ADVERTISEMENT

‘ಕಾನೂನು ಅರಿವು ಬೆಳೆಸಿಕೊಳ್ಳಿ’

ಅರಣ್ಯ ಹಕ್ಕು ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಗಾರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:18 IST
Last Updated 31 ಜುಲೈ 2022, 5:18 IST
ಮೂಡಿಗೆರೆ ತಾಲ್ಲೂಕು ಕುಂದೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಯೋಜಕ ಡೇವಿಡ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ. ವಿಜೇಂದ್ರ, ಸದಸ್ಯರಾದ ಸಂತೋಷ್, ಜಯಂತಿ, ಸುನೀತಾ, ಪೂವಪ್ಪ ಇದ್ದರು.
ಮೂಡಿಗೆರೆ ತಾಲ್ಲೂಕು ಕುಂದೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಯೋಜಕ ಡೇವಿಡ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ. ವಿಜೇಂದ್ರ, ಸದಸ್ಯರಾದ ಸಂತೋಷ್, ಜಯಂತಿ, ಸುನೀತಾ, ಪೂವಪ್ಪ ಇದ್ದರು.   

ಮೂಡಿಗೆರೆ: ಅರಣ್ಯ ವಾಸಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಅರಣ್ಯ ವಾಸಿಗಳು ಕಾನೂನುಗಳ ಸಮಗ್ರ ಮಾಹಿತಿ ಹೊಂದಬೇಕು ಎಂದು ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಯೋಜಕ ಡೇವಿಡ್ ತಿಳಿಸಿದರು.

ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಅರಣ್ಯ ಹಕ್ಕು ಸಮಿತಿ ಸದಸ್ಯರಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಕಾನೂನಿನ ಅರಿವಿನ ಕೊರತೆಯಿಂದ ದೌರ್ಜನ್ಯಗಳು ಹೆಚ್ಚಾಗುತ್ತವೆ. ಅರಣ್ಯ ವಾಸಿಗಳಲ್ಲಿ, ಅನುಸೂಚಿತ ಪಾರಂಪರಿಕ ಅರಣ್ಯವಾಸಿಗಳು ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳು ಎಂಬ ಎರಡು ವಿಭಾಗಗಳಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಐದು ದಾಖಲೆಗಳ ಮೂಲಕ ಅರಣ್ಯ ಹಕ್ಕನ್ನು ಪಡೆಯಬಹುದು. ಇತರೆ ಪಾರಂಪರಿಕ ಅರಣ್ಯ ವಾಸಿಗಳು ಮೂರು ತಲೆಮಾರು ಅರಣ್ಯದಲ್ಲಿ ವಾಸಿಸಿರುವ ದಾಖಲೆಗಳನ್ನು ನೀಡಿ ತಮ್ಮ ಹಕ್ಕನ್ನು ರುಜುವಾತು ಮಾಡಬಹುದು. 1921ರಲ್ಲಿ ನಡೆದ ಜನಗಣತಿಯ ಮಾಹಿತಿಯು ಮೈಸೂರು ಗೆಜೆಟ್‌ನಲ್ಲಿ ದಾಖಲಾಗಿದ್ದು, ಆ ದಾಖಲಾತಿಯ ಮೂಲಕ ಹಕ್ಕನ್ನು ರುಜುವಾತು ಮಾಡಲು ಸಾಧ್ಯವಿದೆ’ ಎಂದರು.

ADVERTISEMENT

ಭೂ ಹಕ್ಕುದಾರರ ವೇದಿಕೆ ತಾಲ್ಲೂಕು ಸಂಚಾಲಕ ಪೂವಪ್ಪ ಮಾತನಾಡಿ, ‘ಈಗಾಗಲೇ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಸಲ್ಲಿರುವ ಭೂ ರಹಿತ ಕುಟುಂಬಗಳು ಸಲ್ಲಿಸಿರುವ ಅರ್ಜಿಯು ಸಮಿತಿಯ ಮುಂದೆ ಬಂದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಭೂಮಿಯ ಹಕ್ಕನ್ನು ಪಡೆದುಕೊಳ್ಳಬೇಕು. ಪಾರಂಪರಿಕ ಅರಣ್ಯ ವಾಸಿಗಳು ಅರಣ್ಯ ಉತ್ಪನ್ನಗಳನ್ನು ಕಾನೂನಿನಡಿಯಲ್ಲಿ ಬಳಸಿಕೊಳ್ಳಬಹುದಾದ ಮಾರ್ಗಗಳ ಬಗ್ಗೆ ಅರಿವು ಹೊಂದಿ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ. ವಿಜೇಂದ್ರ ಮಾತನಾಡಿ, ‘ತಿರಸ್ಕೃತವಾಗಿರುವ ಅರಣ್ಯ ಹಕ್ಕು ಅರ್ಜಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅರಣ್ಯ ವಾಸಿಗಳ ಇರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವಂತೆ ಇಲಾಖೆಗಳಿಗೆ ಸಂಘಟಿತರಾಗಿ ಒತ್ತಾಯಿಸಬೇಕು’ ಎಂದರು.

ಅರಣ್ಯ ಹಕ್ಕುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಜಯಂತಿ, ಸುನೀತಾ, ಪಿಡಿಒ ವಾಸುದೇವ್, ಪ್ರೇಮಕುಮಾರ್, ಉಮೇಶ್, ಪ್ರವೀಣ್, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಪೂರ್ಣಾನಂದ, ವಸಂತ್, ಕಳಸ ಸಂಚಾಲಕ ನಮ್ರತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.