ADVERTISEMENT

ಚಿಕ್ಕಮಗಳೂರು: ಮಲ್ಲಂದೂರಿನಲ್ಲಿ ಹ್ಯಾಟ್ರಿಕ್ ‘ಅಲ್ಟ್ರಾ’

ದಟ್ಟ ಕಾನನದ ನಡುವೆ ವಿವಿಧ ಕಡೆಯ ಓಟಗಾರರ ಸಂಭ್ರಮ; ಸ್ಥಳೀಯ ಆಹಾರ, ವಿಹಾರದ ರುಚಿ ಪರಿಚಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:25 IST
Last Updated 22 ನವೆಂಬರ್ 2025, 5:25 IST
ನೋಂದಣಿ ಮಾಡಿಕೊಂಡ ಓಟಗಾರರು ಬಿಬ್ ನಂಬರ್ ಪಡೆದುಕೊಳ್ಳುತ್ತಿರುವುದು
ನೋಂದಣಿ ಮಾಡಿಕೊಂಡ ಓಟಗಾರರು ಬಿಬ್ ನಂಬರ್ ಪಡೆದುಕೊಳ್ಳುತ್ತಿರುವುದು   

ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮೂಲಕ ಹೆಸರು ಗಳಿಸಿದ್ದ ಸಿದ್ಧಾರ್ಥ್ ಅವರ ವಿಯೋಗದ ನಂತರ ನೆಲೆ ಕಳೆದುಕೊಂಡಿದ್ದ ಮಲೆನಾಡು ಅಲ್ಟ್ರಾ ಟ್ರೇಕ್ ರೇಸ್ ಇಲ್ಲಿನ ಮಲ್ಲಂದೂರಿನಲ್ಲಿ ಶಾಶ್ವತ ಸ್ಥಾನ ಕಂಡುಕೊಂಡಿದ್ದು ಈ ಬಾರಿ ಹ್ಯಾಟ್ರಿಕ್ ಬಾರಿಸಿದೆ.

ಶನಿವಾರ ನಡೆಯಲಿರುವ ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ ಮತ್ತು ಅಮೆರಿಕದ ಟೆಕಿ ಆನ್ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಜಿರಿಮ್ ಸಂಸ್ಥೆ ಆಯೋಜಿಸಿರುವ ರೇಸ್‌ನಲ್ಲಿ ಈ ಬಾರಿ 50 ಕಿಲೊಮೀಟರ್ ರಾತ್ರಿ ಓಟದ ಹೊಸ ಆಕರ್ಷಣೆಯೂ ಸೇರಿಕೊಂಡಿದೆ.

ದೇಶದ ಅನೇಕ ಭಾಗಗಳಲ್ಲಿ ಮ್ಯಾರಥಾನ್ ಓಟಗಳು ನಡೆಯುತ್ತಿದ್ದರೂ ಮಾನಸಿಕ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಅಲ್ಟ್ರಾ ರನ್ ಅದರಲ್ಲೂ ಟ್ರೇಲ್ ರನ್ (ಕಚ್ಛಾ ರಸ್ತೆಯಲ್ಲಿ ಓಡುವುದು) ಹೆಚ್ಚಬೇಕು ಎಂಬ ಉದ್ದೇಶದಿಂದ 2015ರಲ್ಲಿ ಆರಂಭಗೊಂಡದ್ದು ಮಲೆನಾಡು ಅಲ್ಟ್ರಾ ಟ್ರೇಲ್ ರನ್‌. ಇದರ ಸ್ಥಾಪಕರಲ್ಲಿ ಮೊದಲಿಗರು ಸಿದ್ಧಾರ್ಥ್‌. ಅವರ ಕಾಫಿ ಡೇ ಎಸ್ಟೇಟ್‌ನಲ್ಲಿ ಆರಂಭಗೊಂಡಾಗ ಮೊದಲು ಇದ್ದದ್ದು 50 ಕಿಲೊಮೀಟರ್ ಮತ್ತು 100 ಕಿಮೀ ಓಟ ಮಾತ್ರ. ಆರಂಭದ ಆವೃತ್ತಿಯಲ್ಲಿ ಪಾಲ್ಗೊಂಡವರು 200 ಮಂದಿಯಷ್ಟೆ.

