
ಶೃಂಗೇರಿ: ಪಟ್ಟಣದ ಸ್ವಾಗತ ಮಂಟಪದ ಸಮೀಪ ಹಾದುಹೋಗಿರುವ ಹೆದ್ದಾರಿಯಲ್ಲಿರುವ ವೀರಪ್ಪಗೌಡ ವೃತ್ತದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಹಾಗೂ ವೃತ್ತದಲ್ಲಿ ಯಾವುದೇ ಮೂರ್ತಿ ಹಾಗೂ ವಿಗ್ರಹ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಸೋಮವಾರ ವೀರಪ್ಪಗೌಡ ಅಭಿಮಾನಿ ಬಳಗದ ಪದಾಧಿಕಾರಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ವೀರಪ್ಪಗೌಡ ಅಭಿಮಾನಿ ಬಳಗದ ಅಧ್ಯಕ್ಷ ಕಾಫಿತೋಟ ಮಲ್ಲಪ್ಪ ಹೆಗ್ಡೆ ಈ ವೇಳೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ರೀತಿಯ ಪುತ್ಥಳಿ ಮತ್ತು ವಿಗ್ರಹ ಸ್ಥಾಪಿಸಬಾರದು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿದೆ. ಆದರೂ ಕೊಪ್ಪ, ಜಯಪುರ ಮತ್ತು ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಪಟ್ಟಣದ ಹೆದ್ದಾರಿಯ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಲು ಅಕ್ರಮ ಕಟ್ಟಡವನ್ನು ಹೇಗೆ ನಿರ್ಮಿಸಲಾಗುತ್ತಿದೆ? ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ನವೀನ್ ಕಿಗ್ಗಾ ಮಾತನಾಡಿ, ‘ಹೆದ್ದಾರಿಯ ಮಧ್ಯದಲ್ಲಿರುವ ಈ ವೃತ್ತವು ಸದ್ಯ ಅಪಘಾತದ ವಲಯವಾಗಿ ಮಾರ್ಪಟ್ಟಿದೆ. ಈ ವೃತ್ತದ ಮಧ್ಯದಲ್ಲಿ ಆರಂಭಿಸಿದ್ದ ಅಕ್ರಮವಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಈಗ ಮತ್ತೇ ಕಾಮಗಾರಿ ಆರಂಭಿಸಿದ್ದಾರೆ. ಕೂಡಲೇ ನಿಲ್ಲಿಸಬೇಕು. ತೀರ್ಥಹಳ್ಳಿಯಿಂದ ಬರುವ ರಾಜ್ಯ ಹೆದ್ದಾರಿ. ಜಯಪುರ ಕಡೆಯಿಂದ ಬರುವ ಹೆದ್ದಾರಿ ಮಧ್ಯದಲ್ಲಿ ಪ್ರತಿಮೆ ನಿರ್ಮಿಸಲು ಕಲ್ಲು ಕಟ್ಟಡ ಕಟ್ಟಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ವೃತ್ತದಲ್ಲಿ ನಾಲ್ಕು ದಿಕ್ಕುಗಳಲ್ಲಿ ಬರುವ ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ. ವೃತ್ತವನ್ನು ಇನ್ನಷ್ಟು ಅಗಲ ಮಾಡಿ ಸಿಗ್ನಲ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಮಾರನಕೊಡಿಗೆ ನಟರಾಜ್ ಮಾತನಾಡಿ, ‘ಶೃಂಗೇರಿಯ ಸ್ವಾಗತ ಮಂಟಪದ ಸಮೀಪದ ಇರುವ ವೃತ್ತಕ್ಕೆ 50 ವರ್ಷಗಳಿಂದ ಕೆ.ಎನ್. ವೀರಪ್ಪಗೌಡ ವೃತ್ತ ಎಂದು ಕರೆಯಲಾಗುತ್ತಿದೆ. 6,800 ಗೇಣಿದಾರರು ಭೂ ಮಾಲೀಕರನ್ನಾಗಿ ಮಾಡಿದ ಕೆ.ಎನ್. ವೀರಪ್ಪಗೌಡರ ಹೆಸರು ವೃತ್ತದಲ್ಲಿದೆ. ಆದರಿಂದ ಇಲ್ಲಿ ಯಾವುದೇ ಪ್ರತಿಮೆ ನಿರ್ಮಿಸುವುದು ಬೇಡ. ಪ್ರಸ್ತುತ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ಕೂಡಲೇ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಯ ಶೃಂಗೇರಿಯ ವೀರಪ್ಪಗೌಡ ವೃತ್ತದಲ್ಲಿ ಖಾಸಗಿ ವ್ಯಕ್ತಿಗಳು ಪ್ರತಿಮೆ ಸ್ಥಾಪನೆ ಮಾಡಲು ಕಾಮಗಾರಿಯನ್ನು ನಡೆಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ. ಹಗಲು ಹೊತ್ತಿನಲ್ಲೇ ಅಕ್ರಮ ಕಟ್ಟಡ ನಿರ್ಮಿಸುವಾಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಭರತ್ ಗಿಣಿಕಲ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪರಿಸರ ಹೋರಟಗಾರ ಕಲ್ಕುಳಿ ವಿಠಲ್ ಹೆಗ್ಡೆ, ದಲಿತ ಸಂಘಟನೆಯ ಕೆ.ಎಂ.ಗೋಪಾಲ್, ಮುಖಂಡರಾದ ಕಚ್ಚೋಡಿ ಶ್ರೀನಿವಾಸ್, ದ್ಯಾವಂಟು ರಾಜೇಶ್, ಜಗದೀಶ್ ಕಣದಮನೆ, ಅನಿಲ್ ಹೊಸಕೊಪ್ಪ, ಕಲ್ಕುಳಿ ಜಗದೀಶ್ ಹೆಗ್ಡೆ, ವೆಂಕಟೇಶ್ ಕೆ.ಸಿ, ಶಿವಮೂರ್ತಿ, ಅಜಿತ್ ಅಣ್ಕುಳಿ, ಹೆಚ್ಗುಂದ ವೆಂಕಟೇಶ್, ನಾಗೇಶ್ ಅಡ್ಡಗದ್ದೆ, ಸಂತೋಷ್ ಕಾಳ್ಯ ಇದ್ದರು.
ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸದಿದ್ದರೆ ಪಕ್ಕದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಿ ಪ್ರತಿಮೆ ಸ್ಥಾಪಿಸುತ್ತೇವೆ. ಇಲ್ಲಿ ಯಾವುದೇ ಅಕ್ರಮವಾದ ಕಟ್ಟಡ ನಿರ್ಮಾಣ ಮಾಡಬಾರದು. ಭರತ್ ಗಿಣಿಕಲ್ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.