ಕೊಪ್ಪ: ಕೋಡೂರು ಗ್ರಾಮದಲ್ಲಿ ಲಭ್ಯವಿರುವ ವೀರಮಾಸ್ತಿಕಲ್ಲಿನ ಬಗ್ಗೆ ಸತೀಶ ತುಮಖಾನೆ ಅವರ ಮಾಹಿತಿಯ ಮೇರೆಗೆ, ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅವರು ಅಧ್ಯಯನ ಮಾಡಿದ್ದಾರೆ.
‘ಅಧ್ಯಯನದ ದೃಷ್ಟಿಯಿಂದ ಈ ವೀರಮಾಸ್ತಿಕಲ್ಲು 15-16ನೇ ಶತಮಾನಕ್ಕೆ ಸೇರಿದ್ದಾಗಿದೆ. ವೀರಮಾಸ್ತಿಕಲ್ಲಿನ ತಳಭಾಗದಲ್ಲಿ ವಿವಿಧ ಗಾತ್ರದ ಮಡಕೆಗಳು ಲಭ್ಯವಾಗಿದ್ದು, ಇವುಗಳು ಸುಮಾರು 17-18ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯಪಟ್ಟಿದ್ದಾರೆ.
ಈ ವೀರಮಾಸ್ತಿಕಲ್ಲು 6ಅಡಿ ಎತ್ತರ ಮತ್ತು 2.5ಅಡಿ ಅಗಲ ಹೊಂದಿದ್ದು, ಬಗೆಬಗೆಯ ಪುಷ್ಪಪಟ್ಟಿಕೆಗಳಿಂದ ಅಲಂಕರಿಸಲ್ಪಟ್ಟ ಐದು ಪಟ್ಟಿಕೆಗಳನ್ನು ಹೊಂದಿದೆ. ಪ್ರಥಮ(ಕೆಳಗಿನ) ಪಟ್ಟಿಕೆಯಲ್ಲಿ ಬಿಲ್ಲು-ಬಾಣ, ಕತ್ತಿ-ಗುರಾಣಿಗಳೊಂದಿಗೆ ರಣರಂಗದಲ್ಲಿ ಎದುರಾಳಿ ಸೈನ್ಯದೊಂದಿಗೆ ವೀರನು ಹೋರಾಟ ಮಾಡುವ ಯುದ್ಧ ಸನ್ನಿವೇಶ ಕೆತ್ತಲಾಗಿದೆ.
ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕನನ್ನು ರಾಜ ಮರ್ಯಾದೆಯಲ್ಲಿ ಅಂದರೆ ಛತ್ರ(ತತ್ರ), ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕೊಂಡೊಯ್ಯುತ್ತಿರುವ ಕೆತ್ತನೆಯು ಇನ್ನೊಂದು ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಮೂರನೇ ಪಟ್ಟಿಕೆಯಲ್ಲಿ ಮರಣ ಹೊಂದಿದ ಪತಿಯೊಂದಿಗೆ ಸತಿಯರ ಚಿತ್ರಣ ಬಿಂಬಿಸಲಾಗಿದೆ. ನಂತರದ ಪಟ್ಟಿಕೆಯಲ್ಲಿ ಕುಂಭ-ಪದ್ಮದ ಜೊತೆ ಒಕ್ಕೈಯಲ್ಲಿ ಲಿಂಬೆಯನ್ನು ಹಿಡಿದಿರುವ ಕೆತ್ತನೆಯ ಜೊತೆಗೆ ಸತಿ–ಪತಿಯು ಕೈಮುಗಿದ ಕೆತ್ತನೆ ಇದೆ. ಕೊನೆಯ ಪಟ್ಟಿಕೆಯಲ್ಲಿ ಅಂಜಲಿ ಮುದ್ರೆಯಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಸತಿ–ಪತಿಯರ ಜೊತೆಗೆ ಶಿವಲಿಂಗಕ್ಕೆ ಪೂಜಿಸುತ್ತಿರುವ ಯೋಗಿಯ ಕೆತ್ತನೆಯಿದೆ. ಈ ವೀರ ಮತ್ತು ಸತಿಯ ತ್ಯಾಗ ಬಲಿದಾನವು ಅಜರಾಮರವಾಗಿರಬೇಕೆಂದು ಸೂರ್ಯ-ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಲೆನಾಡಿನ ಹೆಚ್ಚಿನ ಸ್ಥಳಗಳಲ್ಲಿ ಮುಖ್ಯವಾಗಿ ಸ್ಥಳೀಯರು ‘ದೇವಿಬನ’ ಎಂದು ಕರೆಯುವ ಜಾಗದಲ್ಲಿ ಮನುಷ್ಯಾಕೃತಿ(ಸ್ತ್ರೀ) ಹೊಂದಿರುವ ಮಡಕೆಗಳು ಸಿಕ್ಕಿರುವ ಪುರಾವೆಗಳಿವೆ. ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ವೀರಮಾಸ್ತಿಗಲ್ಲಿನ ಜೊತೆ ಮನುಷ್ಯಾಕೃತಿಯ ಮಡಕೆಗಳು ದೊರಕಿವೆ. ದೇವಿ ಬನಗಳಲ್ಲಿ ಇಂತಹ ಮಡಕೆಗಳನ್ನು ‘ಫಲವಂತಿಕೆ’ ಅಥವಾ ‘ಮಾತೃತ್ವ’ದ ರೂಪದಲ್ಲಿ ಹರಕೆಯಾಗಿ ಒಪ್ಪಿಸಲಾಗುತ್ತದೆ. ಸಂತಾನ ಪ್ರಾಪ್ತಿಗಾಗಿ, ಸುಖಕರ ಹೆರಿಗೆಗಾಗಿ, ಸಣ್ಣ ಮಕ್ಕಳಿಗೆ ರೋಗಗಳು ಬಂದಂತ ಸಂದರ್ಭದಲ್ಲಿ ಅಥವಾ ಬರದಂತೆ ಮನುಷ್ಯ ರೂಪದ ಮಡಕೆಗಳನ್ನು ಒಪ್ಪಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದೇ ರೀತಿ ‘ಹುಲಿಬನ’ಗಳನ್ನು ಸಹ ಕಾಣಬಹುದು. ಇಲ್ಲಿ ಕಾಡುಪ್ರಾಣಿಗಳಿಂದ ಸಾಕು ಪ್ರಾಣಿಗಳ ಹಾಗೆಯೇ ಕೃಷಿಭೂಮಿ ರಕ್ಷಣೆಗಾಗಿ ಪ್ರಾಣಿರೂಪದ ಹೆಚ್ಚಾಗಿ ಹುಲಿ ಆಕೃತಿಯನ್ನು ಹೊಂದಿರುವ ಮಡಕೆಗಳನ್ನು ಒಪ್ಪಿಸಲಾಗುತ್ತದೆ. ಹೆಚ್ಚಾಗಿ ಇಂತಹ ಆಚರಣೆಗಳನ್ನು ತಮ್ಮ ಸುಖ-ಕಷ್ಟಗಳ ಸಂದರ್ಭದಲ್ಲಿ ಮಾಡಲಾಗುತ್ತಿತ್ತು. ಹರಕೆಯ ರೂಪದಲ್ಲಿ ವೀರಮಾಸ್ತಿಗಲ್ಲಿಗೆ ಒಪ್ಪಿಸಿಕೊಂಡು ಬಂದಿರಬಹುದು. ಇದಕ್ಕೆ ಪೂರಕವೆಂಬಂತೆ ಇಂದಿಗೂ ಪ್ರತಿವರ್ಷ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದು, ಇತ್ತೀಚಿನ ಶತಮಾನಗಳಿಂದ ಮಡಕೆಯನ್ನು ಒಪ್ಪಿಸಿರುವ ನಿದರ್ಶನಗಳು ಕಂಡುಬಂದಿಲ್ಲ ಎಂದಿದ್ದಾರೆ.
ಪ್ರಸ್ತುತ ದೊರಕಿರುವ 9 ಮಡಕೆಗಳಲ್ಲಿ 5 ಮಡಕೆಗಳು ಗಾತ್ರದಲ್ಲಿ ಸಣ್ಣದಾಗಿದ್ದು, ತಳಭಾಗದಲ್ಲಿ ಮನುಷ್ಯಾಕೃತಿಯ ಅಂದರೆ ಕಣ್ಣು, ಮೂಗು ಮತ್ತು ಬಾಯಿಯ ರಚನೆಯನ್ನು ಹೊಂದಿದೆ. 4 ಮಡಕೆಗಳು ಪೂರ್ಣ ಪ್ರಮಾಣದ ಮಡಕೆಗಳಾಗಿದ್ದು ಇದರಲ್ಲಿ ಸ್ತನ ಭಾಗದ ರಚನೆ ಹೊಂದಿದೆ. ಸಣ್ಣ ಗಾತ್ರದ ಮಡಕೆಗಳು ದೊಡ್ಡ ಗಾತ್ರದ ಮಡಕೆಗೆ ಮುಚ್ಚಳದಂತೆ ಜೋಡಣೆಯಾಗುವುದರ ಜೊತೆಗೆ ಪೂರ್ಣ ಪ್ರಮಾಣದ ಮನುಷ್ಯಾಕೃತಿ ಹೋಲುತ್ತದೆ. ಈ ಮಡಕೆಗಳು ಮತ್ತು ಸ್ಥಳೀಯ ಜಾನಪದ ಆಚರಣೆಯ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕ್ಷೇತ್ರ ಕಾರ್ಯ ಶೋಧನೆಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಚಿದಂಬರ್ ಅವರು ಸಹಕಾರ ನೀಡಿರುವುದಾಗಿ ನ.ಸುರೇಶ ಕಲ್ಕೆರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.