ADVERTISEMENT

ಸದಸ್ಯರ ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿ: ಶಾಸಕ ಕೆ.ಎಸ್.ಆನಂದ್

ಬಳ್ಳೇಕೆರೆ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:10 IST
Last Updated 30 ಜುಲೈ 2025, 6:10 IST
ಕಡೂರು ತಾಲೂಕು ಬಳ್ಳೇಕೆರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕ ಕೆ.ಎಸ್.ಆನಂದ್ ಸೋಮವಾರ ಲೋಕಾರ್ಪಣೆ ಮಾಡಿದರು
ಕಡೂರು ತಾಲೂಕು ಬಳ್ಳೇಕೆರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕ ಕೆ.ಎಸ್.ಆನಂದ್ ಸೋಮವಾರ ಲೋಕಾರ್ಪಣೆ ಮಾಡಿದರು   

ಕಡೂರು: ‘ಗ್ರಾಮ ಪಂಚಾಯಿತಿ ಸದಸ್ಯರು ಜನರ ಒಳಿತಿಗಾಗಿ ಉತ್ತಮ ಮನಸ್ಥಿತಿಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದರೆ ಹಳ್ಳಿಗಳ ಅಭಿವೃದ್ಧಿ ಸಾಧ್ಯ’ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಸೋಮವಾರ ₹ 45 ಲಕ್ಷ ವೆಚ್ಚದಲ್ಲಿ ನೂತನಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ  49 ಗ್ರಾಮ ಪಂಚಾಯಿತಿಗಳು ಇದ್ದು, ಅದರಲ್ಲಿ ಬಳ್ಳೇಕೆರೆ ಗ್ರಾಮ ಪಂಚಾಯಿತಿ ಒಂದು ಮಾದರಿ ಪಂಚಾಯಿತಿಯಾಗಿದೆ. ಇಲ್ಲಿ 8 ಸದಸ್ಯರಿದ್ದು, ಅವರ ಹೊಂದಾಣಿಕೆಯ ಫಲವಾಗಿ ಇಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಸುಮಾರು ₹50 ಲಕ್ಷ ವೆಚ್ಚವಾಗಿದ್ದು ಸರ್ಕಾರದ ಅನುದಾನ ₹ 45 ಲಕ್ಷಗಳಾಗಿದೆ. ಪಂಚಾಯಿತಿಗೆ ಹೊಸರೂಪ ನೀಡಲು ಶ್ರಮಿಸಿದ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರನ್ನು ಅಭಿನಂದಿಸಿದರು.

ADVERTISEMENT

ಕ್ಷೇತ್ರದ 498 ಗ್ರಾಮಗಳ ಪೈಕಿ 321 ಗ್ರಾಮಗಳು ಮಾತ್ರ ಕಂದಾಯ ಗ್ರಾಮಗಳಾಗಿವೆ. ಆದ್ದರಿಂದ ಈ ಗ್ರಾಮಗಳಲ್ಲಿ ಮಾತ್ರ ಇ-ಸ್ವತ್ತು ನೀಡಲು ಸಾಧ್ಯವಾಗಿತ್ತು. ಕಳೆದ 2 ವರ್ಷದ ಅವಧಿಯಲ್ಲಿ ಬಾಕಿ ಇದ್ದ ಕಂದಾಯ ಗ್ರಾಮಗಳ ಪೈಕಿ 71 ಗ್ರಾಮಗಳನ್ನು ಸರ್ಕಾರದ ಗಮನಕ್ಕೆ ತಂದು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿದ್ದೇವೆ. ಬಾಕಿ ಇರುವ ಹಳ್ಳಿಗಳನ್ನು ಮುಂದಿನ ದಿನಗಳಲ್ಲಿ ಕಂದಾಯ ಗ್ರಾಮಗಳಾಗಿ ಮಾಡಿ, ಇ-ಸ್ವತ್ತು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಾಲಯದ ಬಿ.ಎಂ.ಕೆಂಚೇಗೌಡ ಮಾತನಾಡಿ, ಗ್ರಾಮದ ಸುತ್ತಮುತ್ತಲ ಜನರ ಒಳಿತಿಗಾಗಿ ದೇವಾಲಯದ 3 ಎಕರೆ ಜಾಗವನ್ನು ಸರ್ಕಾರಕ್ಕೆ ನೀಡಿ, ಅದರಲ್ಲಿ ಆಸ್ಪತ್ರೆ ಮತ್ತು ನೂತನ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ನೀಡಿ ಗ್ರಾಮಸ್ಥರು ಸಹಕರಿಸಿದ್ದಾರೆ ಎಂದರು.

