ADVERTISEMENT

ಚಿಕ್ಕಮಗಳೂರು: ನಿಗಮಕ್ಕೆ ನೇಮಕ; ಭುಗಿಲೆದ್ದ ಅಸಮಾಧಾನ

ಎಲ್ಲರ ಸಹಕಾರ ಪಡೆದು ಕಾರ್ಯ ನಿರ್ವಹಿಸುವೆ–ಅಧ್ಯಕ್ಷ ಗಿರೀಶ್ ಉಪ್ಪಾರ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:17 IST
Last Updated 29 ನವೆಂಬರ್ 2020, 2:17 IST
ಫೇಸ್‌ಬುಕ್‌ ಪೋಸ್ಟ್‌
ಫೇಸ್‌ಬುಕ್‌ ಪೋಸ್ಟ್‌   

ಚಿಕ್ಕಮಗಳೂರು/ ಕಡೂರು: ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಡೂರು ತಾಲ್ಲೂಕಿನ ಜಿ.ಕೆ. ಗಿರೀಶ್ ಉಪ್ಪಾರ್ ಅವರನ್ನು ನೇಮಿಸಿರುವುದಕ್ಕೆ ಬಿಜೆಪಿ ಜಿಲ್ಲಾ ಘಟಕದಲ್ಲಿ ಅಸಮಾಧಾನದ ಅಲೆ ಎದ್ದಿದೆ. ಕಡೂರು ಶಾಸಕ ಬೆಳ್ಳಿಪ್ರಕಾಶ್ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅತೃಪ್ತಿ ವಿಚಾರ ಮುಟ್ಟಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಬೆಳ್ಳಿಪ್ರಕಾಶ್‌ ಅವರು ಬಿಎಸ್‌ವೈ ಅವರೊಂದಿಗೆ ಚರ್ಚಿಸಿದ್ದಾರೆ.

ಬೆಳ್ಳಿಪ್ರಕಾಶ್‌ ‘ಪ್ರಜಾವಾಣಿ’ ಯೊಂದಿಗೆ ಮಾತ ನಾಡಿ, ‘ಗಿರೀಶ್ ಉಪ್ಪಾರ್ ನೇಮಕಕ್ಕೆ ಬಿಜೆಪಿ ಜಿಲ್ಲಾ ಘಟಕದ ವಿರೋಧವಿದೆ. ನಾಲ್ವರು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಕಾರ್ಯಕರ್ತರ ಅಭಿಪ್ರಾಯಗಳನ್ನು ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇವೆ. ಅವರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ತಿಳಿಸಿದರು.

ADVERTISEMENT

ಗಿರೀಶ್ ನೇಮಕ ವಿರೋಧಿಸಿ ಬಿಜೆಪಿ ಕಡೂರು ಮಂಡಲದ ಪದಾಧಿಕಾರಿಗಳು ಸಹಿತ 17 ಮಂದಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪತ್ರವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ ಅವರಿಗೆ ಈಗಾಗಲೇ ಸಲ್ಲಿಸಿದ್ದಾರೆ.

‘ಗಿರೀಶ್ ಉಪ್ಪಾರ್ ಬಿಜೆಪಿ ಸಕ್ರಿಯ ಕಾರ್ಯಕರ್ತರಲ್ಲ. ಸ್ಥಳೀಯವಾಗಿ ಪಕ್ಷದ ಯಾವುದೇ ಚಟುವಟಿಕೆ, ಸಂಘಟನೆಯಲ್ಲಿ ಭಾಗವಹಿಸಿಲ್ಲ. ಪಕ್ಷದ ಹಿರಿಯ ನಾಯಕರ ಒಡನಾಟದಲ್ಲಿದ್ದು ಅವರ ಬೆಂಬಲದಿಂದ ಸ್ಥಾನ ಗಿಟ್ಟಿಸಿದ್ದಾರೆ. ಇದು ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ನೇಮಕ ರದ್ದು ಮಾಡಬೇಕು’ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಜಿಲ್ಲಾ ಘಟಕದ ಮುಖಂಡರೊಬ್ಬರು ತಿಳಿಸಿದರು.

ಪಕ್ಷದ ವರಿಷ್ಠರಿಗೆ ಪತ್ರ: ಕಲ್ಮರುಡಪ್ಪ

‘ಗಿರೀಶ್‌ ಉಪ್ಪಾರ್‌ ಅವರನ್ನು ನೇಮಕ ಮಾಡಿರುವುದು ಬಿಜೆಪಿ ಜಿಲ್ಲಾ ಘಟಕಕ್ಕೆ ಆಶ್ಚರ್ಯ ತಂದಿದೆ. ಗಿರೀಶ್‌ ಅವರ ಹಿಂಬಾಲಕರೊಬ್ಬರು ‘2023ರ ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವುದು ಗಮನಕ್ಕೆ ಬಂದಿದೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ ತಿಳಿಸಿದರು.

‘ಈ ವಿಚಾರವನ್ನು ಪತ್ರ ಮುಖೇನ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲಿ ವರಿಷ್ಠರನ್ನು ಖುದ್ದು ಭೇಟಿಯಾಗಿ ಚರ್ಚಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.