ಚಿಕ್ಕಮಗಳೂರು: ‘ಸಂಸ್ಕಾರದ ಮೂಲಕ ಶಿಕ್ಷಣ ಕೊಟ್ಟಾಗ ಮಾತ್ರ ಪರಿಪೂರ್ಣ ಶಿಕ್ಷಣವಾಗುತ್ತದೆ. ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಯಲು ಸಹಕಾರಿಯಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅಭಿಪ್ರಾಯಿಸಿದರು.
ಟಿ.ಎಂ.ಎಸ್ ಶಾಲೆಯಲ್ಲಿ ಶನಿವಾರ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಸೇವಾ ಬಳಗದ ಸಹಯೋಗದಲ್ಲಿ ಮಾರುತಿ ಮೆಡಿಕಲ್ಸ್ ಬೆಂಗಳೂರು ಇವರ ವತಿಯಿಂದ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಧರ್ಮ, ಸಂಸ್ಕೃತಿ, ಸಂರಕ್ಷಣೆಗೆ ಇನ್ನೊಬ್ಬರಿಗೆ ಹಾನಿ ಮಾಡದಂತೆ ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸವನ್ನು ತನ್ನದೇ ಆದ ರೀತಿಯಲ್ಲಿ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಅವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕತ್ತಲು ಕತ್ತಲು ಎಂದು ಕೂಗಾಡುವುದರಿಂದ ಬೆಳಕು ಬರುವುದಿಲ್ಲ. ಪುಟ್ಟ ಹಣತೆ ಹಚ್ಚಿದಾಗ ಬೆಳಕು ಕೊಡುತ್ತದೆ. ಹಣತೆಯಿಂದ ಹಣತೆಗಳನ್ನು ಹೆಚ್ಚಿದರೆ ಮತ್ತಷ್ಟು ಬೆಳಕಾಗುತ್ತದೆ ಎಂಬುದಕ್ಕೆ ಉಳ್ಳವರು ಬಡವರಿಗೆ ದಾನವನ್ನು ನೀಡುವ ಮೂಲಕ ನೆರವಾದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇರುವ ಹಾಗೆ ಮತ್ತು ಸಂವಿಧಾನದ ಕುರಿತು ಜಾಗೃತಿ ಮೂಡಿಸುವ, ಪರಿಸರದ ಬಗ್ಗೆ ಅರಿವು ಮೂಡಿಸುವ, ಭೂರಕ್ಷಣೆ ಮಾಡುವ ಮೂಲಕ ಒಳ್ಳೇಯ ಸಂದೇಶ ಕೊಡುವುದನ್ನು ಮಹೇಂದ್ರ ಅವರು ಸದ್ದಿಲ್ಲದೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಯಕಾರ ಹಾಕಿಸಿಕೊಳ್ಳದೆ ತನ್ನ ಪಾಡಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ₹6.5 ಲಕ್ಷ ವೆಚ್ಚದಲ್ಲಿ ನೋಟ್ ಪುಸ್ತಕಗಳನ್ನು ಮಹೇಂದ್ರ ಮನ್ನೋತ್ ನೀಡುತ್ತಿದ್ದಾರೆ ಎಂದರು.
ಕೆಲಸ ಮಾಡಿ ಓಟ್ ಕೇಳುತ್ತೇವೆ. ಓಟ್‌ಗಾಗಿ ಇವರು ಕೆಲಸ ಮಾಡಿಲ್ಲ. ನೋಟ್ ಪುಸ್ತಕ ಕೊಟ್ಟು ಬಡ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಪ್ರಗತಿ ನಿರೀಕ್ಷಿಸಿದ್ದಾರೆ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು. ನೋಟ್ ಪುಸ್ತಕಗಳ ಕೊಡುಗೆ ವಿದ್ಯಾರ್ಥಿಗಳ ಜೀವನಕ್ಕೆ ಮತ್ತು ಶಿಕ್ಷಣಕ್ಕೆ ಆಧಾರವಾಗುತ್ತದೆ ಎಂದು ಸಿ.ಟಿ. ರವಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬಿ.ಎನ್. ಸುಂದ್ರೇಶ್ ವಹಿಸಿದ್ದರು. ದಾನಿಗಳಾದ ಮಹೇಂದ್ರ ಮನ್ನೋತ್, ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಸುಮಿತ್ರ, ಚಂದ್ರೇಗೌಡ, ವಸಂತ ಕುಮಾರ್, ಪುಷ್ಪ, ಚಂದ್ರಯ್ಯ, ದಿನೇಶ್, ರಾಮದಾಸ್, ಅನ್ನಪೂರ್ಣ ಇದ್ದರು.
ಬದಲಾದ ಶೈಕ್ಷಣಿಕ ಪದ್ಧತಿಯಲ್ಲಿ ಸರ್ಕಾರದ ಆದೇಶದಂತೆ ಎಲ್ಲಾ ಕೆಲಸಗಳನ್ನು ಶಿಕ್ಷಕರು ಮಾಡುತ್ತಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ನಮ್ಮ ಮಕ್ಕಳೆಂಬ ಭಾವನೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.-ಗೀತಾ, ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.