
ಹಿರೇಮಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಡಿ.ತಮ್ಮಯ್ಯ ಗುದ್ದಲಿ ಪೂಜೆ ನೆರೆವೇರಿಸಿದರು.
ಚಿಕ್ಕಮಗಳೂರು: ಸೈಕಲ್ ತುಳಿ ಸಮಸ್ಯೆ ತಿಳಿ ಕಾರ್ಯಕ್ರಮದ ಮೂಲಕ ನಗರ ಪ್ರದಕ್ಷಿಣೆ ಮಾಡಲಾಗುತ್ತಿದ್ದು, ನಾಗರಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಸ್ಥಳದಲ್ಲೇ ಅವರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಹಿರೇಮಗಳೂರು ಮುಖ್ಯ ರಸ್ತೆ, ಕಲ್ಯಾಣನಗರ ರಸ್ತೆ, ಹೌಸಿಂಗ್ ಬೋರ್ಡ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಿರೇಮಗಳೂರು ಮುಖ್ಯ ರಸ್ತೆಗೆ ₹33.70 ಲಕ್ಷ, ಕಲ್ಯಾಣನಗರ ರಸ್ತೆಗೆ ₹36 ಲಕ್ಷ, ಹೌಸಿಂಗ್ ಬೋರ್ಡ್ ರಸ್ತೆಗೆ ₹25 ಅನುದಾನ ಲಭ್ಯವಾಗಿದೆ. ಡಾಂಬರ್ ಹಾಕುವ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದರು.
‘ನಗರದಲ್ಲಿ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ನನ್ನ ಹುಟ್ಟೂರು ಹಿರೇಮಗಳೂರಿನ ಮುಖ್ಯ ರಸ್ತೆಯಲ್ಲಿ ಅತಿ ಹೆಚ್ಚು ಗುಂಡಿ ಬಿದ್ದಿವೆ. ಸರ್ಕಾರದ ವಿಶೇಷ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳಿದರು.
‘ನಾನು ಓದಿದ ಶಾಲೆಯನ್ನು ವಿಭಿನ್ನವಾಗಿ ಅಭಿವೃದ್ಧಿಪಡಿಸಲಾಗಿದೆ. ಕೋದಂಡರಾಮ ಸ್ವಾಮಿ ದೇವಾಲಯದ ಜತೆಗೆ ಹಲವು ದೇವಾಲಯಗಳ ಪುನಶ್ಚೇತನ ಕಾರ್ಯ ಪ್ರಾರಂಭಗೊಂಡಿದೆ. ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ‘ಶಾಸಕರು ₹27.5 ಕೋಟಿ ಅನುದಾನ ತಂದು ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲಿ’ ಎಂದರು.
ನಗರಸಭೆ ಉಪಾಧ್ಯಕ್ಷೆ ಲಲಿತಾ ಬಾಯಿ, ಸದಸ್ಯರಾದ ಎ.ಸಿ ಕುಮಾರೇಗೌಡ, ಕವಿತಾ ಶೇಖರ್, ಅರುಣಕುಮಾರ್, ವರಸಿದ್ಧಿ ವೇಣುಗೋಪಾಲ, ಇಂದಿರಾ ಶಂಕರ್, ಪರಮೇಶ್ ರಾಜ್ ಅರಸ್, ಗುರುಮಲ್ಲಪ್ಪ, ಲಕ್ಷ್ಮಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಗ್ರಾಮಸ್ಥರಾದ ಎಚ್.ಎಂ. ನಾರಾಯಣ, ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಸುರೇಶ್, ಕಾಂಗ್ರೆಸ್ ಮುಖಂಡ ರಾಮಚಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.