ಚಿಕ್ಕಮಗಳೂರು: ಮಳೆಗಾಲದಲ್ಲಿ ತನ್ನ ಸೊಬಗು ಹೆಚ್ಚಿಸಿಕೊಳ್ಳುವ ಜಿಲ್ಲೆಯ ಪ್ರಕೃತಿ ತಾಣಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಮಳೆ ಮತ್ತು ಮೋಡಗಳ ನಡುವೆ ನಿಸರ್ಗವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಆದರೆ, ಪ್ರವಾಸಿಗರ ಸಂಖ್ಯೆಗೆ ತಕ್ಕಷ್ಟು ಮೂಲಸೌಕರ್ಯ, ರಸ್ತೆಗಳು, ವಾಹನ ನಿಲುಗಡೆ ತಾಣಗಳು ಇಲ್ಲವಾಗಿದ್ದು, ನಿಯಂತ್ರಿಸಲು ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.
ಚಿಕ್ಕಮಗಳೂರು ಎಂದ ಕೂಡಲೆ ನೆನಪಿಗೆ ಬರುವುದು ಮುಳ್ಳಯ್ಯನಗಿರಿ. ಜಿಲ್ಲೆಗೆ ಬರುವ ಪ್ರವಾಸಿಗರು ರಾಜ್ಯದ ಅತೀ ಎತ್ತರದ ಶಿಖರದ ಮೇಲೆ ನಿಂತು ನೋಡಲು ಹಾತೊರೆಯುತ್ತಾರೆ. ಈ ಸ್ಥಳಕ್ಕೆ ಸ್ವಂತ ವಾಹನಗಳಲ್ಲೇ ಪ್ರವಾಸಿಗರು ತೆರಳಬೇಕು ಅಥವಾ ಜೀಪ್‌ಗಳನ್ನು ಬಾಡಿಗೆಗೆ ಪಡೆದು ತೆರಳಬೇಕು.
ಆದರೆ, ಸೀತಾಳಯ್ಯನಗಿರಿಯಲ್ಲೇ ತಮ್ಮ ಸ್ವಂತ ವಾಹನಗಳನ್ನು ನಿಲ್ಲಿಸಬೇಕಾಗಿದೆ. ಅಲ್ಲಿಂದ ಮುಂದಕ್ಕೆ ರಸ್ತೆ ಕಿರಿದಾಗಿರುವುದರಿಂದ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಜೀಪ್‌ಗಳಲ್ಲಿ ಒಬ್ಬರಿಗೆ ₹30 ಪಾವತಿಸಿ ಹೋಗಬೇಕು. ಅದು ಕೂಡ ಒಂದು ಕಿಲೋ ಮೀಟರ್ ಹಿಂದೆಯೇ ಪ್ರವಾಸಿಗರನ್ನು ಇಳಿಸಿ ಜೀಪ್ ವಾಪಸ್ ಬರಲಿವೆ. ಅಲ್ಲಿಂದ ನಡೆದು ಸಾಗಿ, ಗುಡ್ಡ ಏರಬೇಕಾದ ಅನಿವಾರ್ಯತೆ ಇದೆ.
ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿಗೆ ಮಳೆಗಾಲಕ್ಕೂ ಮುನ್ನ ರಸ್ತೆ ಅಭಿವೃದ್ಧಿ ಕಾರ್ಯ ಆರಂಭಿಸಲಾಯಿತು. ಆದರೆ, ಮಳೆ ಆರಂಭವಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೂ ಸ್ವಲ್ಪ ಮುನ್ನವೇ ಕಾಮಗಾರಿ ಆರಂಭಿಸಿ ಮಳೆಗಾಲದ ವೇಳೆಗೆ ಪೂರ್ಣಗೊಳಿಸಿದ್ದರೂ ಸಮಸ್ಯೆ ತಪ್ಪುತ್ತಿತ್ತು. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿರುವುದುರಿಂದ ಈ ಮಳೆಗಾಲದಲ್ಲಿ ಪ್ರವಾಸಿಗರು ಕಿರಿಕಿರಿ ಅನುಭವಿಸುವುದು ತಪ್ಪುತ್ತಿಲ್ಲ. ವೃದ್ಧರು, ಮಕ್ಕಳನ್ನು ಕರೆತಂದ ತಾಯದಿಂದ ಮುಳ್ಳಯ್ಯನಗಿರಿ ನೋಡಲು ಸಾಧ್ಯವಾಗದೆ ಸೀತಾಳಯ್ಯನಗಿರಿಯಿಂದಲೇ ವಾಪಸ್ ತೆರಳುವುದು ಅನಿವಾರ್ಯವಾಗಿವೆ.
ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ಎನ್.ರಾಘವೇಂದ್ರ, ಕೆ.ನಾಗರಾಜ್
ಹಲವರಿಗೆ ಸಿಗದ ಮುಳ್ಳಯ್ಯನಗಿರಿ ದರ್ಶನ
ವಾರಾಂತ್ಯದಲ್ಲಿ ಬರುವ ಪ್ರವಾಸಿಗರಲ್ಲಿ ಹಲವರಿಗೆ ಮುಳ್ಳಯ್ಯನಗಿರಿ ದರ್ಶನ ಭಾಗ್ಯ ಇಲ್ಲವಾಗುತ್ತಿದೆ. ಸೀತಾಳಯ್ಯನಗಿರಿಯಲ್ಲಿ ವಾಹನ ದಟ್ಟಣೆ ಹೆಚ್ಚಾದರೆ ಪ್ರವಾಸಿಗರನ್ನು ನಿಷೇಧಿಸಲಾಗುತ್ತಿದೆ. ಅವರನ್ನು ಅತ್ತಿಗುಂಡಿ ಬಾಬಾಬುಡನ್‌ಗಿರಿ ಗಾಳಿಕೆರೆ ಮಾಣಿಕ್ಯಾಧಾರ ಕಡೆಗೆ ಕಳುಹಿಸಲಾಗುತ್ತದೆ. ದಟ್ಟಣೆ ನಡುವೆ ಸಿಲುಕಿ ವಾಪಸ್ ಹೋಗುವುದು ಕೂಡ ವಾರಾಂತ್ಯದಲ್ಲಿ ಸಾಮಾನ್ಯವಾಗುತ್ತಿದೆ. ವಾರಾಂತ್ಯದಲ್ಲಿ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ವಾಹನಗಳು ಗಿರಿ ಭಾಗಕ್ಕೆ ಹೋಗುತ್ತಿವೆ. ಅಷ್ಟು ವಾಹನಗಳು ಗಿರಿ ಏರಿದರೆ ಕಿರಿದಾದ ರಸ್ತೆ ನಿಲುಗಡೆ ತಾಣ ಇಲ್ಲದ ಕಾರಣ ಅಲ್ಲಲ್ಲಿ ಗಂಟೆಗಟ್ಟಲೆ ಪ್ರವಾಸಿಗರು ನಿಲ್ಲುವಂತಾಗಿದೆ. ಗಿರಿಯ ದರ್ಶನಕ್ಕಿಂತ ದಟ್ಟಣೆಯಲ್ಲಿ ಸಿಲುಕಿ ಪರದಾಡುವ ಸಮಯವೇ ಹೆಚ್ಚಾಗುತ್ತಿದೆ.
ಎಲ್ಲೆಲ್ಲೂ ವಾಹನ ದಟ್ಟಣೆ
ವಾಹನಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಕೈಮರ ಬಳಿ ಇರುವ ಚೆಕ್‌ಪೋಸ್ಟ್ ಮುಂದಕ್ಕೆ ಜಾವರೈನ್ ಕ್ರಾಸ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ ನೀರಿನ ಬಾಟಲಿ ಮದ್ಯ ಇದೇಯೇ ಎಂಬುದನ್ನು ಪರಿಶೀಲಿಸಿ ಮುಂದಕ್ಕೆ ಕಳುಹಿಸಬೇಕು. ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಇದನ್ನು ದಾಟಿ ಮುಂದೆ ಸಾಗಿದರೆ ಮುಳ್ಳಯ್ಯನಗಿರಿ ಕ್ರಾಸ್‌ನಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳು ಗುಡ್ಡದ ಮೇಲೆ ಹೋಗಿರುವ ವಾಹನಗಳ ಸಂಖ್ಯೆ ಆಧರಿಸಿ ಆಗಾಗ ಬಂದ್ ಮಾಡುತ್ತಾರೆ. ಅನಿವಾರ್ಯವಾಗಿ ಅತ್ತಿಗುಂಡಿ ಕಡೆಗೆ ಪ್ರವಾಸಿಗರು ಹೋಗಬೇಕು. ಹೊನ್ನಮ್ಮನಹಳ್ಳ ಅತ್ತಿಗುಂಡಿ ಝರಿ ಜಲಪಾತ ಕಡೆಗೆ ಹೋಗುವ ಜಂಕ್ಷನ್ ಮಹಲ್ ಕ್ರಾಸ್ ಬಾಬಾಬುಡನ್‌ಗಿರಿ ಮಾಣಿಕ್ಯಧಾರ ಜಲಪಾತ ದೇವೀರಮ್ಮ ಗುಡ್ಡ ವೀಕ್ಷಣೆಯ ಸ್ಥಳ ಸೇರಿ ಹಲವೆಡೆ ವಾಹನ ದಟ್ಟಣೆಯಲ್ಲಿ ಪ್ರವಾಸಿಗರು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ. ಮುಳ್ಳಯ್ಯನಗಿರಿ ನೋಡಲು ಬಂದವರು ವಾಹನಗಳ ಸಾಲು ನೋಡುವ ಸ್ಥಿತಿ ಇದೆ. ಇದು ಬೇಸರದ ಸಂಗತಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಖಾಸಗಿ ವಾಹನಗಳನ್ನು ನಿರ್ಬಂಧಿಸಿ ಸರ್ಕಾರದ ವಾಹನಗಳಲ್ಲೇ ಪ್ರವಾಸಿಗರನ್ನು ಕರೆದೊಯ್ದು ವಾಪಸ್ ಕರೆತಂದು ಬಿಡುವ ವ್ಯವಸ್ಥೆ ಆಗಬೇಕಿದೆ. ಖಾಸಗಿ ವಾಹನಗಳ ನಿಲುಗಡೆಗೆ ಗಿರಿಯ ಕೆಳಭಾಗದಲ್ಲಿ ವಾಹನ ನಿಲುಗಡೆ ತಾಣ ಬೇಕಿದೆ. ಜಾಗ ಅಂತಿಮಗೊಳಿಸುವ ಕಾರ್ಯ ಇನ್ನೂ ಆಗಿಲ್ಲ. ಜಾಗ ಅಂತಿಮವಾಗಿ ಪಾರ್ಕಿಂಗ್ ತಾಣವಾಗಿ ಅಭಿವೃದ್ಧಿಯಾಗಲು ಇನ್ನೆಷ್ಟು ದಿನ ಕಾಯಬೇಕೋ ಎಂಬುದು ಪ್ರವಾಸಿಗರ ಬೇಸರ.
ಮೂಲ ಸೌಲಭ್ಯದ ಕೊರತೆ
ಕಳಸ: ರಾಜ್ಯದ ಪ್ರವಾಸೋದ್ಯಮದ ನಕಾಶೆಯಲ್ಲಿ ಧಾರ್ಮಿಕ ಮತ್ತು ಪರಿಸರ ಪ್ರವಾಸೋದ್ಯಮದ ಕಾರಣಕ್ಕೆ ಕಳಸಕ್ಕೆ ದೊಡ್ಡ ಹೆಸರು ಇದೆ. ತಾಲ್ಲೂಕಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚುತ್ತಿದೆ. ಆದರೆ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.
