ಬೀರೂರು: ಹೋಬಳಿ ಮತ್ತು ಕಡೂರು ತಾಲ್ಲೂಕಿನ ಪ್ರಮುಖ ಬೆಳೆಯಾಗಿರುವ ರಾಗಿ ಕಟಾವಿಗೆ ಸಿದ್ಧವಾಗಿದ್ದು, ಅಕಾಲಿಕ ಮಳೆಯಿಂದ ಕಟಾವಿಗೆ ಅಡ್ಡಿಯಾಗಿದೆ.
ಬೀರೂರು, ಕಸಬಾ, ಹಿರೇನಲ್ಲೂರು, ಯಗಟಿ, ಸಖರಾಯಪಟ್ಟಣ ಹೋಬಳಿಗಳಲ್ಲಿ ಸೋಮವಾರ ರಾತ್ರಿಯಿಡೀ ಮಳೆ ಸುರಿದಿದೆ. ಈಗಾಗಲೇ ಕಟಾವು ಮಾಡಿರುವ ರಾಗಿಯನ್ನು ಸಂರಕ್ಷಿಸುವ ಚಿಂತೆ ಒಂದೆಡೆಯಾದರೆ, ಇನ್ನೊಂದೆಡೆ ಜಮೀನಿನಲ್ಲಿ ಕಟಾವು ಹಂತ ತಲುಪಿ ತೆನೆಕಟ್ಟಿ ನಿಂತಿದ್ದ ರಾಗಿ, ಮಳೆಯಿಂದ ನೆಲಕ್ಕಚ್ಚುವ ಆತಂಕ ಉಂಟಾಗಿದೆ.
ಈ ಬಾರಿ ಕಡೂರು ತಾಲ್ಲೂಕಿನಲ್ಲಿ ರಾಗಿ ಬಿತ್ತನೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಯಗಟಿ, ಸಖರಾಯಪಟ್ಟಣ ಮತ್ತು ಚೌಳಹಿರಿಯೂರು ಹೋಬಳಿಗಳಲ್ಲಿ ನಿಗದಿತ ಗುರಿ ಮೀರಿ ಅಂದರೆ, 33ಸಾವಿರ ಹೆಕ್ಟೇರ್ ಪ್ರದೇಶದ ಬದಲು 41.5ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ರೈತರು ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಮುಯ್ಯಿ ಆಳು ಕಟಾವು ಪದ್ಧತಿ ಕೈಬಿಟ್ಟು, ಯಂತ್ರಗಳ ಮೊರೆ ಹೋಗಿದ್ದಾರೆ. ಮಳೆ ಸುರಿದಿರುವುದರಿಂದ ರಾಗಿ ಕಪ್ಪಾಗುವ, ಮೇವು ಕೂಡಾ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.
ಈಗಾಗಲೇ ಕಟಾವು ಮುಗಿಸಿರುವ ರೈತರು ರಾಗಿ ಒಣಗಿಸಲು ಮುಂದಾಗಿದ್ದರು. ಹಲವರು ಜಮೀನಿನಲ್ಲೇ ಮೇವನ್ನು ಬಿಟ್ಟಿದ್ದರು. ಸಾಕಷ್ಟು ರೈತರು ಯಂತ್ರಗಳ ಲಭ್ಯತೆ ನೋಡಿಕೊಂಡು ಕಟಾವಿಗೆ ಸಿದ್ಧತೆ ನಡೆಸಿದ್ದರು. ಆದರೆ, ಭಾನುವಾರದಿಂದ ಬದಲಾಗಿರುವ ಹವಾಮಾನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದ ಸ್ಥಿತಿಯನ್ನು ನಿರ್ಮಿಸಿದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತದೆ. ಆದರೆ, ಬೆಳೆ ಒಣಗಿರಬೇಕು ಮತ್ತು ಗುಣಮಟ್ಟದ್ದಾಗಿರಬೇಕು ಎನ್ನುವ ಷರತ್ತು ಇರುವುದರಿಂದ ಮಳೆ ಮುಂದುವರಿದರೆ ರೈತರಿಗೆ ಗುಣಮಟ್ಟ ಕುಸಿತದಿಂದ ನಷ್ಟ ಉಂಟಾಗಲಿದೆ.
’ಬಿಸಿಲು ಮೂಡದಿದ್ದರೆ ಫಸಲು ನಷ್ಟ’
‘ಎಕರೆಗೆ ₹3500 ಕೊಟ್ಟು ಯಂತ್ರದ ಸಹಾಯದಿಂದ ರಾಗಿ ಕಟಾವು ಮಾಡಿಸಿದ್ದೇನೆ. ಹಸಿಯಾಗಿರುವ ರಾಗಿ ಒಣಗಲು ನಾಲ್ಕು ದಿನಗಳು ಬೇಕು. ಬಿಸಿಲು ಬಾರದಿದ್ದರೆ ತೇವಾಂಶ ಹೆಚ್ಚಾಗಿ ಬೆಳೆ ಹಾಳಾಗುವ ಸಾಧ್ಯತೆ ಇದೆ’ ಎಂದು ರೈತ ಶ್ರೀನಿವಾಸ ಹೇಳಿದರು.
‘ಕೆಲವೇ ರೈತರು ಬೆಳೆ ಸಂಸ್ಕರಿಸಿದ್ದು ಬಹಳ ಕಡೆ ರಾಗಿ ಇನ್ನೂ ಕಟಾವು ಆಗಬೇಕಿದೆ. ಮಳೆಗೆ ಸಿಲುಕಿದರೆ ನೆಲಕ್ಕೆ ಬೀಳುವ ರಾಗಿ ಕಪ್ಪಾಗುತ್ತದೆ ಮತ್ತು ಮೇವೂ ಹಾಳಾಗುತ್ತದೆ. ಈ ಬಾರಿ ಸರ್ಕಾರ ಉತ್ತಮ ಬೆಂಬಲ ಬೆಲೆ ಘೋಷಿಸಿದ್ದು ಉತ್ತಮ ಫಸಲು ಹಾಗೂ ಲಾಭದ ನಿರೀಕ್ಷೆಯಲ್ಲಿದ್ದೆವು. ಆದರೆ ಈ ಸನ್ನಿವೇಶದಲ್ಲಿ ಅಸಲಿಗೆ ಹೋರಾಟ ಮಾಡುವುದೇ ಕಷ್ಟ ಎನ್ನುವ ಸ್ಥಿತಿ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.