ಬೀರೂರು ರೈಲ್ವೆ ನಿಲ್ದಾಣದಲ್ಲಿ ಅನಾಥ ಶವಗಳಿಗೆ ಮುಕ್ತಿದಾತನಾಗಿ ಹೆಸರು ಮಾಡಿದ್ದ ಅಂಜನಿಯನ್ನು ಬುಧವಾರ ಕೆ.ಆರ್.ಪೇಟೆಯ ಅನಾಥಾಶ್ರಮಕ್ಕೆ ಕಳುಹಿಸಲಾಯಿತು.
ಬೀರೂರು(ಕಡೂರು): ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸಣ್ಣಪುಟ್ಟ ಕೆಲಸ ಮಾಡಿ, ಜೀವನ ಸಾಗಿಸುವ ಜತೆಗೆ ರೈಲಿಗೆ ಸಿಲುಕಿ ಮೃತಪಟ್ಟ ನೂರಾರು ಶವಗಳಿಗೆ ಮುಕ್ತಿ ಕಲ್ಪಿಸುವಲ್ಲಿ ನೆರವಾಗುತ್ತಿದ್ದ ಅಂಜನಿ ಅವರಿಗೆ ಅಸ್ವಸ್ಥತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಸಹೃದಯಿಗಳ ನೆರವಿನಿಂದ ಬುಧವಾರ ಕೆ.ಆರ್.ಪೇಟೆಯಲ್ಲಿರುವ ಮಾತೃಭೂಮಿ ವೃದ್ಧಾಶ್ರಮಕ್ಕೆ ಅವರನ್ನು ಕಳುಹಿಸಿ ಕೊಡಲಾಯಿತು.
ರೈಲ್ವೆ ನಿಲ್ದಾಣವನ್ನೇ ತನ್ನ ನಿವಾಸ ಮಾಡಿಕೊಂಡು, ರೈಲ್ವೆ ಪೊಲೀಸರ ಸಹಾಯದಿಂದ ಇಲ್ಲೇ ಬದುಕು ನಡೆಸುತ್ತಿದ್ದರು. ಬೀರೂರು ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ರೈಲಿಗೆ ಸಿಲುಕಿ ಮೃತಪಟ್ಟ ಅನಾಥ ಹೆಣಗಳನ್ನು ಹಳಿಯಿಂದ ಎತ್ತಿ ತಂದು ಮರಣೋತ್ತರ ಪರೀಕ್ಷೆವರೆಗೆ ಸಹಕಾರ ನೀಡುತ್ತಿದ್ದರು.
ಅಂಜನಿ ಅವರು ಅನುಭವಿಸುತ್ತಿರುವ ಮಾನಸಿಕ ಅಸ್ವಸ್ಥತೆಯನ್ನು ಗಮನಿಸಿದ ಪುರಸಭೆ ಮಾಜಿ ಅಧ್ಯಕ್ಷೆ, ಇನ್ನರ್‌ವೀಲ್ ಅಧ್ಯಕ್ಷೆ ಸವಿತಾ ರಮೇಶ್ ಹಾಗೂ ತರೀಕೆರೆಯ ಸಮಾಜ ಸೇವಕ ಮಂಜುನಾಥ್ ಅವರ ಗಮನಕ್ಕೆ ತಂದು ಅವರ ಸಹಕಾರದಲ್ಲಿ ಕೆ.ಆರ್.ಪೇಟೆ ಮಾತೃಭೂಮಿ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟರು.
ಬಡವನಾಗಿದ್ದರೂ ಯಾರನ್ನೂ ಬೇಡದೇ–ಕಾಡದೇ ಯಾರಾದರೂ ಕೊಟ್ಟರೆ ಮಾತ್ರ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದ ಅಂಜನಿ, ರೈಲ್ವೆ ಇಲಾಖೆಗೆ ನೀಡುತ್ತಿದ್ದ ಸಹಕಾರವನ್ನು ಮರೆಯುವಂತಿಲ್ಲ ಎನ್ನುತ್ತಾರೆ ರೈಲ್ವೆ ಪೊಲೀಸ್ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ್ ಮತ್ತು ನವೀನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.