ತಾಲ್ಲೂಕು ಇಒ ಸಿ.ಆರ್.ಪ್ರವೀಣ್, ಬಳ್ಳೇಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಶ್ವನಾಥ್, ಶಶಿಧರ್, ವಿಜಯಕುಮಾರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಳ್ಳೇಕೆರೆ ಗೊಲ್ಲರಹಟ್ಟಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ತಾಲ್ಲೂಕಿನಲ್ಲಿ 26ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿದ್ದು, ಜನಪ್ರತಿನಿಧಿಗಳು ಇವುಗಳತ್ತ ನಿರ್ಲಕ್ಷ್ಯ ಮಾಡಿದ್ದೇ ಹೆಚ್ಚು. ತಮ್ಮ ಅವಧಿಯಲ್ಲಿ ಪ್ರತಿ ಗೊಲ್ಲರಹಟ್ಟಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ಸಮುದಾಯ ಭವನ, ಕೂಸಿನಮನೆ ಮೊದಲಾದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬಳ್ಳೇಕೆರೆ ಗೊಲ್ಲರಹಟ್ಟಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಒದಗಿಸಿರುವ ಅನುದಾನ ಕಡಿಮೆ ಎನ್ನುವುದು ತಿಳಿದಿದ್ದು, ಇನ್ನೂ ₹25 ಲಕ್ಷ ಇದೆ. ಆದರೆ ಶಕ್ತಿಮೀರಿ ಎಷ್ಟು ಸಾಧ್ಯವೋ ಅಷ್ಟೂ ಅನುದಾನ ಒದಗಿಸಲಾಗುವುದು. ಜತೆಗೆ ಜುಂಜಪ್ಪ ದೇವಾಲಯ ನಿರ್ಮಾಣಕ್ಕೆ ಸಂಪೂರ್ಣ ನೆರವಿನ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ರೇಣುಕಪ್ಪ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಬಂಜೇನಹಳ್ಳಿ ಬಿ.ಆರ್.ರಾಜಪ್ಪ, ಪೂರ್ಣಿಮಾ, ಸಿ.ಸೋಮಶೇಖರ್, ಶೇಖರಪ್ಪ, ಚಂದ್ರಮ್ಮ, ಸತ್ಯ.ಡಿ, ದೇವಾಲಯ ಸಮಿತಿಯ ಅಪ್ಪೇಗೌಡ್ರು, ಪಿಡಿಒ ದಯಾನಂದ್, ಓಂಕಾರಮೂರ್ತಿ, ಎಂಜಿನಿಯರ್ ಹರಿರಾಂ, ಭೋಜರಾಜ್, ಪುಟ್ಟಸ್ವಾಮಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Highlights - ತಾಲ್ಲೂಕಿನಲ್ಲಿ 60 ಗ್ರಾಮಗಳು ಕಂದಾಯ ಗ್ರಾಮಗಳಾಗಬೇಕು 15ಸಾವಿರ ಆಸ್ತಿಗಳಿಗೆ ಇ-ಸ್ವತ್ತು ಲಭ್ಯವಾಗಿಲ್ಲ 19 ಪಂಚಾಯಿತಿ ಕಟ್ಟಡಗಳ ಭೂಮಿಪೂಜೆ, ಉದ್ಘಾಟನೆ ಭಾಗ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.