ADVERTISEMENT

ಚಿಕ್ಕಮಗಳೂರು | ಶಾಲೆ ಸಮಸ್ಯೆ ಸದನದಲ್ಲಿ ಚರ್ಚೆ: ಭೋಜೇಗೌಡ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:17 IST
Last Updated 30 ಡಿಸೆಂಬರ್ 2025, 7:17 IST
ಅನುದಾನ ರಹಿತ ಶಾಲೆಗಳ ಸಮಾಲೋಚನಾ ಸಭೆಯನ್ನು ಎಸ್.ಎಲ್‌.ಭೋಜೇಗೌಡ ಉದ್ಘಾಟಿಸಿದರು
ಅನುದಾನ ರಹಿತ ಶಾಲೆಗಳ ಸಮಾಲೋಚನಾ ಸಭೆಯನ್ನು ಎಸ್.ಎಲ್‌.ಭೋಜೇಗೌಡ ಉದ್ಘಾಟಿಸಿದರು   

ಚಿಕ್ಕಮಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅನುದಾನ ರಹಿತ ಶಾಲೆಗಳ ಪಾತ್ರ ದೊಡ್ಡದಿದೆ. ಈ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ಇಎಸ್‌ಐ, ಇಪಿಎಫ್‌ಒ ಯೋಜನೆಗಳ ಕುರಿತ ಮಾಹಿತಿ ಕಾರ್ಯಾಗಾರ ಹಾಗೂ ಅನುದಾನ ರಹಿತ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಕುರಿತ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಶೇ 60ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರೈಸುತ್ತಿರುವ ಅನುದಾನ ರಹಿತ ಶಾಲೆಗಳ ಸಮಸ್ಯೆಗಳಿಗೆ ಸದಾ ಬೆನ್ನುಲುಬಾಗಿ ನಿಲ್ಲುತ್ತೇನೆ. ಯಾವುದೇ ಅಧಿಕಾರಿಗಳ ಕಿರುಕುಳ ಅಥವಾ ಶಾಲೆಗಳ ಸಮಸ್ಯೆಗಳನ್ನು ನ್ಯಾಯಬದ್ಧವಾಗಿ ಪರಿಹಾರ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ವಿಧಾನ ಮಂಡಲ ಅಧಿವೇಶನ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ರಹಿತ ಶಾಲೆಗಳ ಕೊರತೆ ಬಗೆಹರಿಸುತ್ತೇನೆ.  ಜಿಲ್ಲೆಯಾದ್ಯಂತ ಹಲವು ಅನುದಾನಿತ ಶಾಲೆಗಳ ಸಮಸ್ಯೆಗಳನ್ನು ಡಿಡಿಪಿಐ ಹಾಗೂ ಬಿಇಒ ಸೂಕ್ತ ರೀತಿಯಲ್ಲಿ ಬಗೆಹರಿಸಬೇಕು ಎಂದು ಸೂಚಿಸಿದರು.

‘ಖಾಸಗಿ ಶಾಲೆಗಳು ಪ್ರತಿ ವರ್ಷ ಎದುರಿಸುತ್ತಿರುವ ಮಾನ್ಯತೆ ನವೀಕರಣ ಪ್ರಕ್ರಿಯೆಯಲ್ಲಿನ ಸಂಕೀರ್ಣತೆಗಳ ಬಗ್ಗೆ ಅರಿವಿದೆ. ಈ ನವೀಕರಣ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಸರ್ಕಾರ ರಚಿಸಿರುವ ವಿಶೇಷ ಶಾಸನ ಸಭೆಯ ಸಮಿತಿಯಲ್ಲಿ ನಾನೂ ಸದಸ್ಯನಾಗಿದ್ದೇನೆ. ಶಾಲೆಗಳಿಗೆ ಎದುರಾಗಿರುವ ತಾಂತ್ರಿಕ ಅಡೆತಡೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

ರಾಜ್ಯ ಘಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಅನುದಾನ ರಹಿತ ಶಾಲೆಗಳು ಎದುರಿಸುತ್ತಿರುವ ತೆರಿಗೆ, ಆಡಳಿತಾತ್ಮಕ ಮತ್ತು ಆರ್ಥಿಕ ಸಮಸ್ಯೆಗಳನ್ನು ವಿವರಿಸಿದರು.

ಇಪಿಎಫ್‌ಒ ಅಧಿಕಾರಿ ಜಿ.ಭರತ್ ಹಾಗೂ ಇಎಸ್‌ಐ ಅಧಿಕಾರಿ ರೇಣುಕಾ ಅವರು ಭವಿಷ್ಯ ನಿಧಿ ಯೋಜನೆ, ನೌಕರರ ರಾಜ್ಯ ವಿಮಾ ಯೋಜನೆಗಳಿಂದ ದೊರೆಯುಬಹುದಾದ ಸೌಲಭ್ಯಗಳ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ಪೈ ವಹಿಸಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ, ಒಕ್ಕೂಟದ ಕಾರ್ಯದರ್ಶಿ ನಂದಕುಮಾರ್, ಖಜಾಂಚಿ ಶರದ್, ಸಹ ಕಾರ್ಯದರ್ಶಿ ಶ್ರೀನಿವಾಸ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.