದಲ್ಲಿ ಹಾಳಾದ ‘ಫ್ರೀಡ್ಜ್‌’, ‘ವಾಷಿಂಗ್‌ ಮೆಷಿನ್‌’ ರಾಶಿ

ಬಿ.ಜೆ.ಧನ್ಯಪ್ರಸಾದ್
Published 10 ಸೆಪ್ಟೆಂಬರ್ 2022, 3:07 IST
Last Updated 10 ಸೆಪ್ಟೆಂಬರ್ 2022, 3:07 IST
ಟಿಪ್ಪುನಗರದ ಗುಜರಿ ಶೆಡ್‌ ಬಳಿ ಲಾರಿಗೆ ಗುಜರಿ ಲೋಡ್‌ ಮಾಡುತ್ತಿರುವುದು.
ಟಿಪ್ಪುನಗರದ ಗುಜರಿ ಶೆಡ್‌ ಬಳಿ ಲಾರಿಗೆ ಗುಜರಿ ಲೋಡ್‌ ಮಾಡುತ್ತಿರುವುದು.   

ಚಿಕ್ಕಮಗಳೂರು: ನಗರದ ಟಿಪ್ಪುನಗರ, ಪಂಪಾನಗರ ಭಾಗದಲ್ಲಿ ಗುಜರಿ ಶೆಡ್‌ಗಳಿದ್ದು, ಇಲ್ಲಿನ ಚಟುವಟಿಕೆಗಳು ಜನರಿಗೆ ಕಿರಿಕಿರಿಯಾಗಿ ಪರಿಣಮಿಸಿವೆ. ಹಾಳಾದ ‘ಫ್ರೀಡ್ಜ್‌’, ‘ವಾಷಿಂಗ್‌ ಮೆಷಿನ್‌’, ‘ಟಿವಿ ಪೆಟ್ಟಿಗೆ’ ಮೊದಾದವು ನಿವೇಶನವೊಂದರಲ್ಲಿ ರಾಶಿ ಬಿದ್ದಿವೆ.
ವಿವಿಧೆಡೆಯಿಂದ ತಂದ ಗುಜರಿ ವಸ್ತುಗಳನ್ನು ಶೆಡ್‌ಗೆ ತಂದು ಅಲ್ಲಿಂದ ಲಾರಿ, ಇತರ ವಾಹನಗಳಲ್ಲಿ ಸಾಗಿಸುವ ಚಟುವಟಿಕೆಗಳು ನಡೆಯುತ್ತವೆ. ಗುಜರಿ ಲೋಡಿಂಗ್‌, ಅನ್‌ಲೋಡಿಂಗ್‌ಗೆ ಶೆಡ್‌ ಬದಿಯ ರಸ್ತೆಗಳಲ್ಲಿ ಲಾರಿಗಳು ನಿಂತಿರುತ್ತವೆ.

‘ಗುಜರಿ ಶೆಡ್‌ ಬದಿ ರಸ್ತೆಯಲ್ಲಿ ಗಂಟೆಗಟ್ಟೆಲೇ ಲಾರಿಗಳು ನಿಂತಿರುತ್ತವೆ. ಬೆಳಿಗ್ಗೆ, ಸಂಜೆ ಹೊತ್ತಿನಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಓಡಾಟಕ್ಕೆ ಸಮಸ್ಯೆಯಾಗುತ್ತದೆ’ ಎಂದು ಟಿಪ್ಪುನಗರದ ಆಟೊ ಚಾಲಕ ಶಫಿಕ್‌ ಹೇಳುತ್ತಾರೆ. ಹಾಳಾದ ಎಲೆಕ್ಟ್ರಿಕ್‌, ಎಲೆಕ್ಟ್ರಾನಿಕ್‌ ವಸ್ತುಗಳು ಕೆಲ ನಿವೇಶನಗಳಲ್ಲಿ ಬಿದ್ದಿವೆ. ಇನ್ನು ಕೆಲವೆಡೆ ತ್ಯಾಜ್ಯ ರಾಶಿ ಬಿದ್ದಿದೆ, ಗಿಡಗಂಟಿಗಳು ಬೆಳೆದುಕೊಂಡಿವೆ.
ಟಿಪ್ಪುನಗರದ ಕೆಲರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆಗಳನ್ನು ಅಗೆಯಲಾಗಿದೆ. ರಸ್ತೆಗಳಲ್ಲಿ ಗುಂಡಿಗಳಾಗಿವೆ. ಕೆಲವು ರಸ್ತೆಗಳು ಈವರೆಗೆ ಡಾಂಬರು ಕಂಡಿಲ್ಲ. ಕಲ್ಲು, ಮಣ್ಣಿನ ರಸ್ತೆಯಲ್ಲಿ ಓಡಾಟ ಪಡಿಪಾಟಲಾಗಿದೆ.

ಫಲಕಗಳು ಇಲ್ಲ: ಟಿಪ್ಪುನಗರ, ಹಂಪಾನಗರದಲ್ಲಿ ವಾರ್ಡ್‌ ಸಂಖ್ಯೆ, ಬಡಾವಣೆ ಹೆಸರು, ಮುಖ್ಯರಸ್ತೆ, ಅಡ್ಡರಸ್ತೆ ಸಂಖ್ಯೆ ಫಲಕಗಳನ್ನು ಬಹುತೇಕ ಕಡೆ ಅಳವಡಿಸಿಲ್ಲ. ಮನೆ ವಿಳಾಸ, ರಸ್ತೆಗಳನ್ನು ಗುರುತಿಸುವುದಕ್ಕೆ ತಾಪತ್ರಯವಾಗಿದೆ. ರಭಸವಾಗಿ ಮಳೆಯಾದಾಗ ಕೆಲವೆಡೆ ಚರಂಡಿ ನೀರು ರಸ್ತೆಗೆ ಹೊರಳುವ ಸಮಸ್ಯೆ ಇದೆ. ಕೆಲವೆಡೆ ಸ್ವಚ್ಛತೆ, ದುರ್ನಾತದ ಸಮಸ್ಯೆಯೂ ಇದೆ.

ADVERTISEMENT

‘ಸ್ಥಳಾಂತರಕ್ಕೆ ಚಿಂತನೆ’

‘ನಗರದೊಳಗಿನ ಎಲ್ಲ ಗುಜರಿ ಶೆಡ್‌ಗಳನ್ನು ಹೊರಗಡೆಗೆ ಸ್ಥಳಾಂತರಕ್ಕೆ ಚಿಂತನೆ ನಡೆದಿದೆ. ‌ನಗರಸಭೆ ಅಧ್ಯಕ್ಷರು ಒಮ್ಮೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಹೊಸದಾಗಿ ಗುಜರಿ ಶೆಡ್‌ಗಳಿಗೆ ಲೈಸೆನ್ಸ್‌ ನೀಡುತ್ತಿಲ್ಲ’ ಎಂದು 12ನೇ ವಾರ್ಡ್‌ ಸದಸ್ಯ ಸೈಯ್ಯದ್‌ ಜಾವಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚರಂಡಿ ಕಾಮಗಾರಿಗೆ ಕ್ರಮ ವಹಿಸಿದ್ದೇನೆ. ಪಂಪಾನಗರದ 1, 2, 3 ಹಾಗೂ ಇತರ ರಸ್ತೆಗಳ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಹಂತಹಂತವಾಗಿ ಸಮಸ್ಯೆಗಳನ್ನು ಪರಿಹರಿಸಿ ವಾರ್ಡ್‌ ಅಭಿವೃದ್ಧಿಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.