ADVERTISEMENT

ಹೋಂ ಸ್ಟೇ ಸ್ನಾನದ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 4:58 IST
Last Updated 22 ಅಕ್ಟೋಬರ್ 2021, 4:58 IST

ಚಿಕ್ಕಮಗಳೂರು: ತಾಲ್ಲೂಕಿನ ಲಕ್ಷ್ಮಿಪುರ ಬಳಿಯ ಹೋಂ ಸ್ಟೇ ಒಂದರ ಸ್ನಾನದ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಮಹಿಳೆಯು ಅಜ್ಜಂಪುರ ತಾಲ್ಲೂಕಿನ ಗ್ರಾಮದವರು. ಎರಡು ತಿಂಗಳ ಹಿಂದೆ ಮದುವೆಯಾಗಿತ್ತು. ಪತಿಯ ಊರು ತುಮಕೂರು.

ನವದಂಪತಿ ಅ.16ರಂದು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಾಣಗಳಿಗೆ ಭೇಟಿ ನೀಡಿ ಲಕ್ಷ್ಮಿಪುರ ಬಳಿಯ ಹೋಂ ಸ್ಟೇ ವೊಂದರಲ್ಲಿ ತಂಗಿದ್ದಾರೆ. 17ರಂದು ಬೆಳಿಗ್ಗೆ ಘಟನೆ ನಡೆದಿದೆ. ಮಹಿಳೆಯ ಪತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

‘17ರಂದು ಬೆಳಿಗ್ಗೆ 9.30ರ ಸುಮಾರಿಗೆ ಪತ್ನಿಯು ಸ್ನಾನಕ್ಕೆ ಹೋದರು. ಬಹಳ ಹೊತ್ತಾದರೂ ಸ್ನಾನದ ಕೋಣೆಯಿಂದ ಹೊರಬರಲಿಲ್ಲ. ಕೂಗಿದರೂ ಬಾಗಿಲು ತೆಗೆಯಲಿಲ್ಲ. ತಕ್ಷಣವೇ ಬಾಗಿಲು ಒಡೆದು ಒಳಗೆ ಹೋದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ನಿ ಬಿದ್ದಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

‘ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು. ಹೆಚ್ಚಿನ ಚಿಕಿತ್ಸೆಗೆ ಉಡುಪಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಹೋಂ ಸ್ಟೇಯವರು ಸ್ನಾನದ ಕೋಣೆಯಲ್ಲಿ ಗ್ಯಾಸ್‌ ಗೀಸರ್‌ ವ್ಯವಸ್ಥಿತವಾಗಿ ನಿರ್ವಹಿಸದೆ, ನಿರ್ಲಕ್ಷ್ಯದಿಂದಾಗಿ ಪತ್ನಿಗೆ ತೊಂದರೆಯಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಸುರಕ್ಷತೆ ಧಕ್ಕೆ (ಐಪಿಸಿ 336), ನಿರ್ಲಕ್ಷ್ಯ ತೋರಿದ (ಐಪಿಸಿ 284) ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.