ADVERTISEMENT

‘ನಾವೆಲ್ಲ ಓಟಗಾರರು. ಓಟಗಾರರಿಂದ ಓಟಗಾರಿಗಾಗಿ ಎಂಬ ಧ್ಯೇಯದೊಂದಿಗೆ ಆರಂಭಿಸಿದ ಓಟವು ಓಟವನ್ನು ಪ್ರಚುರಪಡಿಸುವುದರೊಂದಿಗೆ ಪರಿಸರದ ಪ್ರಜ್ಞೆ ಮೂಡಿಸುವ ಉದ್ದೇಶವನ್ನೂ ಹೊಂದಿತ್ತು. ಬಹುತೇಕ ಮಂದಿಗೆ ತಮ್ಮ ಶಕ್ತಿಯೇ ತಿಳಿದಿರುವುದಿಲ್ಲ. ಅದನ್ನು ಹೋಗಲಾಡಿಸಲು ಮತ್ತು ನಿಮ್ಮ ದೌರ್ಬಲ್ಯದ ವಿರುದ್ಧ ನೀವೇ ಹೋರಾಡಿ ಗೆಲ್ಲಬೇಕು ಎಂಬ ಸಂದೇಶ ಸಾರಲು ಈ ಓಟವನ್ನು ಆರಂಭಿಸಲಾಗಿತ್ತು’ಎನ್ನುತ್ತಾರೆ, ಮಲೆನಾಡು ಅಲ್ಟ್ರಾ ರನ್‌ನ ಸ್ಥಾಪಕ ಮತ್ತು ನಿರ್ದೇಶಕ ಶ್ಯಾಮ್‌ ಸುಂದರ್ ಪಾಣಿ.

‘ಮೊದಲ ನಾಲ್ಕು ವರ್ಷ ಕತ್ತಲೆಕಾನುವಿನ ಕಾಫಿಡೇ ಎಸ್ಟೇಟ್‌ನಲ್ಲೇ ರೇಸ್ ನಡೆದಿತ್ತು. ಸಿದ್ಧಾರ್ಥ ಅವರು ಕಾಲವಾದ ನಂತರ ಮಸ್ಕಲ್ ಮಾಡಿ ಎಸ್ಟೇಟ್‌ನಲ್ಲಿ ನಡೆಯಿತು. 2020ರಲ್ಲಿ ಮೂಡಿಗೆರೆಯ ಮೈದಾನದಲ್ಲಿ ನಡೆಯಿತು. ಆಗ 50 ಕಿಮೀ ಮತ್ತು 80 ಕಿಮೀ ಓಟ ನಡೆದಿತ್ತು. 2022ರಲ್ಲಿ ಬಾಬಾ ಬುಡನ್‌ಗಿರಿ ಕಾಫಿ ಎಸ್ಟೇಟ್‌ನ ಸಿಪಾನಿಯಲ್ಲಿ ನಡೆಸಲಾಯಿತು. ಈಗ ಮೂರು ವರ್ಷಗಳಿಂದ ಒಂದೇ ಕಡೆ ‘ಸೆಟ್ಲ್‌’ ಆಗಲು ಸಾಧ್ಯವಾಗಿದೆ. ಇಲ್ಲಿ 22 ಎಸ್ಟೇಟ್ ಮಾಲೀಕರು ಸಹಕಾರ ನೀಡಲು ಒಪ್ಪಿಕೊಂಡಿದ್ದಾರೆ’ ಎನ್ನುತ್ತಾರೆ ಶ್ಯಾಮ್ ಸುಂದರ್.

‘ಈ ಓಟದಲ್ಲಿ ಬಹಳಷ್ಟು ಕ್ಯಾಲೊರಿ ಬರ್ನ್ ಆಗುತ್ತದೆ. ದಾರಿಯಲ್ಲಿ ಇಲೆಕ್ಟ್ರೊಲೈಟ್‌, ಮೊಟ್ಟೆ ಮತ್ತು ಅನ್ನ ನೀಡಲಾಗುತ್ತದೆ. 50 ಕಿಮೀಟರ್‌ಗೆ ಒಂಬತ್ತು ಮತ್ತು 30 ಕಿಮೀಗೆ ಐದು ಸಹಾಯಕೇಂದ್ರಗಳನ್ನು ಸ್ಥಾಪಿಸಲಾಗಿದೆ. 100 ಕಿಮೀ ಓಟ ಎರಡು ಲೂಪ್‌ಗಳಲ್ಲಿ ನಡೆಯಲಿದೆ’ ಎಂದು ಅವರು ತಿಳಿಸಿದರು.
‘ಇಲ್ಲಿ ನಾವು ಅತಿಥಿಗಳ ಹಾಗೆ. ಎಲ್ಲವನ್ನೂ ಮಾಡುವುದ ಮಲ್ಲಂದೂರಿನ ಜನರೇ. ಸ್ಥಳೀಯ ಆಹಾರವನ್ನೇ ಪರಿಚಯಿಸಲಾಗುತ್ತದೆ. ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಸುತ್ತಮುತ್ತಲ ಸುಮಾರು 100 ಹೋಂ ಸ್ಟೇಗಳು ಈ ರೇಸ್ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬುತ್ತವೆ. ಇಲ್ಲಿವರೆಗಿನ ರೇಸ್‌ನಲ್ಲಿ ಪಾಲ್ಗೊಂಡವರ ಪೈಕಿ ಸರಾಸರಿ 60 ಶೇಕಡದಷ್ಟು ಮಂದಿ 60 ನಿಗದಿತ ಅವಧಿಯಲ್ಲಿ ಗುರಿ ಮುಟ್ಟಿದ್ದಾರೆ’ ಎಂದು ಅವರು ತಿಳಿಸಿದರು.