ಇಷ್ಟು ವರ್ಷಗಳಿಂದ ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆಯ ಮುಳುಗು ಸೇತುವೆ ಕಾರಣಕ್ಕೆ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿತ್ತು. ಆದರೆ ಹೊಸ ಸೇತುವೆ ನಿರ್ಮಾಣ ಆಗಿದ್ದರಿಂದ ಈ ವರ್ಷದ ಮಳೆಗಾಲದಲ್ಲೂ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿನೀಡುತ್ತಿದ್ದಾರೆ. ಕಳಸ ಮತ್ತು ಹೊರನಾಡಿಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಟ್ಟರೂ ಇವೆರಡೂ ಊರುಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಪಾತ್ರ ಶೂನ್ಯ. ಎರಡೂ ಊರಿನಲ್ಲಿ ಸರ್ಕಾರದ ಶೌಚಾಲಯ ಸೂಕ್ತ ಪಾರ್ಕಿಂಗ್ ಅಥವಾ ಕೊನೆ ಪಕ್ಷ ಪ್ರವಾಸಿ ಮಾಹಿತಿ ಕೇಂದ್ರವೂ ಇಲ್ಲ. ಸುಸಜ್ಜಿತ ಶೌಚಾಲಯ ಇಲ್ಲದೆ ಕಳಸದಲ್ಲಿ ಪ್ರವಾಸಿಗರು ಪಡಿಪಾಟಲು ಪಡುತ್ತಿದ್ದಾರೆ. ಜತೆಗೆ ಸಂಚಾರ ನಿಯಂತ್ರಣ ಇಲ್ಲದೆ ಸ್ಥಳೀಯರು ವಾರಂತ್ಯದಲ್ಲಿ ಪ್ರವಾಸಿಗರನ್ನು ಶಪಿಸುತ್ತಾರೆ. ಕಳಸ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ತೆರಳುವ ರಸ್ತೆಗಳು ಕೂಡ ಹದಗೆಟ್ಟಿವೆ. ಸೂರುಮನೆ ಜಲಪಾತ ಕ್ಯಾತನಮಕ್ಕಿ ಮೈದಾಡಿ ರಾಣಿಝರಿ ನೇತ್ರಾವತಿ ಚಾರಣದ ರಸ್ತೆಗಳ ಅಭಿವೃದ್ಧಿ ಯಾರ ಹೊಣೆಗಾರಿಕೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಸ್ಥಳೀಯರು ಮತ್ತು ಪ್ರವಾಸಿಗರ ಮಧ್ಯೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಕಳಸ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳ ಬಗ್ಗೆ ಖಾಸಗಿ ವ್ಯಕ್ತಿಗಳೇ ಪ್ರಚಾರ ಮಾಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದಾರೆ.
ಕಳಸ ತಾಲ್ಲೂಕಿನ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಪಾಲು ದೊಡ್ಡದಾಗಿದೆ.ನೂರಾರು ಉದ್ಯೋಗ ಸೃಷ್ಟಿ ಆಗಿದೆ. ರಾಜ್ಯದಲ್ಲೇ ಇಷ್ಟೊಂದು ಖ್ಯಾತ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಅಚ್ಚರಿ ತರುತ್ತದೆ ಎಂದು ಕಳಸದ ಪ್ರವಾಸಗಳ ಆಯೋಜಕ ಚಂದ್ರಮೋಹನ್ ಅಭಿಪ್ರಾಯಪಡುತ್ತಾರೆ.
ಕೆಮ್ಮಣ್ಣುಗುಂಡಿಗೆ ಗುಂಡಿ ರಸ್ತೆ
ತರೀಕೆರೆ: ಕೆಮ್ಮಣ್ಣಗುಂಡಿ ಕಲ್ಲತ್ತಿಗಿರಿ ಮತ್ತು ಹೆಬ್ಬೆ ಜಲಪಾತ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಈ ಪ್ರವಾಸಿ ಕೇಂದ್ರಗಳಿಗೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಸಾಲಿನಲ್ಲಿ 9 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಕಲ್ಲತ್ತಿಗಿರಿಯಲ್ಲಿ ವೀರಭದ್ರೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ ದೇವಿಯ ದೇವಸ್ಥಾನಗಳಿದ್ದು ಇಲ್ಲಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಈ ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಯ ಕೆಲವು ಕಡೆ ಗುಂಡಿ –ಗೊಟರುಗಳಿಂದ ಹಾಳಾಗಿದೆ. ಇದರಿಂದ ಪ್ರವಾಸಿಗರು ಹೈರಾಣಾಗುತ್ತಿದ್ದಾರೆ. ಕಲ್ಲತ್ತಿಗಿರಿಯಲ್ಲಿ ಸ್ನಾನ ಮಾಡಿದ ನಂತರ ಬಟ್ಟೆ ಬದಲಿಸಲು ಮಹಿಳೆಯರು ಹಾಗೂ ಪುರುಷರಿಗೆ ಸುಸಜ್ಜಿತ ಕೊಠಡಿಗಳ ವ್ಯವಸ್ಥೆ ಇಲ್ಲ. ಅಲ್ಲದೆ ಪೂಜಾ ಸಾಮಗ್ರಿಗಳು ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಹಾಕಲಾಗಿದೆ. ಕೆಮ್ಮಣ್ಣುಗುಂಡಿ ಮತ್ತು ಹೆಬ್ಬೆ ಜಲಪಾತಗಳಿಗೆ ಬರುವ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಊಟ-ಉಪಹಾರ ದೊರೆಯುವ ಹೋಟೆಲ್ ವ್ಯವಸ್ಥೆ ಕೂಡ ಇಲ್ಲವಾಗಿದೆ. ಹೆಬ್ಬೆ ಜಲಪಾತಕ್ಕೆ ತೆರಳುವ ಗೇಟ್‌ನಿಂದ ಕೆಮ್ಮಣ್ಣಗುಂಡಿ ರಾಜಭವನದ ತನಕ ಸುಮಾರು ಮೂರು ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಸಮನ್ವಯತೆ ಇಲ್ಲದಿರುವುದು ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಪ್ರವಾಸಿ ವಾಹನ: ಸ್ಥಳೀಯರು ಹೈರಾಣ
ಮೂಡಿಗೆರೆ: ವಾರಂತ್ಯ ಬಂದರೆ ತಾಲ್ಲೂಕಿನ ಜನ ಭಯಪಡುವ ಸ್ಥಿತಿ ಎದುರಾಗಿದ್ದು ಪ್ರವಾಸಿಗರ ವಾಹನಗಳು ಸ್ಥಳೀಯರನ್ನು ಹೈರಾಣಾಗಿಸಿವೆ. ಪ್ರವಾಸಿಗರು ಬರುವುದರಿಂದ ಆರ್ಥಿಕ ಚಟುವಟಿಕೆಗೆ ಶಕ್ತಿದಾಯಕವಾಗಿದೆ. ಆದರೂ ಪ್ರವಾಸಿಗರಿಗೆ ಬೇಕಾದ ಮೂಲ ಸೌಲಭ್ಯಗಳಿಲ್ಲದ ಕಾರಣ ಸ್ಥಳೀಯರು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿ ವಾರವೂ ಶುಕ್ರವಾರ ಸಂಜೆಯಿಂದಲೇ ಪ್ರವಾಸಿಗರ ವಾಹನಗಳಿಂದ ವಾಹನ ದಟ್ಟಣೆ ಪ್ರಾರಂಭವಾಗುತ್ತದೆ. ತಾಲ್ಲೂಕಿನ ತಿರುವು ರಸ್ತೆಗಳ ಪರಿಚಯವಿಲ್ಲದೇ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಠಿಯಾಗಿದೆ. ದೇವರಮನೆ ಭೈರಾಪುರ ದುರ್ಗದಹಳ್ಳಿ ಸೇರಿದಂತೆ ಪ್ರವಾಸಿ ತಾಣಗಳ ಸಂಪರ್ಕ ರಸ್ತೆಗಳು ಕಿರಿದಾಗಿವೆ. ಇದರಿಂದ ಈ ತಾಣಗಳ ಸುತ್ತಮುತ್ತಲ ಗ್ರಾಮಗಳ ಜನರು ಸುರಕ್ಷತೆ ಪಾಲಿಸದ ಪ್ರವಾಸಿ ವಾಹನಗಳಿಂದ ತತ್ತರಿಸಿದ್ದಾರೆ. ಪ್ರವಾಸಿ ತಾಣಗಳ ಬಳಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ವಾರಂತ್ಯಗಳಲ್ಲಿ ಸ್ಥಳೀಯರು ಪ್ರವಾಸಿ ತಾಣಗಳಿಗೆ ತೆರಳದಂತೆ ಮಾಡಿದೆ. ಪ್ರವಾಸಿ ತಾಣಗಳ ಸಂಪರ್ಕ ರಸ್ತೆಗಳನ್ನುಅಭಿವೃದ್ಧಿ ಪಡಿಸಬೇಕು. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಬೇಕು. ಸಂಚಾರ ನಿಯಮ ಉಲ್ಲಂಘಿಸುವವರು ನಡು ರಸ್ತೆಯಲ್ಲಿ ಮದ್ಯಪಾನ ಬರ್ತಡೆ ಕೇಕ್ ಕತ್ತರಿಸುವುದು ಸೇರಿ ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂಬುದು ಸ್ಥಳೀಯರ ಒತ್ತಾಯ. ಪೊಲೀಸ್ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು. ಹೋಂ ಸ್ಟೇ ರೆಸಾರ್ಟ್ ಗಳಲ್ಲಿ ನಿಯಮ ಬಾಹಿರವಾಗಿ ಶಬ್ಧಮಾಲಿನ್ಯ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿಶೇಷ ಹೋಟೆಲ್ ತಂಗುದಾಣಗಳನ್ನು ನಿರ್ಮಿಸಿದರೆ ಪ್ರವಾಸೋದ್ಯಮವು ಅಭಿವೃದ್ಧಿಯಾಗಲಿದೆ. ಸ್ಥಳೀಯರಿಗೂ ಸಮಸ್ಯೆ ಆಗುವುದಿಲ್ಲ ಎಂಬುದು ಮೂಡಿಗೆರೆ ಜನರ ಅಭಿಪ್ರಾಯ.
