ಬೀರೂರು (ಕಡೂರು): ‘ಎಲೆ ಉದುರಿ ಕಸ ಆಗುತ್ತದೆ, ಮನೆಯ ಮುಂದೆ ಗಲೀಜು ಆಗುತ್ತದೆ’ ಎಂಬ ಕಾರಣ ನೀಡಿ ಸುಮಾರು 15 ವರ್ಷ ವಯಸ್ಸಿನ ಮರಗಳನ್ನು ಕಡಿದು ಹಾಕಿರುವ ಘಟನೆ ಬೀರೂರು ಪುರಸಭೆಯ ಬಸಪ್ಪ ಬಡಾವಣೆಯ ಉದ್ಯಾನದಲ್ಲಿ ನಡೆದಿದೆ.
ಪುರಸಭೆಗೆ ಸೇರಿದ ಉದ್ಯಾನದಲ್ಲಿ ಬೆಳೆದು ನಿಂತಿದ್ದ ಹೊಂಗೆ, ಹೆಬ್ಬೇವು, ಸಂಪಿಗೆ, ಕಾಡು ಬಾದಾಮಿ ಸೇರಿದಂತೆ ಹಲವು ಬಗೆಯ ಮರಗಳನ್ನು ನೆಲಕ್ಕುರುಳಿಸಲಾಗಿದೆ.
ಬೀರೂರು ಪಟ್ಟಣ ವ್ಯಾಪ್ತಿಯ ಬಸಪ್ಪ ಬಡಾವಣೆಯಲ್ಲಿ ವಾಸವಿರುವ ಎಲ್ಲರೂ ವಿದ್ಯಾವಂತರೇ ಆಗಿದ್ದು, ಶಿಕ್ಷಕರು, ವಕೀಲರು, ಎಂಜಿನಿಯರ್, ಸರ್ಕಾರಿ ಆಸ್ಪತ್ರೆ ನೌಕರರು, ಪೊಲೀಸ್ ಸಿಬ್ಬಂದಿ, ಸರ್ಕಾರಿ ನೌಕರರು, ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರೂ ವಾಸವಿದ್ದಾರೆ.
ಸೊಂಪಾಗಿ ಬೆಳೆದು ನಿಂತಿದ್ದ ಮರಗಳು ಇಲ್ಲಿನ ನಿವಾಸಿಗಳಿಗೆ ಆಹ್ಲಾದಕರ ವಾತಾವರಣ ನೀಡುತ್ತಿದ್ದವು. ಇಂಥ ಮರಗಳನ್ನು ಕಡಿಸಿರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಡಾವಣೆಯ ನಿವಾಸಿಗಳು, ಇಲ್ಲಿನ ಬಡಾವಣೆಯವರು ಸೇರಿ ಸಂಘಟನೆ ಮಾಡಿಕೊಂಡಿದ್ದೇವೆ. ಮರಗಳಿಂದ ಉದುರುವ ಎಲೆ ಹಾಗೂ ಕ್ರಿಮಿಕೀಟಗಳ ತೊಂದರೆ ಹೆಚ್ಚಾಗುತ್ತಿತ್ತು. ಸಂಘದಲ್ಲಿ ಸಭೆ ಕರೆದು ಮರಗಳನ್ನು ಕಡಿಯುವ ತೀರ್ಮಾನ ತೆಗೆದುಕೊಳ್ಳಲಾಯಿತು. ನಾವು ಮತ್ತೆ ಗಿಡಗಳನ್ನು ನೆಟ್ಟು ಬೆಳೆಸುತ್ತೇವೆ ಎಂದರು.
ಅಲ್ಲಿದ್ದ ಮರಗಳು ಪಕ್ಷಿಗಳಿಗೂ ಆಸರೆಯಾಗಿದ್ದವು. ನಾವು ಬೆಳೆಸಿದ ಮಕ್ಕಳನ್ನು ನಾವೇ ಹತ್ಯೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಕೃತ್ಯಕ್ಕೆ ಕುಮ್ಮಕ್ಕು ನೀಡಿದ ನಿವಾಸಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮರ, ಗಿಡಗಳನ್ನು ಬೆಳೆಸಿ ಎಂದು ಪಾಠ ಮಾಡುವ ಇಲ್ಲಿನ ಪ್ರಬುದ್ಧರು, ತಮ್ಮ ಮನೆಯಲ್ಲಿ ಇರುವ ಮಕ್ಕಳಿಗೆ ಏನು ಪಾಠ ಹೇಳುತ್ತಾರೆ. ಇಂತಹ ಹೇಯ ಕೃತ್ಯಗಳು ನಿಲ್ಲಬೇಕು ಎಂದು ಪರಿಸರ ಪ್ರೇಮಿ, ರಕ್ಷಕ ಬಿ.ಸಿ.ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಇದು ಪುರಸಭೆ ಆಸ್ತಿಯಾಗಿದ್ದು, ಅನುಮತಿ ಇಲ್ಲದೆ ಮರಗಳನ್ನು ಕಡಿಸಿದ್ದು ತಪ್ಪು. ಅಲ್ಲಿ ಕಸ, ಕಡ್ಡಿ ಉಂಟಾಗುತ್ತಿದ್ದರೆ ಅವರು ಮಾಡಿಕೊಂಡಿರುವ ಸಂಘದ ಮೂಲಕವೇ ಪುರಸಭೆಗೆ ಮನವಿ ಸಲ್ಲಿಸಬಹುದಾಗಿತ್ತು. ಸಾರ್ವಜನಿಕ ಆಸ್ತಿಯಲ್ಲಿ ತಮ್ಮದೇ ತೀರ್ಮಾನ ತೆಗೆದುಕೊಳ್ಳಲು ಅಲ್ಲಿನ ನಿವಾಸಿಗಳಿಗೆ ಹಕ್ಕಿಲ್ಲ. ಈ ವಿಷಯವಾಗಿ ಪುರಸಭೆ ವತಿಯಿಂದ ಅರಣ್ಯ ಇಲಾಖೆಗೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ ಎಂದರು.
ಉಪ ವಲಯ ಅರಣ್ಯಾಧಿಕಾರಿ ರಜಿನಿ ಮಾತನಾಡಿ, ಬೀರೂರು ಪುರಸಭೆ ಮುಖ್ಯಾಧಿಕಾರಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಮರ ಕಡಿತಲೆ ಮಾಡಿರುವವರ ಮತ್ತು ಅದಕ್ಕೆ ಕುಮ್ಮಕ್ಕು ನೀಡಿರುವವರ ವಿರುದ್ಧ ಶಿಕ್ಷೆ ಹಾಗೂ ದಂಡ ವಿಧಿಸಲು ಕಡೂರು ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.