ಶ್ಯಾಮ್‌ಸುಂದರ್
ಆನಂದ್
ಸಿತಿ ಹಜಾ
ಸಿಂಧು
ನಿಶ್ಚಿತ್
ಸ್ವರೂಪ್
ಅಂತರರರಾಷ್ಟ್ರೀಯ ಟ್ರೇಲ್ ರನ್ನರ್ಸ್ ಸಂಸ್ಥೆಯಿಂದ (ಐಟಿಆರ್‌ಎ) ಮಾನ್ಯತೆ ಪಡೆದಿರುವ ಭಾರತದ ಏಕೈಕ ರೇಸ್ ಇದು. ಈ ಬಾರಿ 1200 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ
. ಶ್ಯಾಮ್ ಸುಂದರ್ ಪಾಣಿ ರೇಸ್‌ ನಿರ್ದೇಶಕ
ಇದೊಂದು ವಿಶಿಷ್ಟ ಓಟ. ದಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಅಲ್ಲಲ್ಲಿ ಓಟಗಾರರೇ ಸ್ವತಃ ಪರಿಹರಿಸಿಕೊಂಡು ಮುಂದೆ ಸಾಗಬೇಕು. ನಗರ ಜೀವನದಲ್ಲಿ ಬೇಸತ್ತಿರುವವರಿಗೆ ಇಲ್ಲಿ ನವಚೇತನ ಸಿಗುತ್ತದೆ.
ಆನಂದ್ ಅಡ್ಕೋಳಿ ರೇಸ್ ನಿರ್ದೇಶಕ
ಏಷ್ಯಾಟಿಕ್ ಮಾಸ್ಟರ್ಸ್‌ನಲ್ಲಿ ಪಾಲ್ಗೊಂಡಿದ್ದೆ. ಭಾರತದಲ್ಲಿ ಇದು ನನ್ನ ಮೊದಲ ಓಟ. ಇಲ್ಲಿನ ಪ್ರಕೃತಿ ನನ್ನನ್ನು ಬೆರಗುಗೊಳಿಸಿದೆ. ಒಂದಿಷ್ಟು ನಿರೀಕ್ಷೆಯೊಂದಿಗೆ ಬಂದಿದ್ದೆ. ಈಗ ತುಂಬ ರೋಮಾಂಚನವಾಗಿದೆ.
ಸಿತಿ ಹಜಾ ಮಲೇಷ್ಯದ ಓಟಗಾರ್ತಿ
ಬೆಂಗಳೂರು ಮೌಂಟೇನ್ ಫೆಸ್ಟಿವಲ್‌ನಲ್ಲಿ ದೀರ್ಘದೂರ ಓಟದಲ್ಲಿ ಪಾಲ್ಗೊಂಡಿದ್ದೆ. ಮಲ್ನಾಡ್ ಅಲ್ಟ್ರಾ ರನ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಖುಷಿಯೂ ಆತಂಕವೂ ಇದೆ.
ಸಿಂಧು ಬೆಂಗಳೂರಿನ ಕ್ರೀಡಾಪಟು
ಅಲ್ಟ್ರಾ ರೇಸ್‌ನಿಂದಾಗಿ ಸುತ್ತಮುತ್ತಲ ಹೋಂಸ್ಟೇಗಳಲ್ಲಿ ಬುಕ್ಕಿಂಗ್ ಹೆಚ್ಚಾಗುತ್ತದೆ. ಆಯೋಜಕರು ಸ್ಥಳೀಯ ಸರ್ಕಾರಿ ಶಾಲೆಗೆ ಕ್ರೀಡಾ ಕಿಟ್ ಕೊಡುವ ಯೋಜನೆ ಹಮ್ಮಿಕೊಡಿದ್ದಾರೆ.
ನಿಶ್ಚಿತ್ ಅರಳಗುಪ್ಪೆ ಸ್ಥಳೀಯ ಸಂಘಟಕ
ಈ ಓಟದಿಂದಾಗಿ ಇಲ್ಲಿನ ಸನ್‌ ಸೆಟ್ ಪಾಯಿಂಟ್‌ ಶೂಟಿಂಗ್ ಪಾಯಿಂಟ್‌ ಮುತ್ತೋಡಿ ಸಫಾರಿ ಮುಂತಾದ ಪ್ರವಾಸೋದ್ಯಮ ತಾಣಗಳ ಬಗ್ಗೆ ಹೆಚ್ಚು ಜನರು ತಿಳಿದುಕೊಳ್ಳುವಂತೆ ಆಗಿದೆ. ಅದು ಅಭಿವೃದ್ಧಿಗೆ ಪೂರಕವಾಗಿದೆ.
ಸ್ವರೂಪ್ ಗೌಡ ಸ್ಥಳೀಯ ಸಂಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.