ನರಸಿಂಹರಾಜಪುರ: ‘ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀಶಂಕರ ಭಾರತೀ ಸಭಾಭವನಕ್ಕೆ ಶೃಂಗೇರಿ ಶಾರದಾ ಪೀಠದ ವೀಧುಶೇಖರ ಭಾರತೀ ಸ್ವಾಮೀಜಿ ಅವರು ₹7.50 ಲಕ್ಷ ನೆರವು ನೀಡಿದ್ದಾರೆ’ ಎಂದು ಶಂಕರ ಭಾರತೀ ಟ್ರಸ್ಟ್‌ನ ಅಧ್ಯಕ್ಷ ಎಂ.ಆರ್.ರವಿಶಂಕರ್ ತಿಳಿಸಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಈ ಹಿಂದೆ ಗಾಯತ್ರಿ ದೇವಸ್ಥಾನದ ಪ್ರತಿಷ್ಠಾಪನಾ ಕುಂಭಾಭಿಷೇಕದ ಸಂದರ್ಭದಲ್ಲಿ ಶ್ರೀಶಂಕರ ಭಾರತೀ ಸಭಾಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ ವೀಧುಶೇಖರ ಭಾರತೀ ಸ್ವಾಮೀಜಿ, ಸಭಾಭವನದ ನಿರ್ಮಾಣದ ಪ್ರಾರಂಭದಲ್ಲಿ ಪೀಠದ ವತಿಯಿಂದ ಶಾರದಾ ಚಂದ್ರಮೌಳೀಶ್ವರರ ಹಾಗೂ ಭಾರತೀ ತೀರ್ಥ ಶ್ರೀಗಳ ಆಶೀರ್ವಾದದೊಂದಿಗೆ ಶಾರದಾ ಪ್ರಸಾದ ರೂಪದಲ್ಲಿ ಧನಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶೃಂಗೇರಿಯ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಟ್ರಸ್ಟ್‌ಗೆ ₹7.50 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು. ಅಲ್ಲದೇ, ಉದ್ದೇಶಿತ ಕಟ್ಟಡದ ನಿರ್ಮಾಣಕ್ಕೆ ಜಗನ್ಮಾತೆಯ ಪ್ರೇರಣೆಯಿಂದ ಎಲ್ಲಾ ಜನರ ಸಹಕಾರ, ಧನಸಹಾಯವು ದೊರೆಯುವಂತಾಗಲಿ ಮತ್ತು ಭವ್ಯ ಕಟ್ಟಡವು ಶೀಘ್ರವಾಗಿ, ನಿರ್ವಿಘ್ನವಾಗಿ ಸಂಪೂರ್ಣಗೊಂಡು ಲೋಕಾರ್ಪಣೆಯಾಗಲೆಂದು ಆಶೀರ್ವದಿಸಿದರು’ ಎಂದು ಹೇಳಿದರು.
ಶಂಕರ ಭಾರತೀ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎನ್. ಅನಂತಪದ್ಮನಾಭ, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಆರ್. ಗಣೇಶ್, ಉಪಾಧ್ಯಕ್ಷೆ ಅನ್ನಪೂರ್ಣ ಗೋಪಾಲಕೃಷ್ಣ, ಕಾರ್ಯದರ್ಶಿ ಎಸ್.ಎನ್. ಸುರೇಶ್, ಗೌರವಾಧ್ಯಕ್ಷ ಹಾಗೂ ಟ್ರಸ್ಟಿ ಬಿ.ಕೆ. ನಾರಾಯಣ ಸ್ವಾಮಿ, ಖಜಾಂಚಿ ಎ.ಎಸ್. ಅಭಿಷೇಕ್, ಸದಸ್ಯರಾದ ನಾಗಲಕ್ಷ್ಮೀ ರವಿಶಂಕರ್, ಗೀತಾ ರವಿಶಂಕರ್, ಶ್ರೀವಲ್ಲಿ ಸುರೇಶ್, ಟ್ರಸ್ಟ್ ಸದಸ್ಯ ರಮೇಶ್ ಚಂದ್ರ ಶರ್ಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.