ADVERTISEMENT

ಅಮೆರಿಕ ಪ್ರಜೆಯ ಯೋಗಾನರಸಿಂಹ ದೇವಸ್ಥಾನಗಳ ಪ್ರೀತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 12:53 IST
Last Updated 16 ಜೂನ್ 2022, 12:53 IST
ತಾಲ್ಲೂಕಿನ ದೊಡ್ಡಪಟ್ಟಣಗೆರೆಯ ಬಳ್ಳಕ್ಕಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಅಮೆರಿಕಾ ಪ್ರಜೆ ಗೊರಿಕ್ ಧ್ರುವ ಅವರು ಗ್ರಾಮಸ್ಥರ ಬಳಿ ದೇಗುಲ ಮಾಹಿತಿ ಪಡೆಸರು
ತಾಲ್ಲೂಕಿನ ದೊಡ್ಡಪಟ್ಟಣಗೆರೆಯ ಬಳ್ಳಕ್ಕಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಅಮೆರಿಕಾ ಪ್ರಜೆ ಗೊರಿಕ್ ಧ್ರುವ ಅವರು ಗ್ರಾಮಸ್ಥರ ಬಳಿ ದೇಗುಲ ಮಾಹಿತಿ ಪಡೆಸರು   

ಕಡೂರು: ಇವರು ಗೊರಿಕ್. ಅಮೆರಿಕನ್ ಪ್ರಜೆ. ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿರುವ ಯೋಗಾನರಸಿಂಹ ದೇವಸ್ಥಾನಗಳ ಬಗ್ಗೆ ವಿಶೇಷ ಅಧ್ಯಯನ ಇವರ ಹವ್ಯಾಸ.

ಹುಟ್ಟಿದ್ದು ಕ್ರೈಸ್ತಧರ್ಮದಲ್ಲಿಯಾದರೂ ಹಿಂದೂ ಧರ್ಮವನ್ನು ಅನುಸರಿಸಿ ತಮ್ಮ ಹೆಸರನ್ನು ಧ್ರುವ ಎಂದು ಬದಲಿಸಿಕೊಂಡಿದ್ದಾರೆ. ತಂದೆ ಡೆನಿಸ್ ತಾಯಿ ಡಯಾನ. ಅವರೂ ಸಹ ಹಿಂದೂ ಧರ್ಮ ದೀಕ್ಷೆ ಪಡೆದು ಧರ್ಮಾತ್ಮ ಮತ್ತು ದ್ವಿಜಯಪ್ರಿಯಾ ಎಂದು ಹೆಸರಿಸಿಕೊಂಡಿದ್ದಾರೆ.

ಗೊರಿಕ್ ಅವರು, ಕರ್ನಾಟಕದ ಮೇಲುಕೋಟೆ, ಹೆಡತಲೆ, ಸಾಲಿಗ್ರಾಮ, ಶಾಂತಿಗ್ರಾಮ ಮುಂತಾದೆಡೆ ಇರುವ ನರಸಿಂಹ ದೇಗುಲಗಳು, ಅಲ್ಲಿನ ವಿಶೇಷತೆಗಳನ್ನು ಅಧ್ಯಯನ‌ ಮಾಡಿ ಒಂದು ಪುಸ್ತಕ ಪ್ರಕಟಿಸಿದ್ದಾರೆ. ‘ನರಸಿಂಹ- ಲಾಸ್ಟ್ ಟೆಂಪಲ್ಸ್’ ಎಂಬ ಪುಸ್ತಕದಲ್ಲಿ ರಾಜ್ಯದ ನರಸಿಂಹ ಕ್ಷೇತ್ರಗಳ ಸಮಗ್ರ ವಿವರಗಳಿವೆ. ಅಪೂರ್ವ ಚಿತ್ರಗಳಿವೆ. ಯಾವುದೇ ಭಾಗದಲ್ಲಿ ನರಸಿಂಹ ದೇಗುಲಗಳ ಬಗ್ಗೆ ಮಾಹಿತಿ ದೊರೆತರೆ ಅಲ್ಲಿಗೇ ಹೋಗಿ ಅಧ್ಯಯನ ಮಾಡಿ ವಿವರ ದಾಖಲಿಸುವ ಕಾರ್ಯ ಇವರಿಗೆ ಪ್ರಿಯವಾದುದು.

ADVERTISEMENT

ಗೊರಿಕ್ ಗುರುವಾರ ದೊಡ್ಡಪಟ್ಟಣಗೆರೆ ಗ್ರಾಮದ ಬಳ್ಳಕ್ಕಿ ನರಸಿಂಹ ದೇಗುಲಕ್ಕೆ ಭೇಟಿ ನೀಡಿದರು. ಹೊಯ್ಸಳರ ಕಾಲದ ತ್ರಿಕೂಟ ದೇಗುಲದಲ್ಲಿ ಇರುವ ನಾಲ್ಕು ಅಡಿ ಎತ್ತರದ ನರಸಿಂಹನ ವಿಗ್ರಹ ಕಂಡು ಭಾವುಕರಾದರು. ಗ್ರಾಮಸ್ಥರ ಬಳಿ ದೇಗುಲ ಇತಿಹಾಸದ ಮಾಹಿತಿ ಪಡೆದರು.

‘ನರಸಿಂಹ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡುತ್ತಿರುವೆ. ಯಾವುದೇ ವ್ಯವಹಾರಿಕ ಉದ್ದೇಶವಿಲ್ಲ. ಬದಲಾಗಿ ಹಿಂದೂ ಧರ್ಮ ಮತ್ತು ವಿಶೇಷವಾಗಿ ನರಸಿಂಹ ಕ್ಷೇತ್ರಗಳು ವಿಶ್ವಕ್ಕೆ ಪರಿಚಯವಾಗಬೇಕು ಎಂಬ ಆಶಯ ನನ್ನದಾಗಿದೆ’ ಎಂದು ಗೊರಿಕ್ ಪ್ರಜಾವಾಣಿ ಜತೆ ಅನಿಸಿಕೆ ಹಂಚಿಕೊಂಡರು. ರಾಮಪ್ರಸಾದ್ ಅಯ್ಯಂಗಾರ್, ದೊಡ್ಡಪಟ್ಟಣಗೆರೆಯ ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.