ಪ್ರವಾಸಿಗರ ಹೆಚ್ಚಳ: ಸಂಚಾರಕ್ಕೆ ತೊಂದರೆ ಶೃಂಗೇರಿ: ಕಳೆದ ವರ್ಷಕ್ಕಿಂತ ಈ ವರ್ಷ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರು ಹೆಚ್ಚುತ್ತಿದ್ದಾರೆ. ಆದರೆ ಪ್ರವಾಸಿಗರು ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಹೆಚ್ಚಾದರೆ ಪಟ್ಟಣದ ಭಾರತೀ ಬೀದಿ ಹರಿಹರ ಬೀದಿ ಮತ್ತು ಮಲ್ಲಿಕಾರ್ಜುನ ಬೀದಿ ರಸ್ತೆಯ ಎರಡು ಬದಿಗಳಲ್ಲಿ ವಾಹನವನ್ನು ನಿಲ್ಲಿಸುತ್ತಾರೆ. ಇದರಿಂದ ಬೇರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಪಟ್ಟಣದಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಿಲ್ಲ. ಬೆಂಗಳೂರಿನಿಂದ ಶೃಂಗೇರಿಗೆ ಬರುವ ರಾಜ್ಯ ಹೆದ್ದರಿಯಾದ ಗಡಿಕಲ್ಲುನಿಂದ ಶೃಂಗೇರಿ ತನಕ ರಸ್ತೆ ಹದಗೆಟ್ಟಿದೆ. ಹೊರನಾಡಿನಿಂದ ಶೃಂಗೇರಿಗೆ ಬರುವ ರಸ್ತೆ ಹಾಳಾಗಿದೆ. ಮಂಗಳೂರಿನಿಂದ ಶೃಂಗೇರಿಗೆ ಬರುವ ರಾಷ್ಟ್ರೀಯ ಹೆದ್ದಾರಿ ಕೆರೆಕಟ್ಟೆಯಿಂದ ಶೃಂಗೇರಿ ತನಕ ರಸ್ತೆ ಹಾಳಾಗಿದೆ. ಈ ವರ್ಷ 80 ಲಕ್ಷಕ್ಕಿಂತ ಹೆಚ್ಚು ಜನ ಪ್ರವಾಸಿಗರು ಶೃಂಗೇರಿಗೆ ಬಂದಿದ್ದಾರೆ ಎಂದು ಶಾರದಾ ಪೀಠದ ಮೂಲಗಳು ತಿಳಿಸಿದ್ದಾರೆ. ಬೆಂಗಳೂರಿನಿಂದ ಶೃಂಗೇರಿಗೆ ಬರುವಾಗ ಆಲ್ದೂರುನಿಂದ ನಂತರದ ರಸ್ತೆಯಲ್ಲಿ ವಾಹನ ಚಲಾಯಿಸಬೇಕಾದರೆ ಹರಸಾಹಸ ಪಡಬೇಕಾಯಿತು. ರಸ್ತೆ ಸರಿ ಇಲ್ಲದೆ ಗುಂಡಿಗಳು ಬಿದ್ದಿದೆ ಎಂದು ಪ್ರವಾಸಿಗರಾದ ಜಯರಾಮ್ ಹೇಳಿದರು.
ಪ್ರವಾಸಿಗರ ವಿವರ(ಜೂನ್ 2025) ಪ್ರವಾಸಿ ತಾಣ; ಪ್ರವಾಸಿಗರ ಸಂಖ್ಯೆ ಶೃಂಗೇರಿ; 195825 ಹೊರನಾಡು; 120560 ಕಳಸ; 15954 ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗ; 180805 ಕೆಮ್ಮಣ್ಣಗುಂಡಿ; 95808 ಒಟ್ಟು; 638952
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.